ನವದೆಹಲಿ, ಜ.5- ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ತನ್ನ ಬೃಹತ್ ರ‍್ಯಾಲಿಗಳು, ಮ್ಯಾರಥಾನ್‍ಗಳು ಸೇರಿದಂತೆ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಇಂದು ನಿರ್ಧರಿಸಿದೆ.
ಎಐಸಿಸಿಯ ಹಿರಿಯ ಧುರೀಣರು ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರೊಂದಿಗೆ ಮಾತನಾಡಿದ್ದು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ನಡೆಯಲಿರುವ ಇತರ ರಾಜ್ಯಗಳಾದ ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರಗಳಲ್ಲೂ ಪ್ರದೇಶ ಕಾಂಗ್ರೆಸ್ ಸಮಿತಿ (ಐಸಿಸಿ)ಗಳು ಶೀಘ್ರದಲ್ಲೇ ಇದೇ ನಿರ್ಧಾರ ತೆಗೆದುಕೊಳ್ಳಲಿವೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
