ಆಂತರಿಕವಾಗಿ ಸಶಕ್ತಗೊಳ್ಳುವ ಸಾಮರ್ಥ್ಯ, ನಾಯಕತ್ವ ಕಾಂಗ್ರೆಸ್‍ನಲ್ಲಿದೆ : ಭೂಪಿಂದರ್ ಹೂಡಾ

ನವದೆಹಲಿ, ಮೇ 12- ಕಾಂಗ್ರೆಸ್ ಪಕ್ಷಕ್ಕೆ ತನ್ನನ್ನು ತಾನು ಸುಧಾರಿಸಿಕೊಳ್ಳುವ ಸಾಮಥ್ರ್ಯವಿದ್ದು, ಅದಕ್ಕೆ ತಕ್ಕ ನಾಯಕತ್ವವೂ ಪಕ್ಷದಲ್ಲಿದೆ ಎಂದು ಹಿರಿಯ ನಾಯಕ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಪ್ರತಿಪಾದಿಸಿದ್ದಾರೆ.

ರಾಜಸ್ತಾನದ ಉದಯಪುರದಲ್ಲಿ ನಾಳೆಯಿಂದ ಆರಂಭಗೊಳ್ಳುವ ಚಿಂತನ್ ಶಿವರ್‍ಗೂ ಮುನ್ನಾ ದಿನ ಸುದ್ದಿ ಸಂಸ್ಥೆ ಪಿಟಿಐಗೆ ಸಂದರ್ಶನ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಸುದೀರ್ಘ ಇತಿಹಾಸ ಹೊಂದಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಅನುಸರಿಸಲಿದೆ. ಅದಕ್ಕೆ ಬೇಕಾದ ನಾಯಕತ್ವ ಮತ್ತು ಸಾಮಥ್ರ್ಯ ಎರಡು ಕಾಂಗ್ರೆಸ್‍ಗೆ ಇವೆ ಎಂದಿದ್ದಾರೆ.

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಜೊತೆಗಿನ ಮಾತುಕತೆ ಮುರಿದು ಬಿದ್ದ ಬಳಿಕ ಕಾಂಗ್ರೆಸ್‍ನಲ್ಲಿ ಶೂನ್ಯ ವಾತಾವರಣವಿದೆ ಎಂಬ ವ್ಯಾಖ್ಯಾನಗಳು ಕೇಳಿ ಬಂದಿದ್ದವು. ಆದರೆ ಅದನ್ನು ಹೂಡಾ ತಳ್ಳಿ ಹಾಕಿದ್ದಾರೆ. ಪಕ್ಷ ಆಂತರಿಕವಾಗಿ ಬಲವಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್‍ನಲ್ಲೇ ಭಿನ್ನಮತೀಯರು ಎಂದು ಗುರುತಿಸಿಕೊಳ್ಳಲಾದ ಜಿ-23 ನಾಯಕರ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಹೂಡ, ನಾವು ಪಕ್ಷದ ನಾಯಕತ್ವದ ವಿರುದ್ಧ ಇಲ್ಲ. ಪಕ್ಷವನ್ನು ಬಲ ಪಡಿಸಲು ಕೆಲ ಸಲಹೆಗಳನ್ನು ನೀಡಿದ್ದೇವೆ. ಕೆಲವನ್ನು ಪಕ್ಷದ ವರಿಷ್ಠ ಮಂಡಲಿ ಅನುಸರಿಸುತ್ತಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಪಕ್ಷದ ಸಂಸದೀಯ ಆಡಳಿತ ಮಂಡಳಿ ಈ ಮೊದಲು ಅಸ್ತಿತ್ವದಲ್ಲಿತ್ತು, ಮುಂದೆಯೂ ಇರಲಿದೆ. ಇಂದಿರಾ ಗಾಂಧಿ ಕಾಲದಲ್ಲೂ ಸಂಸದೀಯ ಮಂಡಳಿ ಸಾಂಸ್ಥಿಕ ಚುನಾವಣೆ ಪ್ರಕ್ರಿಯೆ ನಡೆಸಿದೆ. ನಾವು ಯಾರ ವಿರುದ್ಧವೂ ಅಲ್ಲ, ಪಕ್ಷದ ಹಿತದೃಷ್ಟಿಯಿಂದ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದೇವು. ಪಕ್ಷದ ಉನ್ನತ ನಾಯಕತ್ವಕ್ಕೆ ಜಿ-23 ವಿರೋಧವಾಗಿಲ್ಲ. ನಾವು ನಾಯಕತ್ವದ ಬಗ್ಗೆ ಮಾತನಾಡಿಲ್ಲ, ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಮಾತ್ರ ಮಾತನಾಡಿದ್ದೇವೆ ಎಂದು ಹೂಡಾ ಹೇಳಿದರು.

