ಬೆಂಗಳೂರು, ಫೆ.9- ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ರಾಜ್ಯದ ಜನರಿಗೆ ಹಿಜಾಬ್ ಹಾಕಿಸುತ್ತಾರೆ ಎಂದು ಕನ್ನಡ ಮತ್ತು ಸಂಸ್ಕøತಿ ಸಚಿವ ಸುನಿಲ್‍ಕುಮಾರ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕವಾಗಿ ಇರಬೇಕೆನ್ನುವವರು ಕಾಂಗ್ರೆಸ್‍ಅನ್ನು ಬೆಂಬಲಿಸುತ್ತಾರೆ. ಎಸ್‍ಡಿಪಿಐ, ಪಿಎಫ್‍ಐ ಜತೆ ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಆಪಾದಿಸಿದರು.
ಸಮವಸ್ತ್ರ ಸಂಹಿತೆಯನ್ನು ಎಲ್ಲರೂ ಪಾಲಿಸಬೇಕು. ಹಿಜಾಬ್‍ಗೆ ಸಂಬಂಧಪಟ್ಟ ವಿಚಾರ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯದ ಆದೇಶವನ್ನು ನಿರೀಕ್ಷಿಸಲಾಗುತ್ತಿದೆ. ಈ ನೆಲದ ಕಾನೂನನ್ನು ನಾವು ಗೌರವಿಸುತ್ತಲೇ ಬಂದಿದ್ದೇವೆ. ಅದೇ ರೀತಿ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕು. ಕಾಯ್ದೆಯ ಅನುಷ್ಠಾನವಾಗಬೇಕು ಎಂದರು.
ಕಾಂಗ್ರೆಸ್ ದ್ವೇಷದ ಕೆಲಸ ಮಾಡುತ್ತಿದೆ. ದೇಶ ವಿಭಜನೆಗೆ ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕವನ್ನು ಏನು ಮಾಡಲು ಹೊರಟಿದ್ದಾರೆ, ತಿಲಕ ಇಟ್ಟುಕೊಂಡು ಬಂದವರನ್ನು ಕಾಂಗ್ರೆಸ್ ನಾಯಕರು ವಿರೋಧಿಸುತ್ತಾರೆ. ಕಾಲೇಜಿನಲ್ಲಿ ಈ ರೀತಿಯ ಭಾವನೆ ಸೃಷ್ಟಿ ಮಾಡುವುದಕ್ಕೆ ಯಾರು ಕಾರಣ ಎಂದು ಪ್ರಶ್ನಿಸಿದರು.
ಇದೊಂದು ವ್ಯವಸ್ಥಿತವಾದ ಪಿತೂರಿ. ಸರ್ಕಾರಿ ಶಾಲೆಗೆ ಶುಲ್ಕ ಕಟ್ಟಲಾಗದವರಿಗೆ ಕೋರ್ಟ್ ಮೆಟ್ಟಿಲು ಹತ್ತಲು ಯಾರು ಬೆಂಬಲ ಕೊಟ್ಟರು, ಪ್ರತ್ಯೇಕ ವಾದವನ್ನು ಕೇಳುವವರನ್ನು ಯಾರು ಬೆಂಬಲಿಸುತ್ತಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ರಾಷ್ಟ್ರಧ್ವಜ ಇಳಿಸಿದರು ಎಂಬ ಸುಳ್ಳನ್ನು ಕೆಪಿಸಿಸಿ ಅಧ್ಯಕ್ಷರೇ ಹೇಳುತ್ತಾರೆ ಎಂದರು.
