ಬೆಂಗಳೂರು,ನ.2- ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮರ್ಯಾದೆ ಹರಾಜಾಗುತ್ತಿದ್ದು, ಮೊದಲು ಅವುಗಳನ್ನು ಮುಚ್ಚಿ ನಂತರ ಬೇಕಾದರೆ ಚಂದ್ರಲೋಕಕ್ಕೆ ಟನಲ್ ನಿರ್ಮಾಣ ಮಾಡಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದ ಉದ್ದೇಶಿತ ಟನಲ್ ಯೋಜನೆಯನ್ನು ವಿರೋಧಿಸಿ ಲಾಲ್‌ಬಾಗ್‌ನಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು ಮತ್ತಿತರರ ಜೊತೆ ಸಂವಾದ ನಡೆಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಗರದಲ್ಲಿ ಗುಂಡಿಗಳನ್ನು ಮುಚ್ಚಲು ಯೋಗ್ಯತೆ ಇಲ್ಲದ ಸರ್ಕಾರ ಟನಲ್ ನಿರ್ಮಾಣ ಮಾಡುತ್ತೇನೆಂದು ಬೊಗಳೆ ಬಿಡುತ್ತಿದೆ. ಒಂದು ಕಾಲದಲ್ಲಿ ಬೆಂಗಳೂರು ನಗರವನ್ನು ವಿಶ್ವವೇ ನೋಡುತ್ತಿತ್ತು. ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಉದ್ಯಮಿಗಳು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದು ಕರ್ನಾಟಕದ ಮತ್ತು ಕನ್ನಡಿಗರ ದೌರ್ಭಾಗ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಗುಂಡಿಗಳನ್ನು ಮುಚ್ಚಿ ಪ್ರತಿದಿನ ಆಗುತ್ತಿರುವ ರಸ್ತೆ ಅಪಘಾತಗಳನ್ನು ತಪ್ಪಿಸಿ. ಅಕ್ಟೋಬರ್ 30ರೊಳಗೆ ಗುಂಡಿಗಳನ್ನು ಮುಚ್ಚಬೇಕೆಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಡೆಡ್‌ಲೈನ್ ಮುಗಿದಿದ್ದರೂ ಡೆತ್‌ಗಳು ಮಾತ್ರ ಸಂಭವಿಸುತ್ತಲೇ ಇವೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದರು.
ಸಸ್ಯಕಾಶಿಗೆ ರಾಜ್ಯ ಸರ್ಕಾರ ಗುಂಡಿ ತೋಡುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧವಾಗಿ ಬಿಜೆಪಿಯವರು ಸೇರಿದ್ದೇವೆ. ಸಾಕಷ್ಟು ಜನ ಬಂದಿದ್ದರು. ಮೌನವಾಗಿ ನಾವು ಪ್ರತಿಭಟನೆ ಮಾಡಿದ್ದೇವೆ. ಸುರಂಗ ಯೋಜನೆಯಿಂದ ಬೆಂಗಳೂರಿನ ಪರಿಸರ ಹಾಳಾಗುತ್ತದೆ. ಬೆಂಗಳೂರಿನ ಜನರು ನಿದ್ದೆಗೆಡುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇದು ಟನಲ್ ರಸ್ತೆ ಅಲ್ಲ ವಿಐಪಿ ಕಾರಿಡಾರ್ ಆಗುತ್ತದೆ. ಶೇ.90ರಷ್ಟು ಬಡವರು, ಮಧ್ಯಮ ವರ್ಗದವರು ಬಳಸುವ ಬೈಕ್, ಸೈಕಲ್‌ಗೆ ಪ್ರವೇಶವಿಲ್ಲ. ಕೇವಲ ಕಾರಿಗೆ ಮಾತ್ರ ಪ್ರವೇಶವಿದೆ. ಹಾಗಾಗಿ ಇದು ವಿಐಪಿ ರಸ್ತೆ ಎಂದು ಆಕ್ಷೇಪಿಸಿದರು. ಈ ಯೋಜನೆಗೆ 8 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ. 4 ಸಾವಿರ ಕೋಟಿ ಪಾವತಿ ಮಾಡಬೇಕು. ಇದಕ್ಕಾಗಿ ಸಾಲ ಮಾಡಲು ಹೊರಟಿದ್ದಾರೆ. ಅದಕ್ಕೆ ಬಡ್ಡಿ ಎಲ್ಲಿಂದ ಕೊಡುತ್ತಾರೆ? ಆರ್ಥಿಕ ಪರಿಸ್ಥಿತಿಯನ್ನು ಪಾತಾಳಕ್ಕೆ ತಳ್ಳುವ ಯೋಜನೆ ಇದಾಗಿದೆ. ಭೂಮಿಯ ಆಳದಲ್ಲಿ ಮಾಡಲು ಹೊರಟ್ಟಿದ್ದಾರೆ ಎಂದು ಕಿಡಿಕಾರಿದರು.
3000 ದಶಲಕ್ಷ ವರ್ಷದ ಶಿಲೆಗಳಿವೆ. ಕೆಂಪೇಗೌಡರು ಬೆಂಗಳೂರಿಗೆ ಕೊಟ್ಟ ಕೊಡುಗೆ ಇದು. ಶಿಲೆ ಮೇಲೆ ಬೆಂಗಳೂರು ಇದೆ. ಬೆಂಗಳೂರಿನಲ್ಲಿರುವ ಎಲ್ಲಾ ಪಾರ್ಕ್, ಕೆರೆಗಳನ್ನು ಹುಡುಕುತ್ತಿದ್ದಾರೆ. ಇದು ಮನೆಹಾಳು ಕೆಲಸ ಅಲ್ಲವೇ? ಕೆಂಪೇಗೌಡರ ಆಶಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇದರ ವಿರುದ್ಧ ಜನಾಂದೋಲನ ನಡೆಸಬೇಕು. ಲಾಲ್ ಬಾಗ್ ಬೆಂಗಳೂರಿನ ಶ್ವಾಸಕೋಶ ಇದ್ದಹಾಗೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧಮ್ಕಿ ಹಾಕುವುದು ರಕ್ತಗತವಾಗಿ ಬಂದಿದೆ. ಮೊದಲು ಶಾಸಕ ರಾಮಮೂರ್ತಿ, ಬಳಿಕ ತೇಜಸ್ವಿ ಸೂರ್ಯ, ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್‌ಗೆ ಧಮ್ಕಿ ಹಾಕಿದ್ದಾರೆ. ಕೊರೆಯಲು ಅದು ಕನಕಪುರ ಬಂಡೆ ಅಲ್ಲ. ಬೆಂಗಳೂರಿನ ಬಂಡೆ! ಎಂದು ಅಶೋಕ್ ತಿರುಗೇಟು ನೀಡಿದರು.
