ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ

Social Share

ಬೆಂಗಳೂರು,ಮಾ.16- ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ನಾಳೆ ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಚುನಾವಣಾ ಅಖಾಡಕ್ಕೆ ಕೈಪಡೆ ಸರ್ವ ಸನ್ನದ್ಧಗೊಳ್ಳುವ ಸಾಧ್ಯತೆ ಇದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿರುವ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂ, ಮಾಜಿ ಪ್ರಧಾನಿ ಮನಮೋಹನ್ಸಿಂಗ್, ಕೇಂದ್ರದ ಮಾಜಿ ಸಚಿವರಾದ ಎ.ಕೆ.ಆ್ಯಂಟೋನಿ, ಅಂಬಿಕಾಸೋನಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪ್ರಮುಖರಾದ ಡಾ.ಗಿರಿಜಾ ವ್ಯಾಸ್, ಜನಾರ್ದನ್ ದಿವೇದಿ, ಮುಖಲ್ ವಾಸ್ನಿಕ್, ಮೋನಿಶಾ ಕಿಡ್ವಾಯಿ, ಕರ್ನಾಟಕದವರೆ ಆದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸದಸ್ಯರಾಗಿದ್ದಾರೆ.

ನಾಳೆ ನಡೆಯುವ ಸಭೆ ಮಹತ್ವದ್ದಾಗಿದ್ದು, ರಾಜ್ಯದ ಮುಖಂಡರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಟಿಕೆಟ್ಗಾಗಿ ಲಾಬಿ ನಡೆಸಲು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ಆಕಾಂಕ್ಷಿಗಳ ತಂಡ ಹಿರಿಯ ನಾಯಕರ ಬೆನ್ನತ್ತಿದೆ. ಬಹುತೇಕ ನಾಳೆಯೇ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಅಖೈರುಗೊಳ್ಳುವ ಸಾಧ್ಯತೆ ಇದೆ.

ಎಐಸಿಸಿ ರಚಿಸಿದ್ದ ಮೋಹನ್ ಪ್ರಕಾಶ್ ನೇತೃತ್ವದ ಸಮಿತಿ ಕಳೆದ ವಾರ ಬೆಂಗಳೂರಿನಲ್ಲೇ ಕುಳಿತು ಹಿರಿಯ ನಾಯಕರ ಜೊತೆ ಚರ್ಚಿಸಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿದೆ. ಅದರ ಪ್ರಕಾರ ಐದು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಜೊತೆ ಮತ್ತೊಬ್ಬ ಆಕಾಂಕ್ಷಿಯ ಹೆಸರನ್ನು ನಮೂದಿಸಲಾಗಿದೆ. ಪಾವಗಡದ ವೆಂಕಟರಮಣಪ್ಪ, ದೊಡ್ಡ ಬಳ್ಳಾಪುರದ ವೆಂಕಟರವಣಪ್ಪ, ದಾವಣಗೆರೆಯ ಶ್ಯಾಮನೂರು ಶಿವಶಂಕರಪ್ಪ, ಕುಂದಗೋಳ ಕ್ಷೇತ್ರದ ಕುಸುಮಾ ಶಿವಳ್ಳಿ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ಸ್ಥಳೀಯ ಕಾರಣಗಳಿಗೆ ಸೀಮಿತವಾಗಿ ಪರ್ಯಾಯ ಅಭ್ಯರ್ಥಿಯ ಹೆಸರನ್ನು ನಮೂದಿಸಲಾಗಿದೆ.

ಶ್ಯಾಮನೂರುಶಿವಶಂಕರಪ್ಪ ವಯೋ ಸಹಜ ಕಾರಣಕ್ಕೆ ಸ್ರ್ಪಸಲು ನಿರಾಸಕ್ತಿ ತೋರಿಸಿದ್ದಾರೆ. ಹೈಕಮಾಂಡ್ ಶಾಮನೂರು ಅವರನ್ನೇ ಕಣಕ್ಕಿಳಿಸುವ ಅಥವಾ ಅವರ ಕುಟುಂಬಕ್ಕೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಪಾವಗಡದಲ್ಲಿ ವೆಂಕಟರವಣಪ್ಪ ಅವರ ಪುತ್ರನಿಗೆ ಟಿಕೆಟ್ ನೀಡುವ ಚಿಂತನೆ ಇದೆ.

