ಸರ್ಕಾರದ ಜತೆ ಹೊಂದಾಣಿಕೆ ರಾಜಕೀಯ : ‘ಕೈ’ ಕಮಾಂಡ್‍ನಿಂದ ರಹಸ್ಯ ತನಿಖೆ

ಬೆಂಗಳೂರು : ಸರ್ಕಾರದ ಜತೆ ಪ್ರತಿ ಪಕ್ಷಗಳು ಶಾಮೀಲಾಗಿವೆ ಎಂಬ ಬಿಜೆಪಿಯ ಬಂಡಾಯ ನಾಯಕರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈ ಕಮಾಂಡ್ ಈ ಬಗ್ಗೆ ರಹಸ್ಯ ವರದಿ ಪಡೆಯಲು ಮುಂದಾಗಿದೆ. ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಕಾಂಗ್ರೆಸ್‍ನ ಪ್ರಮುಖ ನಾಯಕರು ಉತ್ತಮ ಬಾಂಧವ್ಯ ಹೊಂದಿದ್ದು, ವೈಯಕ್ತಿಕ ನೆಲಗಟ್ಟಿನಲ್ಲಿ ಒಳ್ಳೆಯ ಸಂಬಂಧ ರೂಢಿಸಿಕೊಂಡಿದ್ದಾರೆ.

ಈ ಮೊದಲು ಸೈದ್ಧಾಂತಿಕ ವಿರೋಧಗಳ ಕಾರಣಕ್ಕಾಗಿ ಯಡಿಯೂರಪ್ಪ ಅವರ ವಿರುದ್ಧ ಮುಗಿ ಬೀಳುತ್ತಿದ್ದ ಕಾಂಗ್ರೆಸಿಗರು ಎರಡನೇ ಹಂತದ ಅಧಿಕಾರಾವಧಿಯಲ್ಲಿ ಮೃದು ಧೋರಣೆ ಅನುಸರಿಸುತ್ತಿದ್ದಾರೆ ಎಂಬ ಆರೋಪಗಳಿವೆ. ಇದಕ್ಕೆ ಪೂರಕವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಧಿವೇಶನದಲ್ಲೇ ಪ್ರತಿಪಕ್ಷಗಳು ಸರ್ಕಾರದ ಜತೆ ಅನೈತಿಕ ಮೈತ್ರಿ ಮಾಡಿಕೊಂಡಿವೆ ಎಂದು ಆರೋಪಿಸಿದ್ದರು.

ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿರುವ ಸಿ.ಪಿ.ಯೋಗೀಶ್ವರ್ ಅವರು ಇದು ನಮ್ಮ ಸರ್ಕಾರ ಎಂಬ ಭಾವನೆ ಬರುತ್ತಿಲ್ಲ. ಪ್ರತಿಪಕ್ಷಗಳ ನಾಯಕರ ಅಣತಿಯಂತೆ ಆಡಳಿತ ನಡೆಯುತ್ತಿದೆ. ರಾಜ್ಯದಲ್ಲಿ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಸಮ್ಮಿಶ್ರ ಸರ್ಕಾರವಿದ್ದಂತೆ ಇದೆ ಎಂದು ಆಕ್ಷೇಪಿಸಿದ್ದರು. ಈಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರತಿಪಕ್ಷಗಳ ವಿರುದ್ಧ ಗಂಭೀರ ಆರೋಪ ಮಾಡಿರುವುದು ತೀವ್ರ ಮುಜುಗರದ ಸನ್ನಿವೇಶ ಸೃಷ್ಟಿಸಿದೆ.

ಪ್ರತಿ ದಿನ ನೂರು ಕೋಟಿ ರೂ. ಲೂಟಿ ಹೊಡೆಯಲಾಗುತ್ತಿದೆ. ಅದರಲ್ಲಿ ಪ್ರತಿಪಕ್ಷಗಳಿಗೂ ಪಾಲು ಕೊಡಲಾಗುತ್ತಿದೆ. ಹೀಗಾಗಿ ಎಲ್ಲರೂ ಬಾಯಿ ಮುಚ್ಚಿಕೊಂಡಿದ್ದಾರೆ ಎಂದು ಯತ್ನಾಳ್ ಟೀಕಿಸಿದ್ದಾರೆ. ಇದೇ ರೀತಿ ಬಹಳಷ್ಟು ಬಿಜೆಪಿ ಶಾಸಕರು ಬಹಿರಂಗವಾಗಿ, ಆಂತರಿಕವಾಗಿ ಟೀಕೆ ಮಾಡಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಇದು ತೀವ್ರ ಮುಜುಗರ ಉಂಟು ಮಾಡಿದೆ. ಕೆಲವು ಹಿರಿಯ ನಾಯಕರುಗಳು ಈ ಬಗ್ಗೆ ಹೈಕಮಾಂಡ್‍ಗೆ ದೂರು ನೀಡಿದ್ದಾರೆ.

