ಕಾಂಗ್ರೆಸ್ ಭ್ರಷ್ಟಾಚಾರದ ಬೇಲ್ ಪಕ್ಷ : ಬೊಮ್ಮಾಯಿ

Social Share

ಬೆಂಗಳೂರು,ಅ.2- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ಜಾಮೀನು ಪಡೆದಿರುವುದರಿಂದ ಇಡೀ ಕಾಂಗ್ರೆಸ್ ಪಕ್ಷವೇ ಬೇಲ್‍ನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಬಳಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಲ್ ಮೇಲಿದ್ದಾರೆ. ರಾಜ್ಯಾಧ್ಯಕ್ಷರೂ ಸೇರಿದಂತೆ ಎಲ್ಲರೂ ಜಾಮೀನು ಪಡೆದಿದ್ದಾರೆ ಎಂದ ಅವರು, ನಕಲಿ ಗಾಂಧಿಗಳ ಬಗ್ಗೆ ಮಹಾತ್ಮ ಗಾಂಧೀಜಿ ಜಯಂತಿಯಂದು ಮಾತನಾಡುವುದು ಸರಿಯಲ್ಲ. ರಾಜ್ಯಾಧ್ಯಕ್ಷರಿಗಾಗಿ ಭಾರತ್ ಜೋಡೊ ಯಾತ್ರೆ ನಡೆಯುತ್ತಿದೆ ಎಂದು ಆರೋಪಿಸಿದರು.

ನಮ್ಮಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ಆಗಿಲ್ಲ. ಹಾಗೊಂದು ವೇಳೆ ಭ್ರಷ್ಟಾಚಾರ ನಡೆದಿದ್ದರೆ ಸೂಕ್ತ ದಾಖಲೆಗಳನ್ನು ಒದಗಿಸಲಿ. ತನಿಖೆ ನಡೆಸಲಾಗುವುದು ಎಂದರು. ಚನ್ನಪಟ್ಟಣದಲ್ಲಿ ಸ್ಥಳೀಯ ಶಾಸಕರ ಗಮನಕ್ಕೆ ತಾರದೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚನ್ನಪಟ್ಟಣದ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಸರ್ಕಾರಿ ಕಾರ್ಯಕ್ರಮದಲ್ಲಿ ಏನೇನಾಗಿದೆ ಎಂಬ ಮಾಹಿತಿ ಪಡೆದು ಪ್ರತಿಕ್ರಿಯಿಸಲಾಗುವುದು ಎಂದು ಹೇಳಿದರು.

ಕುಮಾರಸ್ವಾಮಿ ಅವರು ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಯಕ್ರಮದ ಸಂದರ್ಭದಲ್ಲಿ ಏನೇನಾಯಿತು ಎಂಬ ಮಾಹಿತಿಯೂ ನಮ್ಮ ಬಳಿಯೂ ಇದೆ ಎಂದರು. ಮಹಾತ್ಮ ಗಾಂಧೀಜಿಯವರು ದೇಶಕ್ಕೆ ಪ್ರೇರಣಾಶಕ್ತಿ. ಬದುಕಿನಲ್ಲಿ ಹತ್ತು ಹಲವು ನೋವನ್ನು ಸಹಿಸಿ ದೇಶಕ್ಕಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಸತ್ಯ, ಅಹಿಂಸೆ ಎಂಬ ಎರಡು ಅಸ್ತ್ರಗಳನ್ನು ಕೊಟ್ಟರು.

ಪ್ರಾರಂಭದಲ್ಲಿ ಕೆಲವರು ಈ ಅಸ್ತ್ರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಗಾಂಧೀಜಿಯವರ ಜೀವನವೇ ಒಂದು ಪ್ರಯೋಗ. ಅವರು ಕೊನೆಯವರೆಗೂ ಸತ್ಯ ಮತ್ತು ಅಹಿಂಸೆಯನ್ನು ಬಿಡಲಿಲ್ಲ. ಇಂದಿಗೂ ಅವರ ವಿಚಾರಧಾರೆಗಳು ಪ್ರಸ್ತುತವಾಗಿವೆ. ಗ್ರಾಮ ಸ್ವರಾಜ್ಯವಾಗಬೇಕು ಎಂಬುದು ಅವರ ಕನಸಾಗಿತ್ತು. ಇದರಲ್ಲಿ ಅವರ ವಿಚಾರಧಾರೆಗಳು ಅಡಗಿವೆ. ಅವರ ಆದರ್ಶ ಗುಣಗಳನ್ನು ನಾವು ಅಳವಡಿಸಿಕೊಂಡು ಹೋಗಬೇಕಿದೆ ಎಂದರು.

ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ ಜನ್ಮದಿನ ಕೂಡ ಇಂದು. ಹೀಗಾಗಿ ಅವರನ್ನು ಕೂಡ ದೇಶ ಸ್ಮರಿಸುತ್ತಿದೆ. ಶಾಸ್ತ್ರಿ ಮತ್ತು ಗಾಂಧೀಜಿ ಅವರ ಜೀವನದಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಪ್ರಧಾನಿಯಾಗಿ ಶಾಸ್ತ್ರಿಯವರು ಮಾಡಿದ ಕಾರ್ಯಗಳು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ ಎಂದರು.

ಭಾರತ-ಪಾಕಿಸ್ತಾನ ಯುದ್ಧವನ್ನು ಪ್ರಧಾನಿಯಾಗಿ ಸಮರ್ಥವಾಗಿ ಎದುರಿಸಿದರು. ಆ ಸಂದರ್ಭದಲ್ಲಿ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿರಲಿಲ್ಲ. ಆಗಲೇ ಹಸಿರುಕ್ರಾಂತಿ ಘೋಷಿಸಿದರಲ್ಲದೆ ಜೈವಾನ್-ಜೈಕಿಸಾನ್ ಎಂಬ ಘೋಷಣೆ ಮಾಡಿದರು. ಅವರ ಸರಳ ಜೀವನ ನಮ್ಮೆಲ್ಲರಿಗೂ ಆದರ್ಶವಾಗಲಿ ಎಂದರು.

ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತ ಶರ್ಮ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Articles You Might Like

Share This Article