ದೆಹಲಿ ಸಭೆ ಬಳಿಕ ರಣೋತ್ಸಾಹದಲ್ಲಿ ಕಾಂಗ್ರೆಸ್ ಕಲಿಗಳು

Social Share

ಬೆಂಗಳೂರು,ಡಿ.13- ಗುಜರಾತ್ ಸೋಲು, ಹಿಮಾಚಲಪ್ರದೇಶ ಗೆಲುವಿನಿಂದ ಮಿಶ್ರ ಭಾವದಲ್ಲಿರುವ ಕಾಂಗ್ರೆಸ್, ನಿನ್ನೆ ದೆಹಲಿಯ ಸಭೆ ಬಳಿಕ ಮೈಕೊಡವಿ ನಿಂತಿದ್ದು ರಣೋತ್ಸಾಹದಿಂದ ಚುನಾವಣೆಯತ್ತ ಮುನ್ನಗ್ಗುತ್ತಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದ ಪ್ರಭಾವಿ ನಾಯಕರೊಂದಿಗೆ ಚರ್ಚೆ ನಡೆಸಿದ್ದು, ಬಣ ರಾಜಕೀಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲ್ಲೇಬೇಕು. ಇದಕ್ಕಾಗಿ ನಿಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಿ. ಇಲ್ಲಿ ಮುಖ್ಯಮಂತ್ರಿ ಹುದ್ದೆ ಯಾರಿಗೆ ಎಂಬುದು ಮುಖ್ಯವಲ್ಲ. ಸಾಮೂಹಿಕ ನಾಯಕತ್ವ ಮತ್ತು ಒಗ್ಗಟ್ಟಿನ ಮಂತ್ರದ ಮೂಲಕ ಚುನಾವಣೆ ಎದುರಿಸಬೇಕಿದೆ.

ಪ್ರತ್ಯೇಕ ಹಾಗೂ ಭಿನ್ನ ಹೇಳಿಕೆಯ ಮೂಲಕ ಜನರಲ್ಲಿ ಗೊಂದಲ ಮೂಡಿಸಬಾರದು. ಕಾಂಗ್ರೆಸ್ ಒಟ್ಟಾಗಿದೆ ಎಂದರೆ ಜನರಲ್ಲಿ ನಂಬಿಕೆ ಹೆಚ್ಚಾಗುತ್ತದೆ. ನಿರಾಯಾಸವಾಗಿ ಅಧಿಕಾರಕ್ಕೆ ಬರುತ್ತದೆ. ಆದರೆ ನಿಮ್ಮಲ್ಲೇ ಗೊಂದಲಗಳಿದ್ದರೆ ಕಾರ್ಯಕರ್ತರ ಪರಿಸ್ಥಿತಿ ಏನು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಪೂಜಾ ಹೆಗ್ಡೆ ಬಲೆಗೆ ಬಿದ್ದಸಲ್ಮಾನ್..!?

ಸಭೆಯಲ್ಲಿ ಹೈಕಮಾಂಡ್ ಮಾತಿಗೆ ಎಲ್ಲ ನಾಯಕರು ತಲೆತೂಗಿದ್ದು, ಪಕ್ಷದ ಸೂಚನೆಯಂತೆ ಒಟ್ಟಾಗಿ ಕೆಲಸ ಮಾಡುವ ಭರವಸೆ ನೀಡಿದ್ದಾರೆ. ಅದರ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಸಕ್ರಿಯ ಚಟುವಟಿಕೆಗಳು ಚಾಲುಗೊಂಡಿವೆ.
45 ದಿನ 224 ಕ್ಷೇತ್ರಗಳಲ್ಲೂ ರ್ಯಾಲಿಗಳು, ಹುಬ್ಬಳ್ಳಿ, ಬಿಜಾಪುರ, ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶಗಳು ಸೇರಿದಂತೆ ಮುಂದಿನ 75 ದಿನಗಳ ಕಾಲ ಅಂದರೆ ಚುನಾವಣೆ ಘೋಷಣೆಯಾಗುವವರೆಗೂ ನಿರಂತರ ಚಟುವಟಿಕೆಗಳ ರೋಡ್ ಮ್ಯಾಪ್ ಸಿದ್ದಗೊಂಡಿದೆ.

ಜಿಲ್ಲಾವಾರು ಮತ್ತು ವಿಭಾಗವಾರು ಉಸ್ತುವಾರಿ ನಾಯಕರನ್ನು ನಿಯೋಜಿಸಲಾಗಿದ್ದು, ಯಾವುದೇ ಹಂತದಲ್ಲಿ ಚಟುವಟಿಕೆ ಮಂದಗೊಂಡರೆ ಹೈಕಮಾಂಡ್‍ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಎಐಸಿಸಿಯ ಕಾರ್ಯದರ್ಶಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸಿ ಪ್ರತಿಯೊಂದು ಕಾರ್ಯಕ್ರಮದ ವರದಿ ಪಡೆಯಲು ನಿರ್ಧರಿಸಿದೆ.

ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ನೆಲೆ ಇರಲಿಲ್ಲ. ಹಾಗಾಗಿ ಸೋಲು ಕಾಣಬೇಕಾಗಿದೆ. ಆದರೆ ಕರ್ನಾಟಕದಲ್ಲಿ ಪಕ್ಷದ ತಳಹದಿ ಭದ್ರವಾಗಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಮೂಲಕ ರಾಷ್ಟ್ರ ರಾಜಕಾರಣಕ್ಕೆ ಹೊಸ ಹಾದಿ ತೋರಿಸಬೇಕು.

2024ರ ಲೋಕಸಭೆ ಚುನಾವಣೆಗೂ ಈಗಿನಿಂದಲೇ ತಯಾರಿಗಳು ಆರಂಭಗೊಳ್ಳಬೇಕು. ವಿಧಾನಸಭೆ ಚುನಾವಣೆವರೆಗೂ ಅವಿರತವಾಗಿ ಶ್ರಮಿಸಬೇಕು. ನಾಯಕರುಗಳು ತಮ್ಮ ವೈಯಕ್ತಿಕ ವಿಚಾರಗಳಿಗಾಗಿ ಗುಂಪುಗಾರಿಕೆ ಮಾಡಬಾರದು ಎಂದು ತಾಕೀತು ಮಾಡಲಾಗಿದೆ.

ಸಭೆಯಲ್ಲಿ ಸರ್ವಸಮ್ಮತ ಅಭಿಪ್ರಾಯಗಳು ವ್ಯಕ್ತವಾದ ಹಿನ್ನಲೆಯಲ್ಲಿ ಎಲ್ಲ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲು ನಿರ್ಧರಿಸಿದ್ದಾರೆ. ಯಾರ್ಯಾರಿಗೆ ಯಾವ್ಯಾವ ಜವಾಬ್ದಾರಿ ಎಂಬ ಬಗ್ಗೆ ಚರ್ಚೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷರ ಮಾತು ಮತ್ತು ಶಾಸಕಾಂಗದಲ್ಲಿ ಸಿದ್ದರಾಮಯ್ಯ ಅವರ ನಿರ್ಧಾರಗಳು ಅಂತಿಮ ಎಂದು ನಿರ್ಧರಿಸಲಾಗಿದೆ.

ಮೋದಿ ವಿರುದ್ಧ ಹೇಳಿಕೆ : ಕಾಂಗ್ರೆಸ್‍ನ ರಾಜಾ ಪಟೇರಿಯಾ ಬಂಧನ

ಕಾಂಗ್ರೆಸ್ ಹೈಕಮಾಂಡ್‍ಗೆ ಈಗಾಗಲೇ ಸಂಭವನೀಯರ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ಡಿಸೆಂಬರ್ ವೇಳೆಗೆ 150 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಲು ಹೈಕಮಾಂಡ್ ಕೂಡ ಒಲವು ತೋರಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ 42 ಕ್ಷೇತ್ರಗಳಿದ್ದು, ಕಾಂಗ್ರೆಸ್ 18ರಲ್ಲಿ ಕಳೆದ ಚುನಾವಣೆಯಲ್ಲಿ ಗೆದ್ದಿತ್ತು. ಈ ಬಾರಿ ಶೇ.75ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬೇಕೆಂದು ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಾದೇಶಿಕ ನಾಯಕರು ಸ್ಥಳೀಯವಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕು. ಕಾಂಗ್ರೆಸ್‍ನ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಪ್ರಚಾರ ನಡೆಸಬೇಕೆಂದು ನಿರ್ಧರಿಸಲಾಗಿದೆ.

ಗೋಲ್ಡನ್ ಗ್ಲೋಬ್ ಪ್ರಶಸ್ತಿ ಬಾಗಿಲಲ್ಲಿ ಆರ್‌ಆರ್‌ಆರ್‌

ಸಭೆಯ ಪರಿಣಾಮದಿಂದಾಗಿ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬೀಳಲು ಸಿದ್ದವಾಗಿದೆ. ಬಳಿಕ ನಿರಂತರವಾಗಿ ಯಾತ್ರೆಗಳು ಕೂಡ ಆರಂಭವಾಗಲಿವೆ. ಯಾತ್ರೆಯಲ್ಲಿ ಬಹುತೇಕ ಆಯಾ ಕ್ಷೇತ್ರಗಳಲ್ಲೇ ಅಭ್ಯರ್ಥಿಗಳ ಬಗ್ಗೆ ಸೂಚ್ಯವಾಗಿ ಮಾಹಿತಿ ನೀಡಲು ರಾಜ್ಯ ನಾಯಕರಿಗೆ ಹೈಕಮಾಂಡ್ ಸಲಹೆ ನೀಡಿದೆ. ಆದರೆ ಅಧಿಕೃತ ಘೋಷಣೆ ಮಾತ್ರ ಚುನಾವಣೆ ಸಮಿತಿ ಸಭೆಯ ಬಳಿಕವೇ ನಡೆಯಬೇಕೆಂದು ಸ್ಪಷ್ಟಪಡಿಸಲಾಗಿದೆ.

Congress, Delhi, meeting, 2023 assembly elections,

Articles You Might Like

Share This Article