ಬಿಜೆಪಿ ಶಾಸಕರು, ಸಚಿವರುಗಳೇ ಸರ್ಕಾರದ ವಿರುದ್ಧ ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಆದರೆ, ಪ್ರತಿಪಕ್ಷ ಕಾಂಗ್ರೆಸ್ ಉಸಿರೆತ್ತದೆ ಮೌನವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯಲ್ಲಿ 26ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ ಎಂದು ಎಚ್.ವಿಶ್ವನಾಥ್ ದಾಖಲೆ ಬಿಡುಗಡೆ ಮಾಡಿ ಆರೋಪಿಸಿದರು. ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರ ಆಪ್ತ ಎಂದು ಹೇಳಲಾಗಿದ್ದ ರಾಜಣ್ಣ ವಿರುದ್ಧ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ದೂರು ನೀಡಿ ಬಂಧನದ ಕಾರ್ಯಾಚರಣೆಯೂ ಆಗಿದೆ.

ಮುಖ್ಯಮಂತ್ರಿ, ಅನೇಕ ಸಚಿವರೂ ಸೇರಿದಂತೆ ಬಹಳಷ್ಟು ಮಂದಿಯ ಹೆಸರನ್ನು ರಾಜಣ್ಣ ದುರುಪಯೋಗ ಪಡಿಸಿಕೊಂಡು ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪಗಳಿವೆ. ಇದಕ್ಕೂ ಮೊದಲು ಯುವರಾಜ್‍ಸ್ವಾಮಿ ವಿರುದ್ಧ ಇದೇ ರೀತಿಯ ಆರೋಪಗಳು ಕೇಳಿ ಬಂದಿದ್ದು, ಆತನನ್ನೂ ಬಂಧಿಸಿ ಜೈಲಿನಲ್ಲಿಡಲಾಗಿದೆ. ಪದೇ ಪದೇ ಸಚಿವರ ಪುತ್ರರು, ಕುಟುಂಬದ ಸದಸ್ಯರು ಅಪಘಾತ ಹಾಗೂ ಇತರ ಪ್ರಕರಣಗಳಲ್ಲಿ ಸಿಕ್ಕಿ ಬೀಳುತ್ತಿದ್ದಾರೆ. ಆರ್‍ಟಿಜಿಎಸ್ ಮೂಲಕ ಲಂಚ ಪಡೆದ ಆರೋಪವೂ ಕೇಳಿ ಬಂದಿದೆ.

ಕೊರೊನಾ ಕಾಲದಲ್ಲಂತೂ ಭ್ರಷ್ಟಾಚಾರದ ಬಗ್ಗೆ ರಾಶಿ ರಾಶಿ ದಾಖಲೆಗಳು ಹೊರ ಬಂದವು. ಜನ ತತ್ತರಿಸಿ ಪರದಾಡಿದರು. ಆದರೆ ಜನರ ನೋವಿಗೆ ಪ್ರತಿಪಕ್ಷ ದನಿಯಾಗಲಿಲ್ಲ. ಆಡಳಿತ ಪಕ್ಷದ ವೈಫಲ್ಯ ಕಣ್ಣೆದುರಿಗೆ ಇದ್ದರೂ ಕಂಡೂ ಕಾಣದಂತೆ ಜಾಣ ಕುರುಡಿಗೆ ಶರಣಾದರು ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ.ರಾಜ್ಯದಲ್ಲಿ ಪ್ರಬಲವಾದ ಪ್ರತಿಪಕ್ಷದ ಕೊರತೆ ಇದೆ ಎಂಬ ಆರೋಪಕ್ಕೆ ಕಾಂಗ್ರೆಸ್‍ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ಈ ಎಲ್ಲಾ ಅಂಶಗಳನ್ನೂ ಕ್ರೂಢೀಕರಿಸಿ ಹೈಕಮಾಂಡ್‍ಗೆ ಕಾಂಗ್ರೆಸ್‍ನ ಹಿರಿಯ ನಾಯಕರು ದೂರು ನೀಡಿದ್ದಾರೆ.

ಪರಿಸ್ಥಿತಿ ಗಂಭೀರವಾದ ಸಂದರ್ಭದಲ್ಲಿ ವೇದಿಕೆ ಮೇಲೆ ಒಂದಿಷ್ಟು ಆರೋಪಗಳನ್ನು ಮಾಡುವ ಒಂದಿಷ್ಟು ಮುಂಚೂಣಿ ನಾಯಕರು ಮತ್ತೆ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗಿದ್ದಾರೆ.
ಹೀಗಾಗಿ ಸರ್ಕಾರದ ಮುಖ್ಯಸ್ಥರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಇರುವ ಸಂಬಂಧದ ಬಗ್ಗೆ ರಹಸ್ಯ ವರದಿ ಪಡೆದುಕೊಳ್ಳಲು ಹೈಕಮಾಂಡ್ ಮುದಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಮುಂದಿನ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ದುರ್ಬಲ ಪ್ರದರ್ಶನ ಕಾಣಬೇಕಾಗುತ್ತದೆ ಎಂಬ ಆತಂಕವೂ ಕೇಳಿಬಂದಿದೆ. ಹೀಗಾಗಿ ರಹಸ್ಯ ವರದಿ ಪಡೆದ ಬಳಿಕ ರಾಜ್ಯದ ಕಾಂಗ್ರೆಸ್ ನಾಯಕರ ಜತೆ ಹೈಕಮಾಂಡ್ ಸಭೆ ನಡೆಸಿ ತಿಳಿ ಹೇಳಲಿದೆ ಎಂದು ಮೂಲಗಳು ತಿಳಿಸಿವೆ.