ದೊಡ್ಡಬಳ್ಳಾಪುರ, ಕುಂದಗೋಳ ಕ್ಷೇತ್ರದಲ್ಲಿ ನಡೆದ ಸಮೀಕ್ಷೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಹಿನ್ನೆಡೆಯಾಗಿರುವುದು ಪರ್ಯಾಯ ಅಭ್ಯರ್ಥಿ ಹೆಸರು ಪರಿಶೀಲನೆಗೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
ಉಳಿದಂತೆ ಹಾಲಿ ಶಾಸಕರ ಪೈಕಿ ಬಹುತೇಕ ಟಿಕೆಟ್ ಖಚಿತ ಎನ್ನಲಾಗಿದೆ. ಕೆಲವು ವಿವಾದಿತ ಕ್ಷೇತ್ರಗಳನ್ನು ಹೊರತು ಪಡಿಸಿ 180ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಒಂದೇ ಕಂತಿನಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಇತ್ತೀಚೆಗೆ ನಿಧನರಾದ ಕೆಪಿಸಿಸಿ ಕಾರ್ಯಧ್ಯಕ್ಷ ಧ್ರುವನಾರಾಯಣ್ ನಂಜನಗೂಡು ಕ್ಷೇತ್ರಕ್ಕೆ ಆಕಾಂಕ್ಷಿಯಾಗಿದ್ದರು. ಅದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ನಿನ್ನೆಯಷ್ಟೆ ಹಿಂದೆ ಸರಿದಿರುವುದಾಗಿ ಘೋಷಿಸಿರುವುದರಿಂದ ಧ್ರುವ ನಾರಾಯಣ್ರ ಪುತ್ರ ದರ್ಶನ್ಗೆ ಟಿಕೆಟ್ ಖಚಿತವಾಗುವ ಸಾಧ್ಯತೆ ಇದೆ.

ಉಳಿದಂತೆ ಜೆಡಿಎಸ್-ಬಿಜೆಪಿಯಿಂದ ಕಾಂಗ್ರೆಸ್ ಸೇರುವವರ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸದೆ ಕಾದು ನೋಡುವ ತಂತ್ರಗಾರಿಕೆ ಅನುಸರಿಸುವ ಸಾಧ್ಯತೆ ಇದೆ. ನಾಳೆ ನಡೆಯುವ ಸಭೆಯಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆ ನಡೆಸಲಾಗುವುದು ಮತ್ತು ಸೂಕ್ತ ಕಾಲದಲ್ಲಿ ಪಟ್ಟಿಯನ್ನು ಬಹಿರಂಗ ಪಡಿಸುವುದಾಗಿ ಮೂಲಗಳು ತಿಳಿಸಿವೆ.

ಆಡಳಿತಾರೂಢ ಬಿಜೆಪಿಗಿಂತಲೂ ಮುಂಚಿತವಾಗಿಯೇ ಪಟ್ಟಿಯನ್ನು ಪ್ರಕಟಿಸಿ ಕಾಂಗ್ರೆಸ್ ಪ್ರಚಾರಕ್ಕೆ ಮುನ್ನುಗ್ಗಲಿದೆ ಎಂದು ಹೇಳಲಾಗಿದೆ. ಆದರೆ ಕೆಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವುದರಿಂದ ಬಂಡಾಯ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಅಖೈರುಗೊಂಡ ಹಾಗೂ ಆಕಾಂಕ್ಷಿಗಳ ಜೊತೆ ಸಭೆ ನಡೆಸಿ ಒಮ್ಮತದ ತೀರ್ಮಾನ ತೆಗೆದುಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಚುನಾವಣೆ ತಯಾರಿಗಳನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

#CongressCandidates, #List,

Articles You Might Like

Share This Article