ನವದೆಹಲಿ, ಫೆ.16- ಹಿರಿಯ ನಾಯಕ ಅಶ್ವನಿ ಕುಮಾರ್ ಅವರು ಕಾಂಗ್ರೆಸ್‍ನಿಂದ ನಿರ್ಗಮಿಸಿರುವುದು ಪಕ್ಷದಲ್ಲಿ ಮತ್ತೊಮ್ಮೆ ತೀವ್ರ ಉದ್ವಿಗ್ನತೆಯನ್ನುಂಟುಮಾಡಿದೆ. ಈ ಬಗ್ಗೆ ಪಕ್ಷವು ಮೌನ ವಹಿಸಿದ್ದರೂ ಪಕ್ಷದೊಳಗಿನ ಜಿ-23 ಗುಂಪಿನ ನಾಯಕರು ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಪಕ್ಷದ ಹಿರಿಯ ಧುರೀಣ ಗುಲಾಂ ನಬಿ ಆಜಾದ ಅವರು ಪಕ್ಷದಿಂದ ನಾಯಕರು ಒಬ್ಬರ ನಂತರ ಒಬ್ಬರಂತೆ ಹೊರನಡೆಯುತ್ತಿರುವುದು ಗಂಬೀರ-ಆತಂಕದ ವಿಷಯವಾಗಿದೆ ಎಂದು ನುಡಿದಿದ್ದಾರೆ. ಆಜಾದ್, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ ಮತ್ತು ಲೋಕಸಭಾ ಸದಸ್ಯ ಮನೀಷ್ ತಿವಾರಿ ಅವರು ಇದು ಪಕ್ಷವು ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಮೂವರೂ 2020ರ ಆಗಸ್ಟ್‍ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪಕ್ಷದಲ್ಲಿ ಭಾರೀ ಬದಲಾವಣೆಗಳನ್ನು ತರಬೇಕು ಎಂದು ಪತ್ರ ಬರೆದಿದ್ದ 23 ಹಿರಿಯ ಮುಖಂಡರು ಅಥವಾ ಜಿ-23ರಲ್ಲಿ ಸೇರಿದ್ದಾರೆ.
ಪ್ರಸಕ್ತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರದಿದ್ದರೆ ಮಾರ್ಚ್ 10ರ ಬಳಿಕ ಪಕ್ಷವು ತೀವ್ರ ಆಂತರಿಕ ಸೋಟ ಎದುರಿಸಿದಲ್ಲಿ ಅಚ್ಚರಿಯಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕೆಲವು ನಾಯಕರು ಪ್ರತಿಪಾದಿಸಿದ್ದಾರೆ.
