ಬೆಂಗಳೂರು,ಮೇ 31- ಚುನಾವಣೆ ವೇಳೆ ಕಾಂಗ್ರೆಸ್ ನೀಡಿರುವ ಪಂಚಖಾತ್ರಿಗಳು ಹಾಗೂ ಸರ್ಕಾರದ ಮುಂದಿನ ಹಾದಿ ಕುರಿತು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಂಪುಟದ ಎಲ್ಲಾ ಸಚಿವರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಿತು.
ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲಾ ಸಚಿವರು ಭಾಗಿಯಾಗಿದ್ದರು.
ಪಂಚಖಾತ್ರಿಗಳನ್ನು ಯಾವಾಗಿನಿಂದ ಮತ್ತು ಯಾವ ರೀತಿ ಜಾರಿಗೊಳಿಸಬೇಕು ಎಂಬುದು ಸಭೆಯ ಕಾರ್ಯಸೂಚಿಯಾಗಿತ್ತು. ಪ್ರತಿಯೊಬ್ಬ ಸಚಿವರಿಂದಲೂ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಧಿಕಾರಿಗಳು ಕೂಡ ಸಾಧಕ-ಬಾಧಕಗಳ ಕುರಿತು ವಿವರಣೆ ನೀಡಿದ್ದಾರೆ.
ಪಂಚಖಾತ್ರಿ ಜಾರಿಯಾಗುವುದಿಲ್ಲ ಎಂಬರ್ಥದಲ್ಲಿ ಪ್ರತಿಪಕ್ಷಗಳು ಸಾರ್ವಜನಿಕರಲ್ಲಿ ಅಭಿಪ್ರಾಯ ಸೃಷ್ಟಿಸುತ್ತಿವೆ. ಇದನ್ನು ಸವಾಲಾಗಿ ಸ್ವೀಕರಿಸಿರುವ ಕಾಂಗ್ರೆಸ್ ಶತಾಯ-ಗತಾಯ ಯೋಜನೆಯನ್ನು ಜಾರಿಮಾಡುವ ಮೂಲಕ ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಮುಂದಾಗಿದೆ.
ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ ಸಾಧ್ಯತೆ
ಅದಕ್ಕಾಗಿ ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆಯಿದ್ದು, ಪೂರ್ವಭಾವಿಯಾಗಿ ಇಂದು ಎಲ್ಲ ಸಚಿವರು ಹಾಗೂ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಲಾಗಿದೆ. ಯೋಜನೆಗಳ ಜಾರಿಗೆ ಸಚಿವರುಗಳಿಂದ ಒಮ್ಮತದ ಅಭಿಪ್ರಾಯ ಕೇಳಿಬಂದಿದೆ.
ನಮ್ಮ ಗೆಲುವಿಗೆ ಪಂಚಖಾತ್ರಿಗಳು ಮಹತ್ವದ ಕೊಡುಗೆ ನೀಡಿವೆ. ಈ ನಿಟ್ಟಿನಲ್ಲಿ ಯಾವುದೇ ಹಿಂಜರಿಕೆ ಇಲ್ಲದೆ ಷರತ್ತು ರಹಿತವಾಗಿ ಯೋಜನೆಗಳನ್ನು ಜಾರಿಗೊಳಿಸಬೇಕು. ಅದಕ್ಕೆ ಪೂರಕವಾದ ಹಣಕಾಸು ಸಂಪನ್ಮೂಲಗಳನ್ನು ಕ್ರೂಢೀಕರಿಸಲು ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕಿದೆ ಎಂದು ಸಚಿವರು ಸಲಹೆ ನೀಡಿದ್ದಾರೆ.
ಸಾರ್ವಜನಿಕ ವಲಯದಲ್ಲಿ ತಪ್ಪು ಮಾಹಿತಿಗಳನ್ನು ಬಿತ್ತಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಜನಜಾಗೃತಿ ಮೂಡಿಸಬೇಕು. ಇದರಿಂದ ಲಾಭ ಪಡೆದುಕೊಂಡ ಫಲಾನುಭವಿಗಳ ಮಾಹಿತಿಯನ್ನು ಕಲೆ ಹಾಕಬೇಕು. ಪಕ್ಷದ ಕಾರ್ಯಕರ್ತರು ಕಾಲಕಾಲಕ್ಕೆ ಅವರ ಜತೆ ಸಂಪರ್ಕದಲ್ಲಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನು ನಿವಾರಣೆ ಮಾಡಬೇಕು. ಯೋಜನೆ ಜಾರಿಯಿಂದ ರಾಜ್ಯದ ಸುಮಾರು 4 ಕೋಟಿಗೂ ಅಧಿಕ ಮೊತ್ತದ ಜನರಿಗೆ ಲಾಭವಾಗಲಿದೆ.
