ಬೆಂಗಳೂರು, ಮೇ 31- ನಮ್ಮ ಪಕ್ಷದ ಪ್ರಣಾಳಿಕೆ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬದ್ದವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಸಂಪುಟ ಸಚಿವರು ಮತ್ತು ಅಧಿಕಾರಿಗಳ ಜೊತೆ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಇಂದು ನಡೆದ ಸಭೆಯಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳು ಗ್ಯಾರೆಂಟಿ ಯೋಜನೆ ಜಾರಿಯಿಂದ ಉಂಟಾಗುವ ಆರ್ಥಿಕ ಹೊರೆ ಬಗ್ಗೆ ಪ್ರಸ್ತಾಪಿಸಿ ನಾಲಕ್ಕು ಐದು ಆಯ್ಕೆಗಳನ್ನು ಮುಂದಿಟ್ಟಿದ್ದಾರೆ. ಶುಕ್ರವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳ ಜಾರಿಗೆ ನಾವು ಬದ್ಧರಾಗಿದ್ದೇವೆ. ಅಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ ಎಂದರು.
ನಾವು ನಮ್ಮ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಮಾತಿನ ಬಗ್ಗೆ ಅರಿವಿದೆ. ಈ ಯೋಜನೆಗಳನ್ನು ಕ್ರಮಬದ್ಧವಾಗಿ ಅನುಷ್ಠಾನಕ್ಕೆ ತರುವುದು ನಮ್ಮ ಆದ್ಯತೆ. ಶುಕ್ರವಾರ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚೆ ಮಾಡಿ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇವೆ. ಯಾರು ಕೂಡ ಊಹಾಪೋಹಗಳಿಗೆ ಅವಕಾಶ ನೀಡಬೇಡಿ ಎಂದು ಹೇಳಿದರು.
ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ, ಕ್ರಮ ಬದ್ದವಾಗಿ ಗ್ಯಾರಂಟಿ ಅನುಷ್ಠಾನ; ಡಿಸಿಎಂ ಡಿಕೆಶಿ
ಕುಮಾರಸ್ವಾಮಿ ಅವರು ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಹಿಸಿ, “ಅವರು ಏನಾದರೂ ಹೇಳಿಕೊಳ್ಳಲಿ. ಸಲಹೆಯಾದರೂ ನೀಡಲಿ, ಒತ್ತಡ ಬೇಕಾದರೂ ಹಾಕಲಿ, ಹೋರಾಟ ಬೇಕಾದರೂ ಮಾಡಲಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವವರನ್ನು ತಡೆಯಲು ಸಾಧ್ಯವಿಲ್ಲ ಎಂದರು.
ಬಿಜೆಪಿ ಈ ಹಿಂದೆ ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ಆಗ ಮಾತನಾಡಲಿಲ್ಲ. ರೈತರಿಗೆ 10 ಗಂಟೆ ವಿದ್ಯುತ್ ಉಚಿತ ನೀಡುವುದಾಗಿ ಹೇಳಿದ್ದರು. ಆ ಬಗ್ಗೆಯೂ ಮಾತನಾಡಲಿಲ್ಲ. ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳ ಪೈಕಿ ಕೇವಲ 50 ಭರವಸೆ ಈಡೇರಿಸಿದ್ದಾರೆ. ಆಗಲೂ ಮಾತನಾಡಲಿಲ್ಲ. ನಾವು ನಮ್ಮ ಯಾಜನೆಗಳನ್ನು ಕ್ರಮಬದ್ಧವಾಗಿ, ನ್ಯಾಯಬದ್ಧವಾಗಿ ಜಾರಿ ಮಾಡಿ ನ್ಯಾಯ ಒದಗಿಸಬೇಕು. ರಾಜ್ಯ ಹಾಗೂ ಮತದಾರರು ಉಳಿಯಬೇಕು ಅದು ನಮ್ಮ ಗುರಿ” ಎಂದು ತಿಳಿಸಿದರು.
ಈ ಯೋಜನೆಗೆ ಷರತ್ತು ಅನ್ವಯವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಇಲ್ಲಿ ಷರತ್ತು ಗಿಂತ ಒಂದು ವ್ಯವಸ್ಥಿತವಾಗಿ ಜಾರಿ ಮಾಡುವುದು ಮುಖ್ಯ. ಉಚಿತ ಬಸ್ ಪ್ರಯಾಣ ವಿಚಾರದಲ್ಲಿ ಯಾರಿಗೆ, ಯಾವ ಬಸ್ ಎಂಬ ವ್ಯವಸ್ಥಿತ ರೂಪದಲ್ಲಿ ಯೋಜನೆ ಜಾರಿ ಆಗಬೇಕಿದೆ. ನಿರುದ್ಯೋಗ ಭತ್ಯೆ ವಿಚಾರದಲ್ಲಿ ಪದವೀಧರ ಮನೆಯಲ್ಲಿದ್ದಾನಾ ಅಥವಾ ಖಾಸಗಿ ಕೆಲಸದಲ್ಲಿ ಇದ್ದಾನಾ? ಖಾಸಗಿಯಲ್ಲಿ ಆತನ ಪರಿಸ್ಥಿತಿ ಏನು? ಎಂಬ ಲೆಕ್ಕಾಚಾರ ಮಾಡಬೇಕು. ನಾವು ವಿರೋಧ ಪಕ್ಷಗಳಾಗಲಿ ಅಥವಾ ಬೇರೆಯವರ ಒತ್ತಡಕ್ಕೆ ಮಣಿಯುವುದಿಲ್ಲ” ಎಂದು ತಿಳಿಸಿದರು.
ಗ್ಯಾರಂಟಿ ಮತ್ತಷ್ಟು ವಿಳಂಬ: ಶುಕ್ರವಾರ ಸಂಪುಟ ಸಭೆ
ನಿಮ್ಮ ಯೋಜನೆಗಳಿಗೆ ಆರ್ಥಿಕ ಇಲಾಖೆ ಒಪ್ಪಿಗೆ ನೀಡಿದೆಯೇ ಎಂಬ ಪ್ರಶ್ನೆಗೆ, “ಆರ್ಥಿಕ ಇಲಾಖೆ ಅಧಿಕಾರಿಗಳು ಅವರ ಸಲಹೆ ನೀಡಿದ್ದಾರೆ. ಅನೇಕ ಆಯ್ಕೆ ನೀಡಿದ್ದಾರೆ. ನಾವು ಅದನ್ನು ಅಧ್ಯಯನ ಮಾಡಿ, ಚರ್ಚೆ ಮಾಡುತ್ತೇವೆ” ಎಂದು ತಿಳಿಸಿದರು.
Congressguarantee, #DCMDKShivakumar, #Ministers, #meeting,