ಆಯ್ಕೆ ಸಮಿತಿ ಮಹತ್ವದ ಸಭೆ, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ

Social Share

ಬೆಂಗಳೂರು,ಫೆ.2- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಗೆ ಕಾಂಗ್ರೆಸ್ ಚುನಾವಣಾ ಸಮಿತಿಯ ಸಭೆ ಇಂದು ಬೆಂಗಳೂರಿನಲ್ಲಿ ನಡೆದಿದ್ದು, ಸುಮಾರು 150 ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಚುನಾವಣಾ ಸಮಿತಿಯ ಎಲ್ಲಾ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ಚುನಾವಣಾ ಪೂರ್ವದಲ್ಲಿ ನಡೆದ ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪರವಾಗಿರುವುದರಿಂದ ಉಬ್ಬಿ ಹೋಗಿರುವ ಕೈ ನಾಯಕರು ಈಗಾಗಲೇ ಗೆಲುವಿನ ಮನಸ್ಥಿತಿಯಲ್ಲಿದ್ದು, 130ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಏಕ ವ್ಯಕ್ತಿಯ ಹೆಸರನ್ನು ಹೈಕಮಾಂಡ್‍ಗೆ ಶಿಫಾರಸ್ಸು ಮಾಡಲಿದ್ದಾರೆ.

ಇಂದಿನ ಚುನಾವಣಾ ಸಮಿತಿ ಸಭೆಗೂ ಪೂರ್ವಭಾವಿಯಾಗಿ ರಣದೀಪ್ ಸಿಂಗ್ ಸುರ್ಜೇವಾಲ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಅವರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಚುನಾವಣಾ ಸಮಿತಿ ಸಭೆ ಬಳಿಕವೂ ಮತ್ತೊಂದು ಸಮಾಲೋಚನೆ ನಡೆಸಿ ಪಟ್ಟಿಯನ್ನು ಅಖೈರುಗೊಳಿಸಿ ಹೈಕಮಾಂಡ್‍ಗೆ ಕಳುಹಿಸುವ ಸಾಧ್ಯತೆ ಇದೆ.

ಚುನಾವಣಾ ಸಮಿತಿಯ ಸಭೆಯಲ್ಲಿ ಪ್ರತಿಯೊಂದು ಕ್ಷೇತ್ರದ ಕುರಿತು ಚರ್ಚೆ ನಡೆದಿದೆ. ಆಯಾ ಜಿಲ್ಲಾವಾರು ಸಮಿತಿಗಳು, ನಾಯಕರು ಶಿಫಾರಸ್ಸು ಮಾಡಿದ ಪಟ್ಟಿಯಲ್ಲಿನ ಹೆಸರುಗಳನ್ನು ಅವಲೋಕಿಸಲಾಗಿದೆ. ತೀವ್ರ ವಿರೋಧಗಳು ಮತ್ತು ಆಕ್ಷೇಪಗಳು ಕೇಳಿ ಬಂದ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಎರಡನೇ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಕುರಿತು ನಿರ್ಧರಿಸಲಾಗಿದೆ.

