ಅಮೃತ್ ಸರ್ , ಫೆ.5- ಕಾಂಗ್ರೆಸ್‍ನ ಕೋರ್ ಕಮಿಟಿ ಸದಸ್ಯ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ಮಾಜಿ ನಾಯಕ ಗುಲಾಂನಬಿ ಆಜಾದ್ ಹಾಗೂ ಸ್ಥಳೀಯ ಸಂಸದ ಮನೀಶ್ ತಿವಾರಿ ಅವರನ್ನು ಪಂಜಾಬ್ ವಿಧಾನ ಸಭೆ ಚುನಾವಣೆಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಡಲಾಗಿದೆ.
ಫೆ.20ರಂದು ಪಂಜಾಬ್ ನಲ್ಲಿ ಚುನಾವಣೆ ನಡೆಯಲಿದ್ದು, ಮತದಾರರನ್ನು ಸೆಳೆಯುವ ಪ್ರಚಾರ ಕಾರ್ಯಕ್ಕೆ ಕಾಂಗ್ರೆಸ್ 30 ಮಂದಿ ಹಿರಿಯ ಹಾಗೂ ಪ್ರಭಾವಿ ನಾಯಕರ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಅದರಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಪ್ರಮುಖರಾಗಿದ್ದಾರೆ.
ಅಜಾದ್ ಮತ್ತು ಮನೀಶ್ ತಿವಾರಿ ಜಿ-23 ಮುಖಂಡರ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕತ್ವ ಹಾಗೂ ರಾಹುಲ್ ಗಾಂಧಿ ವೈಪಲ್ಯಗಳ ಬಗ್ಗೆ ಸೋನಿಯಾಗಾಂಧಿ ಅವರಿಗೆ ಪತ್ರ ಬರೆದು, ಅದನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು. ಈ ಗುಂಪಿಗೆ ಜಿ-23 ಎಂದು ಹೆಸರಿಸಲಾಗಿದೆ. ಆ ತಂಡದಲ್ಲಿದ್ದ ಬಹುತೇಕರನ್ನು ಹಂತ ಹಂತವಾಗಿ ಕಾಂಗ್ರೆಸ್ ಮೂಲೆ ಗುಂಪು ಮಾಡಲಾಗುತ್ತಿದೆ.
ಗುಲಾಂ ನಬಿ ಆಜಾದ್ ಅವರಿಗೆ ಇತ್ತೀಚೆಗೆ ಬಿಜೆಪಿ ನಾಯಕರ ಸಖ್ಯ ಹೆಚ್ಚಾಗಿತ್ತು. ಕೇಂದ್ರ ಸರ್ಕಾರ ಅವರಿಗೆ ಪದ್ಮ ಪ್ರಶಸ್ತಿಯನ್ನು ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಗುಲಾಂ ನಬಿ ಆಜಾದ್ ಅವರು ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಒಂದೆಡೆ ಹುಟ್ಟಿ ಬೆಳೆದ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ, ಮತ್ತೊಂದೆಡೆ ಬಿಜೆಪಿ ನಾಯಕರ ಸಖ್ಯದಲ್ಲಿ ಖುಷಿ ಪಡುತ್ತಿದ್ದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‍ನಲ್ಲಿ ಹಿನ್ನೆಡೆಯಾಗಿದೆ.
ಜಿ-23 ತಂಡದಲ್ಲಿ ಗುರುತಿಸಿಕೊಂಡಿದ್ದ ಕೇಂದ್ರದ ಮಾಜಿ ಸಚಿವ ಆನಂದ್ ಶರ್ಮಾ, ಭೂಪಿಂದರ್ ಸಿಂಗ್ ಹೂಡಾ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‍ನ ರೆಬಲ್ ನಾಯಕ ಸಚ್ಚಿನ್ ಪೈಲೆಟ್ ರನ್ನು ಸ್ಟಾರ್ ಪ್ರಚಾರಕ ಪಟ್ಟಿಯಲ್ಲಿ ಉಳಿಸಲಾಗಿದೆ.
ಪಂಜಾಬ್‍ನ ಸಂಸದ ರವನೀತ್ ಸಿಂಗ್ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಮತ್ತೊಬ್ಬ ಸಂಸದ ಮನೀಶ್ ತಿವಾರಿ ಅವರನ್ನು ಕೈ ಬಿಡಲಾಗಿದೆ.
ಲೋಕಸಭೆಯ ಮಾಜಿ ಅಧ್ಯಕ್ಷೆ ಮೀರಾ ಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಅಂಬಿಕಾ ಸೋನಿ, ಹರೀಶ್ ಚೌದರಿ, ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿದ್ದು, ಮುಖ್ಯಮಂತ್ರಿ ಚರಣ್‍ಜಿತ್ ಸಿಂಗ್ ಚನ್ನಿ, ನೆರೆ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಗೇಲಾ, ಪ್ರದೇಶ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಸುನೀಲ್ ಜಾಕರ್, ಪ್ರತಾಪ್ ಸಿಂಗ್ ಬಾಜ್ವಾ, ಅಜಯ್ ಮಕೇನ್, ರಣದೀಪ್ ಸುರ್ಜೇವಾಲ, ಕುಮಾರಿ ಸೇಲ್ಜಾ, ರಾಜೀವ್ ಶುಕ್ಲಾ, ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಸೇರಿದಂತೆ ಅನೇಕರನ್ನು ಸ್ಟಾರ್ ಪ್ರಚಾರಕರನ್ನಾಗಿ ನೇಮಿಸಲಾಗಿದೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ಕಾಂಗ್ರೆಸ್ ನಾಯಕ ಅಧಿರ್ ರಂಜನ್ ಚೌದರಿ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಹೊರಗಿಡಲಾಗಿದೆ.
