ಪರಿಷತ್ ನಲ್ಲಿ ಅಹೋರಾತ್ರಿ ಧರಣಿಯ ಘೋಷಣೆ ಮಾಡಿ ಗೊಂದಲದಲ್ಲಿ ಬಿದ್ದ ಕಾಂಗ್ರೆಸ್ಸಿಗರು

Social Share

ಬೆಂಗಳೂರು, ಫೆ.16- ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯರು ಅಹೋರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿ, ನಂತರ ಹೋರಾಟದಿಂದ ಹಿಂದೆ ಸರಿದಿದ್ದಾರೆ.
ವಿಧಾನ ಪರಿಷತ್ ನಲ್ಲಿ ಸಂತಾಪ ಸೂಚನೆಯ ಬಳಿಕ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಶ್ನೋತ್ತರವನ್ನು ಕೈಗೆತ್ತಿಕೊಳ್ಳಲು ಮುಂದಾದಾಗ ಎದ್ದು ನಿಂತ ವಿಪಕ್ಷ ನಾಯಕ ಹರಿಪ್ರಸಾದ್ ಅವರು, ನಿಲುವಳಿ ಸೂಚನೆಯಡಿ ತಾವು ನೀಡಿರುವ ನಿರ್ಣಯವನ್ನು ಮರು ಪರಿಶೀಲನೆ ಮಾಡಿ. ಸಚಿವರ ಹೇಳಿಕೆಯಿಂದ ಸಂವಿಧಾನಕ್ಕೆ, ರಾಷ್ಟ್ರಧ್ವಜಕ್ಕೆ ಅಪಮಾನವಾಗಿದೆ. ಈ ಕುರಿತು ಮುಖ್ಯಮಂತ್ರಿ ಅವರು ಖುದ್ದು ಬಂದು ಉತ್ತರ ಹೇಳಬೇಕು, ಇಲ್ಲವೇ ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು ಅಥವಾ ನಮಗೆ ಚರ್ಚೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಸಭಾನಾಯಕ ಕೋಟಾಶ್ರೀನಿವಾಸ ಪೂಜಾರಿ ಅವರು ಸಭಾಪತಿ ಅವರು ಎರಡು ಕಡೆಯ ವಾದಗಳನ್ನು ಆಲಿಸಿ ರೂಲಿಂಗ್ ನೀಡಿದ್ದಾರೆ. ಅದನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಪ್ರಶ್ನಿಸಬಾರದು. ನಿಲುವಳಿ ಸೂಚನೆ ಮುಗಿದ ವಿಷಯ, ಮುಂದಿನ ಕಲಾಪಕ್ಕೆ ವಿಪಕ್ಷ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭಾಪತಿ ಅವರು ತಾವು ರೂಲಿಂಗ್ ನೀಡಿ ಆಗಿದೆ, ಪ್ರಶ್ನೋತ್ತರಕ್ಕೆ ಅವಕಾಶ ನೀಡಿ ಎಂದು ಮನವಿ ಮಾಡಿದರು. ಆದರೆ ಇದಕ್ಕೆ ಒಪ್ಪದ ವಿಪಕ್ಷ ನಾಯಕರು ನಾವು ನಿಮ್ಮ ರೂಲಿಂಗ್ ಅನ್ನು ಪ್ರಶ್ನಿಸುತ್ತಿಲ್ಲ, ನಿಮ್ಮ ಮೇಲೆ ಅಪಾರ ಗೌರವ ಹೊಂದಿದ್ದೇವೆ. ನಮ್ಮ ಆಕ್ಷೇಪ ಸರ್ಕಾರದ ನಡವಳಿಕೆಯ ವಿರುದ್ಧ. ಸಚಿವ ಈಶ್ವರಪ್ಪ ಅವರ ಹೇಳಿಕೆಯನ್ನು ಕಾನೂನು ಸಚಿವರು ಸಮರ್ಥಿಸಿಕೊಂಡಿದ್ದಾರೆ. ಹಾಗಾಗಿ ನಾವು ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಪಟ್ಟು ಹಿಡಿದು ಸಭಾಪತಿ ಅವರ ಮುಂದಿನ ಭಾವಿಗಿಳಿದು ಧರಣಿ ಆರಂಭಿಸಿದರು.
ಧರಣಿ, ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪವನ್ನು ಮುಂದುವರೆಸಿದ ಸಭಾಪತಿ ಅವರು, ನಂತರ ಅಧಿವೇಶನವನ್ನು ನಾಳೆಗೆ ಮುಂದೂಡಿದರು. ಬಳಿಕ ಆಡಳಿತ ಪಕ್ಷದ ಸದಸ್ಯರಾದ ರವಿಕುಮಾರ ಮತ್ತು ವೈ.ಎ.ನಾರಾಯಣಸ್ವಾಮಿ ಅವರು ಧರಣಿ ನಿರತ ಸದಸ್ಯರ ಬಳಿ ಬಂದು ತಿಳಿ ಹಾಸ್ಯ ಮಿಶ್ರಿತವಾಗಿ ಮಾತುಕತೆ ನಡೆಸಿದರು.
ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಅವರ ರಾಜೀನಾಮೆಗೆ ಪಟ್ಟು ಹಿಡಿದ ಕಾಂಗ್ರೆಸ್ ಸದಸ್ಯರು ವಿಧಾನಪರಿಷತ್ ನ ಸಭಾಂಗಣದಲ್ಲಿ ಅಹೋರಾತ್ರಿ ಧರಣಿ ಮುಂದುವರೆಸುವುದಾಗಿ ಘೋಷಿಸಿತ್ತು. ಸಭಾಪತಿ ಅವರು ಪ್ರತಿಪಕ್ಷದ ನಾಯಕರನ್ನು ಕರೆದು ಸಂಧಾನ ನಡೆಸಿದರಾದರೂ ಪ್ರಯೋಜನವಾಗಲಿಲ್ಲ. ಕಾಂಗ್ರೆಸ್ ಧರಣಿಗೆ ಅಗತ್ಯ ಸೌಲಭ್ಯ ಒದಗಿಸಲು ಸಭಾಪತಿ ಕಚೇರಿ ತಯಾರಿ ಆರಂಭಿಸಿತ್ತು.
ಈ ನಡುವೆ ವಿಧಾನ ಸಭೆಯಲ್ಲಿ ಇಂದಿನ ಬದಲಿಗೆ ನಾಳೆ ಅಹೋರಾತ್ರಿ ನಡೆಸುವ ಚರ್ಚೆಗಳು ನಡೆದಿದ್ದವು. ಇದರಿಂದ ವಿಧಾನ ಪರಿಷತ್ ನಲ್ಲೂ ಗೊಂದಲ ಉಂಟಾಯಿತು. ಈ ಮೊದಲೇ ಅಹೋರಾತ್ರಿ ಧರಣಿ ಘೋಷಿಸಿದ ವಿಪಕ್ಷ ನಾಯಕ ಹರಿಪ್ರಸಾದ್, ಕೆಲ ನಿಮಿಷಗಳ ಅಂತರದಲ್ಲಿ ಹೇಳಿಕೆ ಬದಲಾಯಿಸಿದರು. ಅಹೋರಾತ್ರಿ ಧರಣಿ ನಡೆಸುವ ಆಯ್ಕೆ ನಮ್ಮ ಮುಂದೆ ಇದೆ. ಆದರೆ ಅದು ಇಂದು ಅಥವಾ ನಾಳೆಯೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

Articles You Might Like

Share This Article