ಬಾಗಲಕೋಟೆ,ಜ.18- ಮುಂದಿನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಪಟ್ಟಂತೆ ಫೆಬ್ರವರಿ ಎರಡರಂದು ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಾಲಗಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಚುನಾವಣಾ ಸಮಿತಿಗೂ ಮೊದಲೇ ಪ್ರತಿ ಜಿಲ್ಲೆಗೆ ನಿಯೋಗ ಕಳುಹಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಪಡೆಯಲಾಗಿದೆ. ಹುರಿಯಾಳುಗಳ ಆಯ್ಕೆ ಕಾಂಗ್ರೆಸ್ ನಮ್ಮದೇ ಆದ ಮಾದರಿ ಅನುಸರಿಸುತ್ತೇವೆ. ಗುಜರಾತ್ ಮಾದರಿಯನ್ನು ಬೇಕಿದ್ದರೆ ಬಿಜೆಪಿಯವರು ಅನುಸರಿಸಲಿ, ನಾವು ಕರ್ನಾಟಕ ಮಾದರಿಯನ್ನೇ ಪಾಲನೆ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಬಾಕಿ ಇರುವ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಐದು ವರ್ಷದಲ್ಲಿ ಎರಡು ಲಕ್ಷ ಕೋಟಿ ರೂಪಾಯಿಗಳನ್ನು ಒದಗಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ. ಅದಕ್ಕೆ ಬದ್ಧವಾಗಿದೆ ಎಂದರು.
ರಾಜ್ಯದ ವಿಧಾನಸಭೆ ಚುನಾವಣೆ ನೇರವಾಗಿ ಕೇಂದ್ರ ನಾಯಕರಾದ ಪ್ರಧಾನಮಂತ್ರಿ ನೇತೃತ್ವದಲ್ಲಿ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತಾ ಶಾ ಹೇಳಿದ್ದಾರೆ. ಅದರ ಅರ್ಥ ರಾಜ್ಯದಲ್ಲಿ ಆಡಳಿತ ವಿಫಲವಾಗಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಎಲ್ಲಾ ನಾಯಕರು ವಿಫಲರಾಗಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಒಂದೇ ಕ್ಷೇತ್ರದಲ್ಲಿ ಸ್ಪರ್ಧಿಸಲಿದ್ದಾರೆ ಸಿದ್ದರಾಮಯ್ಯ
ಮೀಸಲಾತಿ ವಿಷಯದಲ್ಲಿ ಬಿಜೆಪಿ ಸರ್ಕಾರ ಗೊಂದಲ ಹುಟ್ಟು ಹಾಕಿದೆ. ರಾಜ್ಯ ಸರ್ಕಾರದ ಮೀಸಲಾತಿ ಪ್ರಸ್ತಾವನೆಯನ್ನು ಈಗಾಗಲೇ ಪಂಚಮಸಾಲಿ ಮತ್ತು ಒಕ್ಕಲಿಗ ಸಮುದಾಯ ತಿರಸ್ಕರಿಸಿವೆ. ರಾಜ್ಯ ಸರ್ಕಾರ ಆದೇಶದಕ್ಕೂ ಮೊದಲೇ ಬಿಜೆಪಿಯವರೇ ತಮಗೆ ಬೇಕಾದವರ ಕಡೆಯಿಂದ ನ್ಯಾಯಾಲಯಕ್ಕೆ ಅರ್ಜಿ ಹಾಕಿಸಿದ್ದಾರೆ. ಇನ್ನೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಪಟ್ಟಂತೆಯೂ ದಾರಿ ತಪ್ಪಿಸುವ ಯತ್ನ ನಡೆಸಿದೆ ಎಂದು ದೂರಿದರು.
ಪ್ರಜಾಧ್ವನಿಯಾತ್ರೆಯಲ್ಲಿ ಜನರ ನೋವುಗಳಿಗೆ ಧ್ವನಿಯಾಗಬೇಕು ಎಂಬ ಕಾರಣಕ್ಕೆ ಜಿಲ್ಲಾ ಕೇಂದ್ರಗಳಲ್ಲಿ ಯಾತ್ರೆ ನಡೆಸುತ್ತಿದ್ದೇವೆ. ಚುನಾವಣೆಗೂ ಮೊದಲು ಸಿದ್ದರಾಮಯ್ಯ ಮತ್ತು ನಾನು ಎರಡು ತಂಡಗಳನ್ನು ರಚಿಸಿಕೊಂಡು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುತ್ತೇವೆ ಎಂದರು.
ಯಾತ್ರೆಯಲ್ಲಿ ಬೆಲೆ ಏರಿಕೆ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ಚರ್ಚೆಸಲಾಗುತ್ತಿದೆ. ಆರ್ಥಿಕ ಸಮಸ್ಯೆಯಿಂದ ಸಂಕಷ್ಟಕ್ಕಿಡಾದ ಕುಟುಂಬದ ಮಹಿಳೆಗೆ ತಿಂಗಳಿಗೆ 2 ಸಾವಿರ ರೂಪಾಯಿಯಂತೆ ವರ್ಷಕ್ಕೆ 24 ಸಾವಿರ ರೂಪಾಯಿ ನೀಡಲಾಗುತ್ತದೆ. ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಘೋಷಣೆ ಮಾಡಲಾಗಿದೆ.
ಇದರಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 18 ಸಾವಿರ ರೂಪಾಯಿ ಆರ್ಥಿಕ ನೆರವು ಸಿಕ್ಕಂತಾಗುತ್ತದೆ. ಕಾಂಗ್ರೆಸ್ ನುಡಿದಂತೆ ನಡೆಯುತ್ತೇವೆ. ಕೆಲವರು ಟೀಕೆ ಟಿಪ್ಪಣಿ ಮಾಡುತ್ತಾರೆ. ಈ ಹಿಂದೆ ನಾನು ವಿದ್ಯುತ್ ಸಚಿವನಾಗಿದ್ದಾಗ 10 ಸಾವಿರ ಮೇಗಾವ್ಯಾಟ್ ಇದ್ದ ಉತ್ಪಾದನೆಯನ್ನು 20 ಸಾವಿರ ಮೇಗಾವ್ಯಾಟ್ಗೆ ಹೆಚ್ಚಿಸಿದ್ದೆ.
ಉಚಿತ ವಿದ್ಯುತ್ ಹೇಗೆ ಕೊಡುತ್ತಾರೆ ಎಂದು ಪ್ರಶ್ನೆ ಮಾಡುವವರ ಜೊತೆ ನಾನು ಬಹಿರಂಗ ಚರ್ಚೆಗೆ ಸಿದ್ಧ. ಸಚಿವ ಆರ್.ಅಶೋಕ್, ವಿದ್ಯುತ್ ಸಚಿವ ಸುನೀಲ್ ಕುಮಾರ್ ಸೇರಿದಂತೆ ಯಾರ ಜೊತೆಯಲ್ಲಾದರೂ ಚರ್ಚೆಗೆ ಸಿದ್ಧನಿದ್ದೇನೆ ಎಂದರು.
#Congress. #Candidates, #AssembyElection2023,