ಬೆಂಗಳೂರು, ಜೂ.1 – ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರದ ನಡುವೆ ಅಂತರ ಸೃಷ್ಟಿಯಾಗಿವೆಯೇ ಎಂಬ ಚರ್ಚೆಗಳು ಅನುಮಾನ ಕಾರಣವಾಗಿವೆ. ಪಂಚಖಾತ್ರಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಏಕಾಂಗಿಯಾಗಿ ಶ್ರಮಿಸುತ್ತಿದ್ದು ಸಭೆಗಳನ್ನು ನಡೆಸುತ್ತಿದ್ದಾರೆ.
ಇದೇ ವೇಳೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬೀಳುತ್ತಿವೆ. ಆದರೆ ಎಲ್ಲಿಯೂ ಕಾಂಗ್ರೆಸಿಗರು ಪಂಚಖಾತ್ರಿ ಯೋಜನೆಗಳನ್ನು ಸಮರ್ಥಿಸಿಕೊಳ್ಳುವ ಗೋಜಿಗೆ ಹೋಗದೆ ತಟಸ್ಥ ನಿಲುವು ಅನುಸರಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಿಜೆಪಿಯ ಕೆಲವು ನಾಯಕರು ಮನೆಮನೆಗೆ ತೆರಳಿ ವಿದ್ಯುತ್ ಬಿಲ್ ಪಾವತಿಸದಂತೆ ಜನರಿಗೆ ಪ್ರಚೋದನೆ ನೀಡುತ್ತಿದ್ದಾರೆ. ಇದಕ್ಕೆ ಕ್ಷೇತ್ರಗಳ ಮಟ್ಟದಲ್ಲಿ ಪ್ರತ್ಯುತ್ತರಿಸುವ ಗೋಜಿಗೆ ಕಾಂಗ್ರೆಸಿಗರು ಹೋಗಿಲ್ಲ. ಸಚಿವರುಗಳು ಮಾತ್ರ ತಮ್ಮ ಸರ್ಕಾರ ಪಂಚಖಾತ್ರಿಗಳನ್ನು ಜಾರಿಗೆ ತಂದೇ ತರುತ್ತದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಆದರೆ ಯಾವಾಗಿನಿಂದ ಎಂಬ ಮಾಹಿತಿಯನ್ನು ಯಾರೂ ಬಿಟ್ಟುಕೊಡುತ್ತಿಲ್ಲ.
ಮೂಲಗಳ ಪ್ರಕಾರ ಮುಖ್ಯಮಂತ್ರಿ ಹೊರತುಪಡಿಸಿದರೆ ಬಹುತೇಕರಿಗೆ ಇದರ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ. ಸಿದ್ಧರಾಮಯ್ಯನವರು ಪಂಚಖಾತ್ರಿಗಳ ಜಾರಿಯ ಒಟ್ಟು ಕೀರ್ತಿಯನ್ನು ತಾವೇ ಪಡೆದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಎಲ್ಲದರಲ್ಲೂ ರಹಸ್ಯ ಕಾಪಾಡಿಕೊಳ್ಳುತ್ತಿದ್ದಾರೆ ಎಂಬ ಚಡಪಡಿಕೆಗಳು ಕೇಳಿಬಂದಿವೆ.
ಐದು ದಿನಗಳಲ್ಲಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಬಂದ್
ಪಾರದರ್ಶಕತೆ ಹಾಗೂ ಮಾಹಿತಿಯ ಕೊರತೆಯಿಂದ ಕಾಂಗ್ರೆಸಿನ ಶಾಸಕರು ಮತ್ತು ಸಚಿವರು ಸಾರ್ವಜನಿಕವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಇಲಾಖಾ ಸಚಿವರುಗಳಾದ ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ ಮತ್ತಿತರರು ಯಾವುದೇ ಷರತ್ತುಗಳಿಲ್ಲದೆ ಯೋಜನೆ ಜಾರಿಗೊಳಿಸುತ್ತೇವೆ ಎನ್ನುತ್ತಿದ್ದಾರೆ.
ಆದರೆ ಸಚಿವರಾದ ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ, ಶರಣ್ ಪ್ರಕಾಶ್ ಪಾಟೀಲ್ ಮತ್ತಿತರರು ಯೋಜನೆಗಳಿಗೆ ಷರತ್ತುಗಳು ಅನ್ವಯಯವಾಗುತ್ತವೆ ಎನ್ನುತ್ತಿದ್ದಾರೆ.
