ಮತ್ತೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸುಳಿವು ನೀಡಿದ ರಾಮಲಿಂಗಾರೆಡ್ಡಿ

ಬೆಂಗಳೂರು, ನ.30- ಉಪಚುನಾವಣೆ ಬಳಿಕ ಜೆಡಿಎಸ್ ಜೊತೆ ಕಾಂಗ್ರೆಸ್ ಮೂರನೇ ಅವಧಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮತ್ತೆ ದೋಸ್ತಿ ಸರ್ಕಾರ ಅಸ್ತಿತ್ವದ ಸುಳಿವು ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜೆಡಿಎಸ್ ನಾಯಕರಾದ ದೇವೇಗೌಡರು, ಕುಮಾರಸ್ವಾಮಿಯವರು ಮೈತ್ರಿಯ ಬಗ್ಗೆ ಸಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಕೂಡ ಸರ್ಕಾರ ರಚಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಜೆಡಿಎಸ್ -ಕಾಂಗ್ರೆಸ್ ಮೈತ್ರಿಯಾದಾಗ ನಾನು ಸೇರಿದಂತೆ ಯಾರೂ ವಿರೋಧ ಮಾಡಿಲ್ಲ, ಮುಂದೆ ಕೂಡ ವಿರೋಧ ಮಾಡುವುದಿಲ್ಲ ಎಂದು ಹೇಳಿದರು.

ಬಿಜೆಪಿ ಆಪರೇಷನ್ ಕಮಲ ನಡೆಸಿದರೂ ಕಾಂಗ್ರೆಸ್‍ನ ಯಾವ ಶಾಸಕರು ಹೋಗುವುದಿಲ್ಲ. ಉಪಚುನಾವಣೆಯಲ್ಲಿ ಪಕ್ಷಾಂತರ ಮಾಡಿ ಹೋದ ಅನರ್ಹರು ಸೋಲು ಕಾಣಲಿದ್ದಾರೆ. ಅದು ಮುಂದಿನ ದಿನಗಳಲ್ಲಿ ಆಪರೇಷನ್ ಕಮಲಕ್ಕೆ ತುತ್ತಾಗುವವರಿಗೆ ಪಾಠವಾಗಲಿದೆ. ಮತ್ತೊಮ್ಮೆ ಉಪಚುನಾವಣೆ ಅದರ ಸೋಲು ಹೀಗಾದರೆ ಈ ಸಹವಾಸವೇ ಬೇಡ ಎಂದು ಯಾರೂ ಬಿಜೆಪಿಗೆ ಹೋಗುವ ಮನಸ್ಸು ಮಾಡುವುದಿಲ್ಲ. ಆಪರೇಷನ್ ಕಮಲ ನಡೆದರೂ ಅದು ವಿಫಲವಾಗಲಿದೆ ಎಂದು ಹೇಳಿದರು.

ದಿನೇ ದಿನೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲಿನ ಜನಪ್ರಿಯತೆ ಕುಗ್ಗುತ್ತಿದ್ದು, 15 ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ ಎಂದು ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲಾ ನಾಯಕರು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಬಿಜೆಪಿ ಸರ್ಕಾರ ಆಡಳಿತ ವೈಫಲ್ಯ ಕಂಡಿದೆ. ನೆರೆ ಸಂದರ್ಭದಲ್ಲಿ ಜನರ ಕಷ್ಟಗಳಿಗೆ ಸ್ಪಂದಿಸಿಲ್ಲ, ಕೇಂದ್ರದಿಂದ ಅನುದಾನ ಬಂದಿಲ್ಲ. ಚುನಾವಣಾ ಸಂದರ್ಭದಲ್ಲಿ ಬಿಜೆಪಿಯಿಂದ 9 ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ.

ಒಂದರಲ್ಲೂ ಚುನಾವಣಾ ಆಯೋಗ ಗಂಭೀರ ಕ್ರಮಕೈಗೊಂಡಿಲ್ಲ. ಕಾಂಗ್ರೆಸ್ ದೂರು ನೀಡಿದರೂ ಆಯೋಗ ಬಿಜೆಪಿ ಕೈಗೊಂಬೆಯಂತೆ ವರ್ತಿಸುತ್ತಿದೆ. ದೂರು ನೀಡಲು ಹೋದವರಿಗೆ ಅನುಮತಿ ಇಲ್ಲದೆ ಹೇಗೆ ಬಂದಿರಿ ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದಲ್ಲಿ ಜಿಡಿಪಿ ಕುಸಿದಿದೆ. ಆರ್ಥಿಕ ಸ್ಥಿತಿ ಹದಗೆಟ್ಟಿದೆ. ನಿರ್ಮಲಾಸೀತಾರಾಮ್ ಅವರು ಆರ್ಥಿಕ ತಜ್ಞರ ಮಾತನ್ನು ಕೇಳುತ್ತಿಲ್ಲ. ಅವರ ಪತಿಯೆ ಆರ್ಥಿಕ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದ ನೀತಿಗಳ ಬಗ್ಗೆ ಕಿಡಿಕಾರಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಮೂರು ಲಕ್ಷ ಉದ್ಯೋಗ ಕಡಿತವಾಗಲಿದೆ ಎಂದು ಟಾಟಾ ಸಂಸ್ಥೆ ಹೇಳುತ್ತಿದೆ. ದೇಶದ ಜನರಿಗೆ ಒಳ್ಳೆಯ ದಿನಗಳು ಬರಲಿಲ್ಲ ಎಂದು ರಾಮಲಿಂಗಾರೆಡ್ಡಿ ಟೀಕಿಸಿದರು.