ನವದೆಹಲಿ, ಆ.5- ಕಾಂಗ್ರೆಸ್ ತಮ್ಮ ಭ್ರಷ್ಟಾಚಾರಗಳಿಗಾಗಿ ತಪ್ಪು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ. ಇಂದು ಬೆಳಗ್ಗೆ ಕಾಂಗ್ರೆಸ್ ನಾಯಕ ರಾಹುಲ್‍ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಬೆನ್ನಲ್ಲೆ ರವಿಶಂಕರ್ ಪ್ರಸಾದ್ ಅವರು ಪ್ರತಿಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಸುದೀರ್ಘ ಆರೋಪಗಳ ಪಟ್ಟಿ ಹೊರೆಸಿದರು.
ದೇಶದಲ್ಲಿ ಪ್ರಜಾಪ್ರಭುತ್ವ ಸತ್ತಿದೆ ಎಂದು ಹೇಳುವ ರಾಹುಲ್‍ಗಾಂಧಿ ತಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಹೇಳಬೇಕು ಎಂದಿದ್ದಾರೆ. ಜನ ಕಾಂಗ್ರೆಸ್ ಪಕ್ಷವನ್ನು ಯಾಕೆ ಪದೇ ಪದೇ ತಿರಸ್ಕರಿಸುತ್ತಿದ್ದಾರೆ. ಕಾಂಗ್ರೆಸ್ ಎಂದರೆ ಸೋನಿಯಾ ಗಾಂಧಿ, ರಾಹುಲ್‍ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರ ಮಾತ್ರ ಎಂದಾಗಿಲ್ಲವೇ. ನಿಮ್ಮ ಪಕ್ಷದಲ್ಲಿರುವ ಹಿರಿಯ ನಾಯಕರನ್ನು ಪ್ರಜಾಪ್ರಭುತ್ವದ ರೀತಿ ನಡೆಸಿಕೊಳ್ಳಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಏನು ತಪ್ಪೇ ಮಾಡಿಲ್ಲ ಎಂದರೆ ಸೋನಿಯಾ ಗಾಂಧಿ, ರಾಹುಲ್‍ಗಾಂಧಿ ಜಾಮೀನಿನ ಮೇಲೆ ಏಕಿದ್ದಾರೆ. ಪ್ರತಿ ಬಾರಿಯೂ ತನಿಖಾ ಸಂಸ್ಥೆಗಳು ದುರ್ಬಳಕೆಯಾಗುತ್ತಿವೆ ಎಂದು ಕಾಂಗ್ರೆಸ್ ಹೇಳುತ್ತಿರುವುದು ನಿರಾಧಾರವಾದ ಆರೋಪ. ಚುನಾವಣಾ ಆಯೋಗ, ಸಿಬಿಐ, ಆದಾಯ ತೆರಿಗೆ ಮತ್ತು ಜಾರಿ ನಿರ್ದೇಶನಾಲಯಗಳು ಸಂಪೂರ್ಣ ಸ್ವತಂತ್ರವಾಗಿವೆ. ನ್ಯಾಯಸಮ್ಮತವಾಗಿ ಕೆಲಸ ಮಾಡುತ್ತಿವೆ. ಕಾಂಗ್ರೆಸ್ ಪ್ರತಿಭಟನೆ ಮೂಲಕ ತನಿಖಾ ಸಂಸ್ಥೆಗಳನ್ನು ಬೆದರಿಸುವ ಯತ್ನ ನಡೆಸಿದೆ. ಇದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದರು.
ರಾಹುಲ್ ಗಾಂಧಿ ಆರೋಪಗಳನ್ನು ಮಾಡುತ್ತಿರುವುದು ತಮ್ಮ ಭ್ರಷ್ಟಾಚಾರವನ್ನು ಮರೆ ಮಾಚುವ ಯತ್ನವಾಗಿವೆ. ಮೊದಲು ತನಿಖೆ ಹೆದರಿಸಿ, ತಪ್ಪು ಮಾಡಿಲ್ಲ ಎಂದರೆ ವಿಚಾರಣೆಗೆ ಯಾಕೆ ಹೆದರುತ್ತಿದ್ದಿರಾ.. ಭ್ರಷ್ಟಾಚಾರ ಮಾಡಿಲ್ಲ ಎಂದರೆ ಸಾವಿರಾರು ಕೋಟಿ ರೂಪಾಯಿಗಳ ಆಸ್ತಿ ಎಲ್ಲಿಂದ ಬಂತು. ದೇಶದ ಎಲ್ಲಾ ಕಡೆ, ಇಟಲಿಯಲ್ಲಿ ಭಾರೀ ಪ್ರಮಾಣದ ಆಸ್ತಿಗಳು ರಾಹುಲ್ ಗಾಂಧಿ ಕುಟುಂಬದ ಹೆಸರಿನಲ್ಲಿವೆ. ನ್ಯಾಯಾಂಗ ವ್ಯವಸ್ಥೆಯ ಮೇಲೂ ಕಾಂಗ್ರೆಸ್‍ಗೆ ನಂಬಿಕೆ ಇಲ್ಲವೇ ಎಂದು ಸಿಡಿಮಿಡಿ ವ್ಯಕ್ತ ಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಪ್ರಶ್ನೆಗಳಿಗೆ ಹೆದರುವುದಿಲ್ಲ. ದೇಶ ವಿದೇಶಗಳನ್ನು ಸುತ್ತುತ್ತಾರೆ. ಪ್ರಶ್ನೆಗಳಿಗೆ ಉತ್ತರಿಸುತ್ತಾರೆ. ಜಾಗತಿಕವಾಗಿ ಮನ್ನಣೆ ಪಡೆದಿದ್ದಾರೆ. ಜನರಿಂದ ತಿರಸ್ಕøತವಾದ ಕಾಂಗ್ರೆಸ್ ಅನತ್ಯವಾಗಿ ಪ್ರತಿಭಟನೆ ಮತ್ತು ಆಧಾರ ರಹಿತ ಆರೋಪಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ನಡೆಸಿದ ಎಂದು ಆರೋಪಿಸಿದರು.