Thursday, June 1, 2023
Homeಇದೀಗ ಬಂದ ಸುದ್ದಿರಾಜ್ಯಾದ್ಯಂತ ಹೆಚ್ಚಾಯ್ತು 'ಕಾಂಗ್ರೆಸ್ ಗ್ಯಾರಂಟಿ' ಗಲಾಟೆ

ರಾಜ್ಯಾದ್ಯಂತ ಹೆಚ್ಚಾಯ್ತು ‘ಕಾಂಗ್ರೆಸ್ ಗ್ಯಾರಂಟಿ’ ಗಲಾಟೆ

- Advertisement -

ಬೆಂಗಳೂರು,ಮೇ 26- ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಕುರಿತು ರಾಜ್ಯಾದ್ಯಂತ ಗಲಾಟೆಗಳು ಹೆಚ್ಚಾಗುತ್ತಿದ್ದರೂ ಸರ್ಕಾರ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡದೆ, ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.

ವಿದ್ಯುತ್ ಬಿಲ್ ಹಾಗೂ ಸಾರಿಗೆ ಬಸ್‍ಗಳಲ್ಲಿ ಪ್ರಯಾಣ ದರ ಪಾವತಿಸುವುದಿಲ್ಲ ಎಂದು ಗ್ರಾಮೀಣ ಭಾಗದಲ್ಲಿ ಗಲಾಟೆಗಳು ಹೆಚ್ಚಾಗುತ್ತಿವೆ. ಸರ್ಕಾರಿ ಅಕಾರಿಗಳು ಹಾಗೂ ಜನ ಸಾಮಾನ್ಯರ ಜೊತೆ ಸಂಘರ್ಷ ನಡೆಯುತ್ತಿದೆ. ದಿನೇ ದಿನೇ ಈ ಕುರಿತ ಘಟನೆಗಳ ವಿಡಿಯೋಗಳು ಸಾರ್ವಜನಿಕವಾಗಿ ವೈರಲ್ ಆಗುತ್ತಿವೆ.

ಸರ್ಕಾರ ಸಂಸ್ಥೆಗಳು ನಷ್ಟ ಅನುಭವಿಸುತ್ತಿವೆ, ಕಾನೂನು ಸಮಸ್ಯೆ ಸೃಷ್ಟಿಯಾಗುತ್ತಿದೆ. ಕೆಲವು ಕಡೆ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿವೆ. ಆದರೂ ಸರ್ಕಾರ ಸರಿಯಾದ ಸ್ಪಷ್ಟನೇ ನೀಡದೆ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಎಎಪಿ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಯನ್ನು ಜಾರಿಗೆ ತರುವುದಾಗಿ ಚುನಾವಣೆ ಮೊದಲು ಭರವಸೆ ನೀಡಿತ್ತು. ಜನ ಕಾಂಗ್ರೆಸ್‍ಗೆ ನಿರೀಕ್ಷೆ ಮೀರಿ ಮತ ಹಾಕಿದ್ದು, ಸ್ಪಷ್ಟ ಬಹುಮತದೊಂದಿಗೆ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಿದೆ. ಹೇಳಿಕೆ ನೀಡಿದಂತೆ ಮೊದಲ ಸಚಿವ ಸಂಪುಟದಲ್ಲಿ ಐದು ಗ್ಯಾರಂಟಿ ಯೋಜನೆಗಳಿಗೆ ಅಂಗೀಕಾರ ನೀಡಲಾಗಿದ್ದು, ಸರ್ಕಾರಿ ಆದೇಶ ಕೂಡ ಜಾರಿ ಮಾಡಲಾಗಿದೆ. ಆದರೆ ಅನುಷ್ಠಾನ ಯಾವಾಗ, ಫಲಾನುಭವಿಗಳು ಯಾರು ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕಾಂಗ್ರೆಸ್ ವಿರುದ್ಧ ಮುಗಿ ಬಿದ್ದಿವೆ. ಶೀಘ್ರವೇ ಯೋಜನೆಗಳನ್ನು ಜಾರಿಗೊಳಿಸದಿದ್ದರೆ ಬೀದಿಗಿಳಿಯುವುದಾಗಿ ಎಚ್ಚರಿಸುತ್ತಿವೆ. ವಿಪಕ್ಷಗಳ ಹೇಳಿಕೆ ಜನ ಸಾಮಾನ್ಯರನ್ನು ಮತ್ತಷ್ಟು ಪ್ರಚೋದಿಸುತ್ತಿದೆ. ಹಾಗಾಗಿ ಸಂಘರ್ಷದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿವೆ.

