ಕಾಂಗ್ರೆಸ್ ಚುನಾವಣಾ ತಾಲೀಮು ಆರಂಭ : ಪ್ರಚಾರ ಸಮಿತಿ ಕಾರ್ಯನಿರ್ವಹಣೆಗೆ ಚಾಲನೆ

Social Share

ಬೆಂಗಳೂರು,ಆ.16- ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ತಾಲೀಮು ಆರಂಭಿಸಿದ್ದು, ಇಂದು ಪ್ರಚಾರ ಸಮಿತಿಯ ಕಾರ್ಯನಿರ್ವಹಣೆಗೆ ಚಾಲನೆ ನೀಡಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‍ಸಿಂಗ್ ಸುರ್ಜೆವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮ್ಮದ್, ದೃವ ನಾರಾಯಣ್, ರಾಮಲಿಂಗಾರೆಡ್ಡಿ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರಚಾರ ಸಮಿತಿ ಕಚೇರಿ ಉದ್ಘಾಟನೆ ಬಳಿಕ ಹಿರಿಯ ನಾಯಕರು ಪ್ರತ್ಯೇಕವಾಗಿ ಸಭೆ ನಡೆಸಿ ರಣತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ. ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಮತ್ತು ನಿನ್ನೆ ಬೆಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯ ನಡಿಗೆಗಳ ಅಭೂತಪೂರ್ವ ಯಶಸ್ಸಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ನಾಯಕರು ಮುಂದಿನ ತಿಂಗಳು ಕರ್ನಾಟಕಕ್ಕೆ ಆಗಮಿಸುವ ರಾಹುಲ್‍ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯ ಪೂರ್ವ ತಯಾರಿ ಕುರಿತು ಚರ್ಚಿಸಿದ್ದಾರೆ.

ಈ ಹಿಂದೆ ನಡೆದ ಎರಡು ಕಾರ್ಯಕ್ರಮಗಳು ಪಕ್ಷವನ್ನು ಚುರುಕುಗೊಳಿಸಿದ್ದು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿವೆ. ಬಿಜೆಪಿ ಸರ್ಕಾರದ ಸರಣಿ ವೈಫಲ್ಯಗಳು, ಒಳಜಗಳಗಳು, ಭ್ರಷ್ಟಾಚಾರ ಆರೋಪಗಳು ಪ್ರತಿಪಕ್ಷಗಳಿಗೆ ಅಸ್ತ್ರ ನೀಡಿದಂತಾಗಿದೆ.

ಸದನ ಸಮಾವೇಶಗೊಂಡು ಅಲ್ಲಿ ಚರ್ಚೆಯಾಗುವ ಮುನ್ನ ಜನತಾ ನ್ಯಾಯಾಲಯದಲ್ಲಿ ಬಿಜೆಪಿ ವಿರುದ್ಧ ಜನಜಾಗೃತಿ ಮೂಡಿಸಲು ಪಕ್ಷದ ಉನ್ನತ ನಾಯಕರು ಸಜ್ಜುಗೊಂಡಿದ್ದಾರೆ. ಸಿದ್ದರಾಮೋತ್ಸವ ಮತ್ತು ಸ್ವತಂತ್ರ ನಡಿಗೆ ಕಾರ್ಯಕ್ರಮಗಳು ಪಕ್ಷದ ಸಂಘಟನೆಗೆ ಪ್ರೇರೆಪಣೆ ನೀಡಿದ್ದು, ರಾಹುಲ್‍ಗಾಂಧಿ ಅವರ ಪಾದಯಾತ್ರೆ ಮತ್ತಷ್ಟು ಶಕ್ತಿ ತುಂಬುವ ಉತ್ಸಾಹ ವ್ಯಕ್ತವಾಗಿದೆ.

ಈ ನಡುವೆ ಬಿಜೆಪಿ ಸರ್ಕಾರದ ವಿರುದ್ಧ ಹಂತಹಂತವಾಗಿ ಜಿಲ್ಲೆ ಮತ್ತು ಕ್ಷೇತ್ರಗಳ ಮಟ್ಟದಲ್ಲಿ ಪ್ರತಿಭಟನೆ ಆಯೋಜಿಸಲು ನಿರ್ಧರಿಸಲಾಗಿದೆ. ನಿರಂತರವಾದ ಕೋಮು ಗಲಭೆಗಳಿಂದ ಹೈರಾಣಾಗಿರುವ ಜನಸಾಮಾನ್ಯರು ಶಾಂತಿ-ಸುವ್ಯವಸ್ಥೆ ಬಯಸುತ್ತಿದ್ದು, ಬಿಜೆಪಿಯೇ ಮತೀಯ ಮತ್ತು ಕೋಮುವಾದಗಳಿಗೆ ಪ್ರಚೋದನೆ ನೀಡುತ್ತಿದೆ.

ಪ್ರತಿಪಕ್ಷವಾಗಿ ನಾವು ಜನರ ಪರವಾಗಿ ಧ್ವನಿ ಎತ್ತಬೇಕು ಎಂದು ಇಂದು ನಡೆದ ಹಿರಿಯ ನಾಯಕರ ಸಭೆಯಲ್ಲಿ ಚರ್ಚೆಗಳಾಗಿವೆ ಎಂದು ಮೂಲಗಳು ತಿಳಿಸಿವೆ. ಪಕ್ಷದಲ್ಲಿ ಒಡಕು ಮೂಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ. ಪ್ರಯತ್ನ ಮಾಡುವವರು ಮಾಡುತ್ತಲೇ ಇರಲಿ, ನಾವು ನಮ್ಮ ಮಟ್ಟಿಗೆ ಪಕ್ಷ ಸಂಘಟನೆ ಮತ್ತು ಚುನಾವಣಾ ತಯಾರಿಗಳತ್ತ ಗಮನ ಹರಿಸೋಣ ಎಂದು ರಣದೀಪ್‍ಸಿಂಗ್ ಸುರ್ಜೆವಾಲ ಸಲಹೆ ನೀಡಿದ್ದಾರೆ. ಪಕ್ಷದ ಪ್ರಚಾರ ಸಮಿತಿ ಕಚೇರಿ ಉದ್ಘಾಟನೆ ಜತೆಗೆ ಸಭೆ ಮಹತ್ವದ ಚರ್ಚೆಗೆ ನಾಂದಿ ಹಾಡಿದೆ.

Articles You Might Like

Share This Article