ಮೊದಲ ಪಟ್ಟಿಯಲ್ಲಿ 150 ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳ ಹೆಸರನ್ನು ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಹೈಕಮಾಂಡ್‍ಗೆ ರವಾನಿಸಲಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಹಾಲಿ ಶಾಸಕರ ಪೈಕಿ ಒಂದಿಬ್ಬರನ್ನು ಹೊರತು ಪಡಿಸಿ ಬಹುತೇಕರಿಗೆ ಟಿಕೆಟ್ ಖಚಿತ ಎಂದು ಹೇಳಲಾಗಿದೆ. ಕೆಲವು ನಾಯಕರು ವಯೋ ಸಹಜ ಸಮಸ್ಯೆಗಳಿಂದ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದು, ತಮ್ಮ ಕುಟುಂಬದ ಸದಸ್ಯರ ಹೆಸರನ್ನು ಶಿಫಾರಸ್ಸು ಮಾಡಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯ ವೇಳೆ ಉದಯ್‍ಪುರ್ ಘೋಷಣೆಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂಬುದು ಹೈಕಮಾಂಡ್‍ನ ಕಟ್ಟುನಿಟ್ಟಿನ ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಪ್ರತಿ ಹಂತದಲ್ಲೂ ಖುದ್ದು ಹಾಜರಿದ್ದು ಅಭ್ಯರ್ಥಿಗಳ ಹಿನ್ನೆಲೆ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ದಿಢೀರ್ ಎಂಟ್ರಿಯಾಗಿ ವೈಟ್ ಕಾರ್ಡ್ ಮಾರ್ಗದಲ್ಲಿ ಟಿಕೆಟ್ ಪಡೆಯಲು ಈ ಬಾರಿ ಯಾರಿಗೂ ಅವಕಾಶವಿಲ್ಲ. ಕುಟುಂಬಕ್ಕೆ ರಾಜಕೀಯ ಹಿನ್ನೆಲೆಯಿದ್ದರೂ ಪಕ್ಷ ಸಂಘಟನೆಯಲ್ಲಿ ಕಡ್ಡಾಯವಾಗಿ ತೊಡಗಿಸಿಕೊಂಡಿರಬೇಕು ಎಂಬುದನ್ನು ಪಾಲನೆ ಮಾಡಲಾಗುತ್ತಿದೆ. ಈಗಾಗಲೇ ಪಕ್ಷದಲ್ಲಿ ಟಿಕೆಟ್ ಗಿಟ್ಟಿಸಿ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರಾಗಿರುವವರಿಗೆ ಉದಯ್‍ಪುರ್ ಘೋಷಣೆಯಿಂದ ವಿನಾಯಿತಿ ನೀಡುವ ಸಾಧ್ಯತೆ ಇದೆ. ಉಳಿದಂತೆ ಹೊಸದಾಗಿ ಕುಟುಂಬ ರಾಜಕಾರಣ ಮಾಡುವವರಿಗೆ ಅವಕಾಶ ನಿರಾಕರಿಸಲಾಗುತ್ತಿದೆ.

ಕಳೆದ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಸ್ರ್ಪಸದೆ ವಿಧಾನಸಭೆ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಾಗಿರುವವರ ಪೈಕಿ ಬಹುತೇಕರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಅನ್ಯ ಪಕ್ಷಗಳಿಂದ ಕಾಂಗ್ರೆಸ್‍ಗೆ ಬರುವ ಶಾಸಕರು, ಆಪರೇಷನ್ ಕಮಲಕ್ಕೆ ತುತ್ತಾಗಿ ಕಾಂಗ್ರೆಸ್ ಬಿಟ್ಟು ಹೋಗಿರುವ ಶಾಸಕರ ಕ್ಷೇತ್ರಗಳಲ್ಲಿ ಕಳೆದ ಬಾರಿ ಅವರ ಎದುರಾಳಿಗಳಾಗಿದ್ದವರಿಗೆ ಟಿಕೆಟ್ ನೀಡುವ ವಿಷಯದಲ್ಲಿ ನಿಯಮಾವಳಿಗಳನ್ನು ಸಡಿಲಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ನಡೆದ ಚುನಾವಣಾ ಸಮಿತಿ ಸಭೆ ಅತ್ಯಂತ ಮಹತ್ವದ್ದಾಗಿದ್ದು, ಮುಂದಿನ ರಾಜಕೀಯವನ್ನು ನಿರ್ಧರಿಸಲಿದೆ. ಅಂತಿಮವಾಗಿ ಪಕ್ಷ ನಿಷ್ಠೆ ಮತ್ತು ಗೆಲ್ಲುವ ಕುದುರೆಗಳಿಗೆ ಸರಿ ಸಮಾನವಾದ ಆದ್ಯತೆ ನೀಡಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ. ಇಲ್ಲಿ ಸಿದ್ದಗೊಂಡ ಸಂಭವನೀಯ ಪಟ್ಟಿಗೆ ಹೈಕಮಾಂಡ್ ಬಹುತೇಕ ಅಂಗೀಕಾರ ನೀಡಲಿದೆ ಎಂದು ಹೇಳಲಾಗಿದೆ.

Articles You Might Like

Share This Article