ಚುನಾವಣಾ ಪ್ರಚಾರದ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೂನ್ 1ರಿಂದ ಯಾರು ವಿದ್ಯುತ್ ಬಿಲ್ ಕಟ್ಟುವಂತಿಲ್ಲ ಎಂದು ಹೇಳಿದ್ದರು. ಅದೇ ವಿಡಿಯೋವನ್ನು ವೈರಲ್ ಮಾಡಿ ಜನರನ್ನು ಪ್ರಚೋದಿಸಲಾಗುತ್ತಿದೆ. ಡಿ.ಕೆ.ಶಿವಕುಮಾರ್ ಹೇಳಿಕೆಯ ಪ್ರಕಾರವೇ ಜೂನ್‍ನಿಂದ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಆದರೆ ಏಪ್ರಿಲ್ ಮತ್ತು ಮೇ ತಿಂಗಳ ಶುಲ್ಕ ಪಾವತಿ ಮಾಡುವುದಿಲ್ಲ ಎಂದು ಜನ ಪಟ್ಟು ಹಿಡಿದಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಇದರ ಹಿಂದೆ ವಿರೋಧ ಪಕ್ಷಗಳ ಚಿತಾವಣೆ ಇದೆ ಎಂಬುದನ್ನು ಕಾಂಗ್ರೆಸ್ ಅನೌಪಚಾರಿಕವಾಗಿ ಹೇಳುತ್ತಿದೆ. ಆದರೆ ಅಧಿಕೃತವಾಗಿ ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದೆ. ಇದು ಸೂಕ್ಷ್ಮ ವಿಚಾರವಾಗಿದ್ದು ಯಾವುದೇ ಹೇಳಿಕೆ ನೀಡಿದರೂ ಜನರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಕಾರಣಕ್ಕೆ ಕೈ ಕಲಿಗಳು ಮೌನಕ್ಕೆ ಶರಣಾಗಿದ್ದಾರೆ.

ಮೊದಲ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆ ಜಾರಿ ಕುರಿತು ನಡೆದಿರುವ ವಿಸ್ತೃತ ಚರ್ಚೆಯ ಬಗ್ಗೆ ಮಾಹಿತಿ ನೀಡಲು ಮುಂದಾಗಿದ್ದರು. ಅದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಡ್ಡಿ ಪಡಿಸಿದರು. ಮುಂದಿನ ಸಚಿವ ಸಂಪುಟದಲ್ಲಿ ಎಲ್ಲಾ ವಿಚಾರಗಳನ್ನು ಚರ್ಚಿಸಿ ನಂತರ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿ ಕೈ ತೊಳೆದುಕೊಂಡರು.

