ಒಗ್ಗಟಿನ ಮಾತ್ರ ಜಪಿಸುತ್ತಿದ್ದಾರೆ ಕಾಂಗ್ರೆಸ್‍ ನಾಯಕರು..!

ಬೆಂಗಳೂರು, ಜ.5- ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಕಾಂಗ್ರೆಸ್‍ಗೆ ಉತ್ತಮ ಭವಿಷ್ಯವಿದೆ. ಗತಕಾಲದ ಇತಿಹಾಸ ಮರುಕಳಿಹಿಸುವ ಎಲ್ಲಾ ಸಾಧ್ಯತೆಗಳು ಇವೆ. ಪರಸ್ಪರ ನಾವುಗಳು ಕಾಲೆಳೆದುಕೊಳ್ಳುವುದು ಬೇಡ. ಒಟ್ಟಾಗಿ ಹೋಗೋಣ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿಎಲ್‍ಪಿ ನಾಯಕ ಸ್ಥಾನದ ಆಯ್ಕೆ ವಿಷಯವನ್ನು ಹೈಕಮಾಂಡ್‍ಗೆ ಬಿಡೋಣ ಎಂಬ ಅಭಿಪ್ರಾಯ ನಿನ್ನೆ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಕೇಳಿ ಬಂದಿದೆ.

ದೇಶದೆಲ್ಲೆಡೆ ಪೌರತ್ವದ ಕಾಯ್ದೆ ವಿರುದ್ಧ ಹೋರಾಟ ನಡೆಯುತ್ತಿದೆ. ಇದರ ನೇತೃತ್ವವನ್ನು ಕಾಂಗ್ರೆಸ್ ವಹಿಸಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಳ್ಳುವುದು, ಬಹಿರಂಗವಾಗಿ ಹೇಳಿಕೆಗಳನ್ನು ನೀಡುವುದು ಸಮಂಜಸವಲ್ಲ. ಪಕ್ಷವನ್ನು ಅಧಿಕಾರಕ್ಕೆ ಮತ್ತೆ ತರುವ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ವೈಮನಸ್ಸುಗಳನ್ನು ಮರೆತು, ಪ್ರತಿಷ್ಠೆಗಳನ್ನು ಬದಿಗಿಟ್ಟು ಹೋರಾಟ ಮಾಡಬೇಕಾಗಿದೆ ಎಂದು ಎಲ್ಲಾ ನಾಯಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಕೂಡ ಎಲ್ಲರೂ ಒಟ್ಟಾಗಿ ಸಭೆ ನಡೆಸಿ ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿತ್ತು. ಅಲ್ಲದೆ ದೇಶದೆಲ್ಲೆಡೆ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವ ವಹಿಸಬೇಕಾಗಿದೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಪ್ರಬಲವಾಗಿರುವ ಪಕ್ಷದಲ್ಲಿ ಬಣ ರಾಜಕೀಯ ಬೇಡ. ಒಗ್ಗಟ್ಟಿನ ನಾಯಕತ್ವ ಬೇಕಾಗಿದೆ. ಈ ನಿಟ್ಟಿನಲ್ಲಿ ಸಭೆ ಮಾಡಿ ಎಂದು ಸೂಚಿಸಿತ್ತು. ಹಾಗಾಗಿ ಎಲ್ಲಾ ನಾಯಕರು ಸಭೆ ಸೇರಿ ಒಟ್ಟಾರೆ ಅಭಿಪ್ರಾಯವನ್ನು ಕ್ರೂಢೀಕರಿಸಿ ಹೈಕಮಾಂಡ್‍ಗೆ ರವಾನಿಸಿದ್ದಾರೆ.

ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ನಿನ್ನೆ ನಡೆದ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪರಮೇಶ್ವರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಕೆ.ಎಚ್.ಮುನಿಯಪ್ಪ, ಬಿ.ಕೆ.ಹರಿಪ್ರಸಾದ್, ರಾಮಲಿಂಗಾರೆಡ್ಡಿ, ದಿನೇಶ್‍ಗುಂಡೂರಾವ್ ಸೇರಿದಂತೆ ಬಹುತೇಕರು ಪಾಲ್ಗೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಪ್ರತಿಪಕ್ಷ ನಾಯಕ, ಶಾಸಕಾಂಗ ಪಕ್ಷದ ನಾಯಕ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾರನ್ನಾದರೂ ಆಯ್ಕೆ ಮಾಡಲಿ. ಇದನ್ನು ಹೈಕಮಾಂಡ್‍ಗೆ ಬಿಡೋಣ ಎಂಬ ತೀರ್ಮಾನಕ್ಕೆ ಮುಖಂಡರು ಬಂದಿದ್ದಾರೆ ಎನ್ನಲಾಗಿದೆ. ಎಲ್ಲರಿಗೂ ಒಂದಲ್ಲಾ ಒಂದು ರೀತಿಯಲ್ಲಿ ಅಧಿಕಾರ ದೊರೆತಿದೆ. ಎರಡನೇ ಹಂತದ ನಾಯಕರಿಗೆ ಅಧಿಕಾರ ಸಿಗಬೇಕಾಗಿದೆ.

ಮತ್ತೆ ಅಧಿಕಾರಕ್ಕೆ ಅಂಟಿಕೊಂಡು ಕುಳಿತರೆ ಪಕ್ಷ ಅವನತಿಯತ್ತ ಸಾಗುತ್ತದೆ. ಈ ನಿಟ್ಟಿನಲ್ಲಿ ನಾವೆಲ್ಲ ಯೋಚಿಸಿ ಪಕ್ಷವನ್ನು ಸದೃಢಗೊಳಿಸಬೇಕಾಗಿದೆ ಎಂದು ಎಲ್ಲಾ ಮುಖಂಡರು ಮಾತನಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯದಲ್ಲೇ ಈ ಅಭಿಪ್ರಾಯವನ್ನು ತಿಳಿಸಲು ರಾಜ್ಯದ ನಾಯಕರು ದೆಹಲಿಗೆ ತೆರಳಲಿದ್ದಾರೆ.