ಮುಂದುವರೆದ ಅತೃಪ್ತರ ಆಟ, ಬಂಡಾಯ ಶಮನಗೊಳಿಸಲು ಸಂಸದರು ಕಣಕ್ಕೆ

Atruptaru-Congress

ಬೆಂಗಳೂರು, ಜೂ. 10-ಮೈತ್ರಿ ಸರ್ಕಾರದಲ್ಲಿ ಆರಂಭಗೊಂಡಿರುವ ಭಿನ್ನಮತ ದಿನದಿಂದ ದಿನಕ್ಕೆ ಉಲ್ಭಣಗೊಳ್ಳುತ್ತಲೇ ಇದ್ದು, ಅದನ್ನು ಶಮನಮಾಡಲು ನಡೆಯುತ್ತಿರುವ ಪ್ರಯತ್ನಗಳು ವಿಫಲವಾಗುತ್ತಿವೆ.   ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್, ರೋಷನ್‍ಬೇಗ್, ಎಚ್.ಕೆ.ಪಾಟೀಲ್ ಸೇರಿದಂತೆ ಪ್ರತಿಯೊಬ್ಬ ನಾಯಕರೂ ತಮ್ಮ ತಮ್ಮ ಪ್ರತ್ಯೇಕ ಬಣಗಳನ್ನು ರಚಿಸಿಕೊಂಡು ಭಿನ್ನಮತೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಅವರನ್ನು ನಿಯಂತ್ರಿಸಲು ಕಾಂಗ್ರೆಸ್ ನಾಯಕರು ಪರದಾಡುತ್ತಿದ್ದಾರೆ. ಅಂತಿಮವಾಗಿ ಪರ್ಯಾಯ ನಾಯಕತ್ವದ ಬೆದರಿಕೆ ಮೂಲಕ ಭಿನ್ನಮತೀಯ ನಾಯಕರನ್ನು ಮಟ್ಟ ಹಾಕುವ ಎಚ್ಚರಿಕೆಯನ್ನು ರವಾನಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ನಾಳೆ ರಾಜ್ಯ ಸಂಸದರ ಸಭೆ ಕರೆಯಲಿದ್ದು, ಬಂಡಾಯಗಾರರ ಶಮನಕ್ಕೆ ಸಂಸದರನ್ನು ಕಣಕ್ಕಿಳಿಸುತ್ತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸಚಿವರುಗಳಷ್ಟೇ ಪ್ರಮುಖ ಪಾತ್ರವನ್ನು ಸಂಸದರೂ ವಹಿಸಿದ್ದರು. ಬಹಳಷ್ಟು ಜನ ಶಾಸಕರ ಗೆಲುವಿನಲ್ಲಿ ಸಂಸದರ ಪಾತ್ರವಿದೆ. ಹಾಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಶಾಸಕರ ಪಾತ್ರ ಅಷ್ಟೇ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರನ್ನು ಕಣಕ್ಕಿಳಿಸಿ ಮನವೊಲಿಸುವ ಪ್ರಯತ್ನವನ್ನು ಮಾಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ.

ಈಗಾಗಲೇ ರಾಜ್ಯ ನಾಯಕರ ಕೈ ಮೀರಿ ಎಂ.ಬಿ.ಪಾಟೀಲ್ ಅವರ ಬಂಡಾಯ ದೆಹಲಿ ನಾಯಕರ ಅಂಗಳ ತಲುಪಿದೆ. ಖುದ್ದು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮಾತುಕತೆ ನಡೆಸಿದರೂ ಎಂ.ಬಿ.ಪಾಟೀಲ್ ಸಮಾಧಾನಗೊಂಡಂತೆ ಕಾಣುತ್ತಿಲ್ಲ. ನಿನ್ನೆ ದೆಹಲಿಯಿಂದ ಬಂದಂತಹ ಎಂ.ಬಿ.ಪಾಟೀಲ್ ತಮ್ಮ ಜೊತೆ ಗುರುತಿಸಿಕೊಂಡಿರುವ ಕೆಲವು ಶಾಸಕರ ಸಭೆ ಕರೆದಿದ್ದಾರೆ. ಅಲ್ಲಿ ಚರ್ಚೆ ಮಾಡಿ ಹೈಕಮಾಂಡ್‍ನ ಭರವಸೆಗಳನ್ನು ಮನದಟ್ಟು ಮಾಡಿ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಪಾಟೀಲ್ ಮುಂದಾಗಿದ್ದಾರೆ.

ಮೂಲಗಳ ಪ್ರಕಾರ ಎಂ.ಬಿ.ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಅವರ ಬೆಂಬಲಿಗರ ಬಣದಲ್ಲಿ ಸುಮಾರು ಐದಾರು ಮಂದಿ ಪ್ರಭಾವಿಗಳಿದ್ದು, ಅವರೆಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಹೈಕಮಾಂಡ್ ಮಾನ್ಯ ಮಾಡಿಲ್ಲ. ಹೀಗಾಗಿ ಮತ್ತೊಂದು ಹೊಸ ರೀತಿಯ ಬಂಡಾಯ ಭುಗಿಲೇಳುವ ಆತಂಕ ಎದುರಾಗಿದೆ.ಎಂ.ಬಿ.ಪಾಟೀಲ್ ಅವರಿಗೆ ಸ್ಥಾನ ಮಾನ ಸಿಕ್ಕರೆ ಶಾಮನೂರು ಶಿವಶಂಕರಪ್ಪ, ಈಶ್ವರ್ ಖಂಡ್ರೆ ಅವರು ಭುಗಿಲೇಳುವ ಆತಂಕ ಇದೆ. ಹೀಗಾಗಿ ಹೈಕಮಾಂಡ್ ಅಳೆದು ತೂಗಿ ಅತ್ಯಂತ ಎಚ್ಚರಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಮುಂದಾಗಿದೆ.

ಸುಮಾರು 30ಕ್ಕೂ ಹೆಚ್ಚು ಮಂದಿ ಅತೃಪ್ತ ಶಾಸಕರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ. ಸಂಪುಟದಲ್ಲಿ ಖಾಲಿ ಇರುವುದು ಕೇವಲ 6 ಸ್ಥಾನಗಳು ಮಾತ್ರ. ಆದರೆ ಇಷ್ಟು ಜನ ಅತೃಪ್ತರನ್ನು ಹೇಗೆ ಮನವೊಲಿಸಲು ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ. ಇದರಿಂದ ಪರಮೇಶ್ವರ್ ಸಂಸದರು ಅಖಾಡಕ್ಕಿಳಿಸುತ್ತಿದ್ದಾರೆ. ನಾಳೆ ಕೆಪಿಸಿಸಿಯಲ್ಲಿ ಸಂಸದರು ಮತ್ತು ರಾಜ್ಯಸಭಾ ಸದಸ್ಯರ ಸಭೆ ಕರೆದಿದ್ದಾರೆ. ಈಗಾಗಲೇ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಮತ್ತಿತರ ಪ್ರಭಾವಿ ಸಚಿವರು ಅಖಾಡಕ್ಕಿಳಿದು ಸಂಧಾನ ಮಾತುಕತೆಗಳನ್ನು ನಡೆಸಿದ್ದಾರೆ.

Sri Raghav

Admin