ಬೆಂಗಳೂರು, ಅ.13- ಕೊರೊನಾ ಸೋಂಕು ಹೆಚ್ಚಳದ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ನಿಲ್ಲುಸುವ ಬಗ್ಗೆ ಪರಿಶೀಲನೆ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ. ಇಂದು ಬೆಳಗ್ಗೆ ಪಕ್ಷದ ವರಿಷ್ಠ ನಾಯಕ ರಾಹುಲ್‍ಗಾಂಧಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜೊತೆ ದೂರವಾಣಿಯಲ್ಲಿ ಚರ್ಚೆ ನಡೆಸಿದ್ದು, ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ರಣದೀಪ್‍ಸಿಂಗ್ ಸುರ್ಜೇವಾಲ ಅವರೊಂದಿಗೆ ಚರ್ಚೆ ನಡೆಸಿದ್ದರು. ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಹೈಕಮಾಂಡ್ ಸಮಾಲೋಚನೆ ನಡೆಸಿದೆ.
ಪಾದಯಾತ್ರೆ ಆರಂಭದಿಂದ ಈವರೆಗೆನ ಹೋರಾಟ ಮತ್ತು ರಾಜಕೀಯ ಬೆಳವಣಿಗೆಗಳ ಬಗ್ಗೆ ಡಿ.ಕೆ.ಶಿವಕುಮಾರ್ ಹೈಕಮಾಂಡ್‍ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪಾದಯಾತ್ರೆಯನ್ನು ಮುಂದುವರೆಸುವುದು ಸೂಕ್ತವಲ್ಲ ಎಂದು ಹೈಕಮಾಂಡ್ ತಾಕೀತು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಮೂರನೆ ಅಲೆ ತೀವ್ರಗೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಸೋಂಕು ಹೆಚ್ಚಳವಾಗಿ ಅದರಿಂದ ಜನ ಸಾಮಾನ್ಯರಿಗೆ ತೊಂದರೆಯಾದರೆ ಅದರ ಕೆಟ್ಟ ಹೆಸರು ಕಾಂಗ್ರೆಸ್ ತಗುಲಲಿದೆ. ಹೀಗಾಗಿ ಪಾದಯಾತ್ರೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಣದೀಪ್ ಸುರ್ಜೇವಾಲ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವೇಳೆ ನ್ಯಾಯಾಲಯ ತಡೆಯಾಜ್ಞೆ ನೀಡಿ, ಅನಂತರ ಪಾದಯಾತ್ರೆ ನಿಲ್ಲಿಸಿದರೆ ಪಕ್ಷಕ್ಕೆ ಮುಜುಗರವಾಗಲಿದೆ. ಪಾದಯಾತ್ರೆಯೇ ಕಾನೂನು ಬಾಹಿರ ಎಂಬಂತಾಗುತ್ತದೆ. ಜನಪರ ಹೋರಾಟ ಜನರ ವಿರೋಧಕ್ಕೆ ಗುರಿಯಾಗಬಾರದು. ಹಾಗಾಗಿ ಸದ್ಯಕ್ಕೆ ನೀರಿಗಾಗಿ ನಡಿಗೆಯನ್ನು ನಿಲ್ಲಿಸುವ ಕುರಿತು ಪರಿಶೀಲನೆ ಮಾಡಿ, ಇಲ್ಲವಾದರೆ ಪಾದಯಾತ್ರೆಯಲ್ಲಿ ಕೊರೊನಾ ನಿಯಮಾವಳಿಗಳ ಪಾಲನೆ ಮಾಡಿ ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.