ಈ ಗೊಂದಲಗಳು ನಾಳಿನ ಸಚಿವ ಸಂಪುಟದವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಯೋಜನೆ ಜಾರಿಯ ಬಗ್ಗೆ ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡ ಬಳಿಕ ಕಾಂಗ್ರೆಸಿಗರು ಟೀಕೆಗಳಿಗೆ ಕ್ಷೇತ್ರಮಟ್ಟದಲ್ಲಿ ಉತ್ತರ ನೀಡಬೇಕು. ಚುನಾವಣೆಗೂ ಮೊದಲು ಕಾಂಗ್ರೆಸ್ ಘೋಷಿಸಿದ್ದ 5 ಗ್ಯಾರಂಟಿಗಳ ಕಾರ್ಡುಗಳನ್ನು ಮನೆಮನೆಗೆ ತಲುಪಿಸುವಲ್ಲಿ ಪಕ್ಷ ನಿರ್ಲಕ್ಷ್ಯ ತೋರಿಸಿತ್ತು.
ಜಾಹಿರಾತು ಹಾಗೂ ವಿಪಕ್ಷಗಳ ಟೀಕೆಗಳಿಂದಾಗಿ ಯಾಂತ್ರೀಕೃತ ಪ್ರಚಾರ ದೊರೆತಿದೆ. ಯೋಜನೆಗಳ ಅನುಷ್ಠಾನದ ಬಳಿಕವಾದರೂ ಅದನ್ನು ಪ್ರತಿ ಮನೆಗೆ ತಲುಪಿಸುವ ಕಾರ್ಯಯೋಜನೆ ಹಮ್ಮಿಕೊಳ್ಳಬೇಕೆಂಬುದು ಮುಖ್ಯಮಂತ್ರಿಯವರ ಆಶಯ. ಆದರೆ ಪಕ್ಷದ ವತಿಯಿಂದ ಈ ನಿಟ್ಟಿನಲ್ಲಿ ಉತ್ಸಾಹ ಕಂಡುಬರುತ್ತಿಲ್ಲ ಎಂದು ಹೇಳಲಾಗುತ್ತಿದೆ. ಸುಮಾರು 70 ರಿಂದ 80 ಸಾವಿರ ಕೋಟಿ ರೂ.ಗಳ ವೆಚ್ಚದ ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಿಸದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಗುತ್ತದೆ ಎಂಬ ಆತಂಕ ಸಿದ್ಧರಾಮಯ್ಯ ಅವರನ್ನು ಕಾಡುತ್ತಿದೆ.
ಗ್ಯಾರಂಟಿ ಚಿಂತೆಯಲ್ಲಿ ಸಿಎಂ ಸಿದ್ದರಾಮಯ್ಯ: 15ಕ್ಕೂ ಹೆಚ್ಚು ಸಭೆ
ಒಂದು ವೇಳೆ ಲೋಕಸಭೆಯ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಬರದಿದ್ದರೆ ನಾಯಕತ್ವದ ಬದಲಾವಣೆ ಕೂಗು ಏಳಲಿದೆ. ಉದ್ದೇಶಪೂರ್ವಕವಾಗಿ ರಾಜಕೀಯವಾದ ಈ ಅನುಕೂಲಕ್ಕಾಗಿಯೇ ಪಕ್ಷ ಪಂಚಖಾತ್ರಿ ಯೋಜನೆಗಳ ಪ್ರಚಾರಕ್ಕೆ ಆಸಕ್ತಿ ತೋರಿಸುತ್ತಿಲ್ಲ ಎಂಬ ವಾದಗಳಿವೆ. ಆದರೆ ಪಕ್ಷ ಮತ್ತು ಸರ್ಕಾರದ ನಡುವಿನ ಅಂತರ ಹೆಚ್ಚಿದ್ದು, ಇದು ವಿಪಕ್ಷಗಳಿಗೆ ಆಹಾರವಾಗುವ ಸಾಧ್ಯತೆಯಿದೆ.
ಪಂಚಖಾತ್ರಿ ಯೋಜನೆಗಳ ಬಳಿಕ ಅದರಲ್ಲಿ ಕೇಂದ್ರದ ಅನುದಾನದ ಪಾತ್ರ ಹೆಚ್ಚಿದೆ ಎಂದು ಬಿಜೆಪಿಯವರು ವ್ಯಾಪಕ ಪ್ರಚಾರ ನಡೆಸಲಿದ್ದು ಅದಕ್ಕೆ ಎದುರೇಟು ನೀಡಲು ಕಾಂಗ್ರೆಸ್ ಮತ್ತು ಸರ್ಕಾರ ಒಟ್ಟಾಗಿ ಶ್ರಮಿಸಬೇಕು ಎಂಬ ಚರ್ಚೆಗಳು ನಡೆಯುತ್ತಿವೆ.
congressguarantee, #government, #Congress,