ಮಹಾತ್ಮ ಗಾಂಧಿ ಹಿಂದೂ ಆಗಿದ್ದರು ಮತ್ತು ಎಲ್ಲಾ ಧರ್ಮಗಳನ್ನು ಗೌರವಿಸುತ್ತಿದ್ದರು. ಅವರ ಮಾರ್ಗದಲ್ಲಿ ಮಾತ್ರ ದೇಶವು ಮುನ್ನಡೆಯಲು ಸಾಧ್ಯ ಎಂದು ಬಿಜೆಪಿಯ ಕೋಮು ರಾಜಕಾರಣಕ್ಕೆ ಪ್ರತಿಕ್ರಿಯಿಸಿದರು.

ಪಕ್ಷ ಹಲವು ಕ್ಷೇತ್ರಗಳಲ್ಲಿ ಸಮಿತಿಗಳನ್ನು ರಚನೆ ಮಾಡಿದೆ, ಅವು ವರದಿ ತಯಾರಿಸಿದ್ದು, ಚಿಂತನ್ ಶಿವರ್‍ನಲ್ಲಿ ಅವುಗಳ ಕುರಿತು ಚರ್ಚೆ ನಡೆಸಲಾಗುವುದು. 2024 ರ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರೈತ ಮುಖಂಡರಿಂದ ಹಿಡಿದು ಹಲವು ಕೃಷಿ ವಿಜ್ಞಾನಿಗಳವರೆಗೆ ಕೃಷಿ ವಿಷಯ ಕುರಿತು ಚರ್ಚೆ ನಡೆಸಲಾಗುವುದು, ಕನಿಷ್ಠ ಬೆಂಬಲ ಬೆಲೆ, ವಿಮೆ, ರೈತರ ಮೇಲೆ ಸಾಲ ಹೆಚ್ಚುತ್ತಿರುವುದು, ಅಕಾಲಿಕ ಮಳೆಯಿಂದ ಬೆಳೆ ಹಾನಿ ಸೇರಿ ಹಲವು ವಿಷಯಗಳನ್ನು ಚರ್ಚಿಸಲಾಗುವುದು’ ಎಂದರು.

2024ರಲ್ಲಿ ಸಮಾನ ಮನಸ್ಕ ಪಕ್ಷಗಳ ಮೈತ್ರಿ ಕುರಿತು ಪ್ರತಿಕ್ರಿಯಿಸಿದ ಅವರು, ಮುಂದಿನ ದಿನಗಳ ಪರಿಸ್ಥಿತಿ ಅವಲಂಬಿಸಿ ನಿರ್ಧಾರ ಕೈಗೊಳ್ಳಲಾಗುವುದು. ಕೆಲವೊಮ್ಮೆ ಸಂದರ್ಭಗಳಲ್ಲಿ ಮೈತ್ರಿ ಮಾಡಿಕೊಳ್ಳುತ್ತವೆ. ಇತರ ಪಕ್ಷಗಳೊಂದಿಗೆ ಚರ್ಚಿಸಿದ ನಂತರ ಪಕ್ಷವು ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಬ್ಲಾಕ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ತಳಮಟ್ಟದಲ್ಲಿ ಬಲಿಷ್ಠಗೊಳಿಸಬೇಕು ಎಂದು ಹೇಳಿದ್ದಾರೆ.

ಚಿಂತನಾ ಶಿವರ್ ಶುಕ್ರವಾರ ಮಧ್ಯಾಹ್ನ ಪ್ರಾರಂಭವಾಗಲಿದ್ದು 400 ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ರೈತರು, ಕೃಷಿ, ಆರ್ಥಿಕತೆ, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ, ರಾಜಕೀಯ, ಸಂಘಟನೆ, ಯುವಜನ ಸಬಲೀಕರಣ ಸೇರಿ ಹಲವು ಗಂಭಿರ ವಿಷಯಗಳನ್ನು ಆರು ಗುಂಪುಗಳ ಪ್ರಮುಖರು ಚರ್ಚೆ ನಡೆಸಲಿದ್ದಾರೆ. ಮೊದಲ ಮತ್ತು ಎರಡನೇ ದಿನಗಳಲ್ಲಿ ಚರ್ಚೆ ನಡೆದು, ಕೊನೆಯ ದಿನದಲ್ಲ ತೀರ್ಮಾನ ತೆಗೆದುಕೊಂಡು ಘೋಷಣೆ ರೂಪದಲ್ಲಿ ಹೊರಡಿಸಲಾಗುತ್ತದೆ.