ಸರ್ಕಾರಕ್ಕೆ ಹೊರೆ ಎನ್ನುವುದಕ್ಕಿಂತಲೂ ಇದು ಬೆಲೆ ಏರಿಕೆಯಿಂದ ತತ್ತರಿಸಿರುವ ಜನರಿಗೆ ಸಂಜೀವಿನಿಯಾಗಲಿದೆ. ಬದುಕು ನಡೆಸಲು ಕಷ್ಟ ಪಡುವವರಿಗೆ ಹೊಸ ಭರವಸೆಗಳನ್ನು ಹುಟ್ಟಿಸಲಿದೆ. ವಿದ್ಯುತ್ ಶುಲ್ಕ, ಗ್ಯಾಸ್ ಸಿಲಿಂಡರ್ ಖರೀದಿ, ಇತರ ವಿಚಾರಗಳು ಸರಳೀಕರಣಗೊಂಡರೆ ಜನ ತಮ್ಮ ದುಡಿಮೆಯ ಆದಾಯವನ್ನು ಇತರ ಉದ್ದೇಶಗಳಿಗೆ ಬಳಕೆ ಮಾಡುವ ಮೂಲಕ ರಾಜ್ಯದ ಆರ್ಥಿಕಾಭಿವೃದ್ಧಿಗೆ ನೆರವು ನೀಡಲಿದ್ದಾರೆ.
ಬೆಂಗಳೂರು ರೌಡಿಗಳಿಗೆ ಎಚ್ಚರಿಕೆ ಕೊಟ್ಟ ಪೊಲೀಸ್ ಆಯುಕ್ತ ದಯಾನಂದ್
ಭವಿಷ್ಯದಲ್ಲಿ ಕರ್ನಾಟಕ ಬೆಲೆ ಏರಿಕೆ ಹಾಗೂ ಹಣದುಬ್ಬರದಿಂದ ಚೇತರಿಸಿಕೊಳ್ಳಲಿದೆ. ಹೀಗಾಗಿ ಯೋಜನೆಯನ್ನು ಜಾರಿಗೊಳಿಸುವ ವಿಷಯದಲ್ಲಿ ಯಾವುದೇ ರಾಜಿಗಳು ಬೇಡ ಎಂದು ಚರ್ಚೆಗಳಾಗಿವೆ.
ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಸವಾಲನ್ನು ಆರ್ಥಿಕ ಇಲಾಖೆ ಸಮರ್ಥವಾಗಿ ನಿಭಾಯಿಸಲಿದೆ. ಇದರ ಜತೆಗೆ ಕಂದಾಯ, ನೋಂದಣಿ ಮತ್ತು ಮುದ್ರಾಂಕ, ಅಬಕಾರಿ, ಸಾರಿಗೆ, ಇತರ ಇಲಾಖೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ತೆರಿಗೆ ಸೋರಿಕೆಯನ್ನು ತಡೆದು ಪೂರ್ಣ ಪ್ರಮಾಣದ ವಸೂಲಿಗೆ ಕ್ರಮ ಕೈಗೊಳ್ಳಬೇಕು. ಈ ಹಂತದಲ್ಲಿ ಜನರಿಗೆ ಕಿರುಕುಳವಾಗದಂತೆ ಎಚ್ಚರಿಕೆ ವಹಿಸಬೇಕು. ತೆರಿಗೆ ತಪ್ಪಿಸುತ್ತಿರುವವರಿಗೆ ಕಾನೂನಿನ ತಿಳುವಳಿಕೆ ಮೂಡಿಸಬೇಕು ಎಂದು ಆಯಾ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ವಿರೋಧ ಪಕ್ಷಗಳು ಗೊಂದಲ ಮೂಡಿಸುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿವೆ. ಯೋಜನೆ ಜಾರಿಯಾದ ಬಳಿಕ ಅವರ ಬೇಳೆ ಬೇಯುವುದಿಲ್ಲ. ಆದರೂ ಕೆಲವು ಕೊಂಕುಗಳನ್ನು ಹುಡುಕುವ ಯತ್ನ ಮಾಡುತ್ತಾರೆ. ಇದಕ್ಕೆ ಕಾಲಕಾಲಕ್ಕೆ ಉತ್ತರ ನೀಡಲು ಪ್ರತಿಯೊಬ್ಬ ಸಚಿವರೂ ಸಿದ್ಧರಾಗಬೇಕು. ಟೀಕೆಗಳು, ಸಲಹೆಗಳನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು. ಆದರೆ, ತಪ್ಪು ಮಾಹಿತಿಗಳನ್ನು ಸಹಿಸಬಾರದು.
ಪ್ರತ್ಯುತ್ತರಿಸುವ ಸಂದರ್ಭದಲ್ಲಿ ಮಾತಿನ ಹಿಡಿತ ಕಾಯ್ದುಕೊಳ್ಳುವಂತೆಯೂ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
Congressguarantees, #CMSiddaramaiah, #meeting, #minister,