ಯೋಜನೆಯ ಫಲಾನುಭವಿಗಳ ಬಗ್ಗೆ ಸ್ಪಷ್ಟತೆ ಇಲ್ಲದೆ ಜನರು ಗೊಂದಲದಲ್ಲಿದ್ದಾರೆ. ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿಸುವವರು, ಮಧ್ಯಮ ವರ್ಗಕ್ಕಿಂತ ಮೇಲ್ಪಟ್ಟವರು ಯೋಜನೆಯ ಫಲಾನುಭವಿಗಳಾಗಲಿದ್ದಾರೆಯೇ ಎಂಬ ಗೊಂದಲ ಕಾಡುತ್ತಿದೆ. ಜನ ಹೊಂದಿರುವ ಪರ್ಯಾಯ ಆದಾಯಗಳನ್ನು ಜೊಡಿಸಿ ಯೋಜನೆ ಜಾರಿ ಮಾಡಲು ಸರ್ಕಾರ ಚರ್ಚೆ ನಡೆಸುತ್ತಿದೆ. ಅದರಿಂದ ಮತ್ತಷ್ಟು ಗೊಂದಲಗಳು ಹೆಚ್ಚಾಗುವ ಸಾಧ್ಯತೆ ಇದೆ.

ಎಎಪಿ ಮಾಜಿ ಸಚಿವ ಸತ್ಯೇಂದ್ರ ಜೈನ್‌ಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

ಸಾರ್ವಜನಿಕ ವಲಯದಲ್ಲಿ ಗೊಂದಲಗಳು ಹೆಚ್ಚಾದರೂ ಗ್ಯಾರಂಟಿ ಯೋಜನೆಗಳ ಬಗ್ಗೆ ಸರ್ಕಾರದ ಪ್ರತಿನಿಧಿಗಳಾಗಿ ಯಾರು ಸ್ಪಷ್ಟನೆ ನೀಡುತ್ತಿಲ್ಲ. ಬಹುತೇಕ ಖಾತೆ ಹಂಚಿಕೆಯಾಗಿಲ್ಲ. ಹಾಗಾಗಿ ಯಾರು ಹೇಳಿಕೆ ನೀಡಬೇಕು ಎಂಬ ಗೊಂದಲ ಇದೆ. ಆವರೆಗೂ ಪ್ರತಿಪಕ್ಷಗಳು ಏನೇಲ್ಲಾ ಆರೋಪ ಮಾಡುತ್ತವೋ ಮಾಡಲಿ ಅನಂತರ ಇಲಾಖೆಗಳ ಜವಾಬ್ದಾರಿ ಹೊಂದಿರುವವರು ತಕ್ಕ ಎದಿರೇಟು ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಬಜರಂಗದಳ ನಿಷೇಧ, ಮತಾಂತರ ನಿಷೇಧ, ಗೋಹತ್ಯೆ ನಿಷೇಧ ಕಾಯ್ದೆಗಳನ್ನು ಹಿಂಪಡೆಯುವ ಚಿಂತನೆಯ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿ ಜನರ ಗಮನವನ್ನು ಭಾವನಾತ್ಮಕ ವಿಚಾರಗಳತ್ತ ತಿರುಗಿಸುವ ಯತ್ನ ನಡೆಸಿದರು. ಅದು ಬಿಜೆಪಿಯ ನಾಯಕರನ್ನು ಕೆಣಕಿದೆಯೇ ಹೊರತು ಜನ ಬದಲಾಗಿಲ್ಲ.

ಕಾಂಗ್ರೆಸ್ ಯೋಜನೆಗಳ ಜಾರಿ ಬಗ್ಗೆ ಪಟ್ಟು ಹಿಡಿದಿದ್ದಾರೆ. ಏಪ್ರಿಲ್-ಮೇ ತಿಂಗಳ ವಿದ್ಯುತ್ ಶುಲ್ಕ ವಸೂಲಿಯಾಗದಿರುವ ಕಾರಣ ಕೆಲವು ಕಡೆ ವಿದ್ಯುತ್ ಸಂಪರ್ಕ ಕಡಿತ ಮಾಡುವ ಬೆದರಿಕೆ ಹಾಕಲಾಗಿದೆ. ಇದು ಮತ್ತಷ್ಟು ಗಲಾಟೆಗೆ ಕಾರಣವಾಗಿದೆ.

Congress, #guarantees, #Schemes,

- Advertisement -
RELATED ARTICLES
- Advertisment -

Most Popular