ಉಚಿತ ವಿದ್ಯುತ್ ಕಾಂಗ್ರೆಸ್‍ನ ಸುಳ್ಳು ಡಂಗೂರ : ಸುನೀಲ್‍ಕುಮಾರ್

Social Share

ಬೆಂಗಳೂರು,ಜ.13- ಅಧಿಕಾರದಲ್ಲಿದ್ದಾಗ ರೈತರ ಕೃಷಿ ಪಂಪ್ ಸೆಟ್‍ಗಳಿಗೆ ಸಂಪರ್ಕ ನೀಡದೇ ಸತಾಯಿಸಿದವರು ಈಗ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡುತ್ತೇವೆ ಎಂದು ಡಂಗೂರ ಸಾರುತ್ತಿರುವುದು ಈ ಶತಮಾನದ ಅತಿದೊಡ್ಡ ಸುಳ್ಳು ಎಂದು ಇಂಧನ ಹಾಗೂ ಕನ್ನಡ ಸಂಸ್ಕ್ರತಿ ಸಚಿವ ವಿ.ಸುನೀಲ್‍ಕುಮಾರ್ ವ್ಯಂಗ್ಯವಾಡಿದ್ದಾರೆ.

ತಾವು ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದ್ದ ಮಹಾನ್ ಆರ್ಥಿಕ ತಜ್ಞರೊಬ್ಬರು ಈಗ 200 ಯುನಿಟ್ ಉಚಿತ ವಿದ್ಯುತ್ ನೀಡುವ ಭರವಸೆ ನೀಡಿದ್ದಾರೆ. ಇದು ಜನಹಿತದ ಹೇಳಿಕೆಯಲ್ಲ. ಎಸ್ಕಾಂಗಳನ್ನು ಖಾಸಗಿಕರಣಗೊಳಿಸುವುದೇ ಈ ಸುಳ್ಳು ಭರವಸೆಯ ಹಿಂದಿರುವ ಉದ್ದೇಶ ಎಂದು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಎಸ್ಕಾಂಗಳನ್ನು ಖಾಸಗಿಕರಣ ಮಾಡುವುದೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಅಂತಿಮ ಗುರಿ. ಉಚಿತ ವಿದ್ಯುತ್ ನಿಂದ ಎಸ್ಕಾಂಗಳ ಮೇಲೆ ಇನ್ನಷ್ಟು ಹೊರೆಯಾಗುತ್ತದೆ. ಆಗ ನಷ್ಟದಲ್ಲಿರುವ ಎಸ್ಕಾಂಗಳನ್ನು ಖಾಸಗೀಕರಣ ಮಾಡುವ ಸಂಚು ಈ ಘೋಷಣೆಯ ಹಿಂದೆ ಇದೆ ಎಂದಿದ್ದಾರೆ.

ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ಅಪಘಾತ, 10 ಮಂದಿ ಸಾವು

ಮುಖ್ಯಮಂತ್ರಿಯಾಗಿದ್ದಾಗ ಕತ್ತಲೆಯಲ್ಲಿ ಬಜೆಟ್ ಓದಿದ್ದನ್ನು ಸಿದ್ದರಾಮಯ್ಯ ಮರೆತಿರಬೇಕು. ನೀವು ಅಧಿಕಾರದಲ್ಲಿದ್ದಾಗ ಎಸ್ಕಾಂಗಳನ್ನು ನಷ್ಟಕ್ಕೆ ದೂಡಿದ್ದೀರಿ. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 9000 ಕೋಟಿ ರೂ.ಗಳನ್ನು ಎಸ್ಕಾಂಗಳಿಗೆ ನೀಡಿ ನಿಮ್ಮ ಆಡಳಿತ ವೈಫಲ್ಯವನ್ನು ಸರಿಪಡಿಸಿದ್ದೇವೆ. ಮತಕ್ಕಾಗಿ ಇಂಧನ ಇಲಾಖೆ ಮಾರಾಟ ಮಾಡಬೇಡಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಕೃಷಿ ಪಂಪ್ ಸೆಟ್ ಗಳಿಗೆ ಹೊಸ ಸಂಪರ್ಕ ನೀಡಿರಲಿಲ್ಲ. ಇದರಿಂದ ರೈತರು ಹಾಗೂ ಕೃಷಿ ವಿಸ್ತರಣೆ ಚಟುವಟಿಕೆಗೆ ತೀವ್ರ ಸಮಸ್ಯೆಯಾಗಿತ್ತು. 2016-17 ರಿಂದ ಕೃಷಿ ಪಂಪ್ ಸೆಟ್‍ಗಳಿಗೆ ನೀಡುತ್ತಿದ್ದ ಸಬ್ಸಿಡಿ ಹಣವನ್ನು ವಿದ್ಯುತ್ ಸರಬರಾಜು ಕಂಪನಿಗಳಿಗೆ ನೀಡದೇ ಸತಾಯಿಸಿದರು. ಇದರಿಂದ ರೈತರು ಮಾತ್ರವಲ್ಲ ಉದ್ಯಮಕ್ಕೂ ತೊಂದರೆಯಾಯ್ತು ಎಂದು ದೂರಿದ್ದಾರೆ.

ಸುಮಲತಾ ಅಂಬರೀಶ್ ಬಿಜೆಪಿ ಸೇರ್ಪಡೆ ಬಗ್ಗೆ ಶೀಘ್ರದಲ್ಲೇ ನಿರ್ಧಾರ : ಸಚ್ಚಿದಾನಂದ

ಬಸವರಾಜಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2016ರಿಂದ ಇಲ್ಲಿಯವರೆಗೆ ಹಿಂಬಾಕಿಯೂ ಸೇರಿ 18 ಸಾವಿರ ಕೋಟಿ ಸಬ್ಸಿಡಿ ಹಣವನ್ನು ಎಸ್ಕಾಂಗಳಿಗೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಇಲಾಖೆಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಹಳ್ಳ ಹಿಡಿಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜೋಡಿ ಈಗ ಉಚಿತ ವಿದ್ಯುತ್ ಎಂಬ ಸುಳ್ಳು ಭರವಸೆ ನೀಡುತ್ತಿದ್ದಾರೆ. ದುರಾಡಳಿತ ಹಗರಣದ ಮೂಲಕ ಇಂಧನ ಇಲಾಖೆಯನ್ನು ನಷ್ಟಕ್ಕೆ ದೂಡಿದ್ದೇ ನಿಮ್ಮ ಸರ್ಕಾರದ ಮಹತ್ ಸಾಧನೆ ಎಂದು ಸುನೀಲ್‍ಕುಮಾರ್ ಟೀಕಿಸಿದ್ದಾರೆ.

Congress, Free electricity, Minister, Sunilkumar,

Articles You Might Like

Share This Article