ಬೆಂಗಳೂರು,ಜು.17- ಅವಧಿಪೂರ್ವ ಚುನಾವಣೆ ನಡೆಯುವ ವದಂತಿಗಳ ನಡುವೆ ಕಾಂಗ್ರೆಸ್ ನವೆಂಬರ್ ವೇಳೆಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ತಯಾರಿಸಿಕೊಳ್ಳಲು ಸಿದ್ದತೆ ಆರಂಭಿಸಿದೆ. ಈಗಾಗಲೇ ಮೂರು ಖಾಸಗಿ ಸಂಸ್ಥೆಗಳ ಮೂಲಕ ಪ್ರತ್ಯೇಕ ಸಮೀಕ್ಷೆ ಕಾರ್ಯ ನಡೆಸಿದ್ದು, ಅದರ ಆಧಾರದ ಮೇಲೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಗೆದ್ದು ಶಾಸಕರಾಗಿರುವ 70 ಮಂದಿಯ ಕ್ಷೇತ್ರಗಳಿಗೆ ಟಿಕೆಟ್ ಬದಲಾವಣೆಯಾಗುವ ಸಾಧ್ಯತೆಗಳಿಲ್ಲ.
ಇದರಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಒಂದೆರಡು ಬದಲಾವಣೆಗಳಾದರೂ ಬಹುತೇಕ ಎಲ್ಲರಿಗೂ ಟಿಕೆಟ್ ಖಾತ್ರಿ ಎಂದು ಹೇಳಲಾಗಿದೆ. ಉಳಿದಂತೆ ಸುಮಾರು 30 ಮಂದಿ ಹಿರಿಯ ಶಾಸಕರಿಗೆ ಸೋತ್ತಿದ್ದರೂ ಮತ್ತೆ ಟಿಕೆಟ್ ನೀಡುವ ಅನಿವಾರ್ಯತೆ ಪಕ್ಷದಲ್ಲಿದೆ. ಉಳಿದ 120 ಕ್ಷೇತ್ರಗಳ ಪೈಕಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ 70 ಕ್ಷೇತ್ರಗಳ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುಮಾರು 30 ಕ್ಷೇತ್ರ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಿದ್ದಾರೆ ಎನ್ನಲಾಗಿದೆ.
ಉಳಿದ 20 ಕ್ಷೇತ್ರಗಳ ಅಭ್ಯರ್ಥಿಗಳ ಪೈಕಿ ಹಿರಿಯ ನಾಯಕರು ತಲಾ ಎರಡು-ಮೂರು ಹಂಚಿಕೊಳ್ಳಲಿದ್ದಾರೆ. ಈ ಎಲ್ಲ ಲೆಕ್ಕಾಚಾರಗಳ ಪ್ರಕಾರ ಈಗಾಗಲೇ ಸಂಭವನೀಯರ ಪಟ್ಟಿ ಸಿದ್ದಗೊಂಡಿದೆ. ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಪ್ರತ್ಯೇಕವಾಗಿ ಖಾಸಗಿ ಸಂಸ್ಥೆಗಳ ಮೂಲಕ ಸಮೀಕ್ಷೆ ನಡೆಸುತ್ತಿವೆ. ಈ ಸಮೀಕ್ಷೆ ನೆಪ ಮಾತ್ರಕ್ಕೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಟಿಕೆಟ್ ಹಂಚಿಕೆಯ ಬಳಿಕ ಅಸಮಾಧಾನ ಭುಗಿಲೆದ್ದರೆ ಅದನ್ನು ತಣಿಸಲು ಸಮೀಕ್ಷಾ ವರದಿಯನ್ನು ಮುಂದಿಡಲು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ. ಉಳಿದಂತೆ ಈಗಾಗಲೇ ಸಿದ್ದಗೊಂಡಿರುವ ಪಟ್ಟಿಯ ಪ್ರಕಾರವೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬಹುತೇಕ ನವೆಂಬರ್ ವೇಳೆಗೆ ಮೊದಲ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸತತವಾಗಿ ಸೋಲು ಕಾಣುತ್ತಿರುವ ರಾಜಾಜಿನಗರ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಸಿ.ವಿ.ರಾಮನ್‍ನಗರ ಸೇರಿದಂತೆ ಸುಮಾರು 120 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ.
ಜೆಡಿಎಸ್‍ನಿಂದ ವಲಸೆ ಬರುವ ಏಳು ಮಂದಿ ಪ್ರಮುಖ ನಾಯಕರ ಪೈಕಿ ಮೂರರಿಂದ ನಾಲ್ಕು ಜನರಿಗೆ ಟಿಕೆಟ್ ಖಾತ್ರಿ ಮಾಡುವ ನಿರೀಕ್ಷೆಗಳಿವೆ. ಒಂದಿಷ್ಟು ಮಂದಿ ಕಾಂಗ್ರೆಸ್‍ನಿಂದ ಹೊರಗೆ ಕಾಲಿಟ್ಟಿದ್ದು, ಅವರ ಕ್ಷೇತ್ರಗಳಿಗೆ ಈಗಾಗಲೇ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿದೆ ಎಂದು ಹೇಳಲಾಗಿದೆ.
ಕಳೆದೆರಡು ದಿನಗಳ ಹಿಂದೆ ನಡೆದ ಬಿಜೆಪಿ ಬೈಠಕ್‍ನಲ್ಲಿ ಅವಪೂರ್ವ ಚುನಾವಣೆ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಈ ಸುಳಿವು ಅರಿತು ಕಾಂಗ್ರೆಸ್ ಕೂಡ ಪೂರ್ವ ತಯಾರಿ ನಡೆಸುತ್ತಿದೆ.
ಏಕಾಏಕಿ ಬಿಜೆಪಿ ಡಿಸೆಂಬರ್ ವೇಳೆಗೆ ಗುಜರಾತ್ ಜೊತೆಯಲ್ಲೇ ಚುನಾವಣೆ ಘೋಷಣೆ ಮಾಡಿದರೆ ಪೂರ್ವ ತಯಾರಿಯಲ್ಲಿ ಕಷ್ಟ ಸಾಧ್ಯವಾಗಬಹುದೆಂಬ ಹಿನ್ನೆಲೆಯಲ್ಲಿ ಈಗಿನಿಂದಲೇ ಪೂರ್ವ ಸಿದ್ದತೆಗಳು ಆರಂಭಗೊಂಡಿರುವುದಾಗಿ ಮೂಲಗಳು ತಿಳಿಸಿವೆ.