ಸಿಎಂ ಹುದ್ದೆ ಮಾರಾಟ ಆರೋಪಕ್ಕೆ ಪ್ರತಿಕ್ರಿಯಿಸಲು ಬೊಮ್ಮಾಯಿಗೆ ಭಯವೇಕೆ..?

ಬೆಂಗಳೂರು, ಮೇ 7- ಮುಖ್ಯಮಂತ್ರಿ ಮಾಡಲು 2500 ಕೋಟಿ ರೂಪಾಯಿ ಕೇಳಿದ್ದರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದರೆ, ಸತ್ಯ ಒಪ್ಪಿಕೊಳ್ಳಲು ಭಯ ಇರುವಂತಿದೆ ಎಂದು ಕಾಂಗ್ರೆಸ್ ತಿರುಗೇಟು ನೀಡಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಜಕಾರಣವೆಂದರೆ ನನಗೆ ವ್ಯವಹಾರವಿದ್ದಂತೆ ಎಂದಿದ್ದರು. ಈಗ ಬಸವನಗೌಡ ಪಾಟೀಲ್, ಸಿಎಂ ಹುದ್ದೆಗೆ 2500 ಕೋಟಿ ಕೊಡಬೇಕಿದೆ ಎಂದಿದ್ದಾರೆ. ಮುಖ್ಯಮಂತ್ರಿಯವರು ಯಾವ ಅಜೆಂಡವೂ ಇಲ್ಲದೆ ತಿಂಗಳಿಗೆ ಒಮ್ಮೆ ದೆಹಲಿ ಭೇಟಿ ನೀಡುತ್ತಿರುವುದು, ಪಿಎಸ್‍ಐ ನೇಮಕಾತಿ ಹಗರಣ, ಕೋವಿಡ್ ಹಗರಣ, ವರ್ಗಾವಣೆ ಅಕ್ರಮ, ಶೇ.40ರಷ್ಟು ಕಮಿಷನ್ ಹಗರಣ ಇತ್ಯಾದಿ ಬಿಜೆಪಿ ಭ್ರಷ್ಟಾಚಾರದ ಕ್ರೋನಾಲಜಿ ಎಂದು ಟ್ವೀಟ್ ಮಾಡಿದೆ.

ಬಿಜೆಪಿ ಶಾಸಕ ಯತ್ನಾಳ್ ಅವರು ಆರೋಪಿಸಿರುವಂತೆ 2500 ಕೋಟಿ ರೂಪಾಯಿ ಸಂಗತಿ ಅತ್ಯಂತ ಗಂಭೀರವಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ಬೊಮ್ಮಾಯಿ ನಿರಾಕರಿಸಿದ್ದಾರೆ ಎಂದರೆ ಸತ್ಯ ಒಪ್ಪಲು ಭಯವಿರುವಂತಿದೆ. ಸಿಎಂ ಹುದ್ದೆ ಮಾರಾಟದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು, ರಾಜ್ಯ ಕೇಂದ್ರ ಬಿಜೆಪಿ ನಾಯಕರನ್ನ ವಿಚಾರಣೆಗೊಳಪಡಿಸಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಸಿದ್ದವೇ ಎಂದು ಸವಾಲು ಹಾಕಿದೆ.

ಬೆಲೆ ಏರಿಕೆಯ ಬಿಸಿ ಬಿಜೆಪಿಯ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿಗೂ ತಟ್ಟಿದೆ. 2500 ಕೋಟಿ ಅಂದ್ರೆ ಸುಮ್ಮನೇ ಮಾತೇ?ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಸಚಿವರು 2500 ಸಾವಿರ ಕೋಟಿ ರೂಪಾಯಿ ಹೊಂದಿಸಲು ಪಿಎಸ್‍ಐ ಹುದ್ದೆಗಳ ಮಾರಾಟಕ್ಕೆ ಇಳಿದಿದ್ದರೇ ಎಂದು ಪ್ರಶ್ನಿಸಲಾಗಿದೆ. ಕೇಂದ್ರ ಗೃಹಸಚಿವ ಅಮಿತ್ ಷಾ ಮೊನ್ನೆ ಬೆಂಗಳೂರಿಗೆ ಬಂದಿದ್ದು ಸಿಎಂ ಹುದ್ದೆಯ ವ್ಯವಹಾರಕ್ಕಾಗಿಯೇ ಎಂದು ಕಾಂಗ್ರೆಸ್ ಅನುಮಾನ ವ್ಯಕ್ತಪಡಿಸಿದೆ.