ತಿರುವನಂತಪುರ,ಸೆ.25- ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಕಾಂಗ್ರೆಸ್‍ನ ಹಿರಿಯ ನಾಯಕ ಆರ್ಯಾದನ್ ಮುಹಮ್ಮದ್(87) ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಕಳೆದ ಒಂದು ವಾರದಿಂದ ಕೇರಳದ ಕೋಝಿಕೋಡ್‍ನಲ್ಲಿ ಖಾಸಗಿ ಆಸ್ಪತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರ ಅಂತ್ಯಕ್ರಿಯೆ ನಾಳೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
1977ರಲ್ಲಿ ನಿಲಂಬೂರ್ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಕೇರಳ ವಿಧಾನಸಭೆ ಪ್ರವೇಶಿಸಿದ್ದ ಆರ್ಯಾದನ್ 1987 ರಿಂದ 2011 ರವರೆಗೆ ನಿಲಂಬೂರ್‍ನಿಂದ ಚುನಾವಣೆಯಲ್ಲಿ ನಿರಂತರ ಜಯ ಸಾಸಿದ್ದರು.
ಇದನ್ನೂ ಓದಿ : ಮಾಜಿ ಸಿಎಂ ಎಸ್.ಎಂ.ಕೃಷ್ಣ ಆಸ್ಪತ್ರೆಗೆ ದಾಖಲು
ಆರ್ಯಾದನ್ ಮುಹಮ್ಮದ್ ಅವರು 1980ರಲ್ಲಿ ಇಕೆ ನಾಯನಾರ್ ಸಂಪುಟದಲ್ಲಿ ಸಚಿವರಾಗಿದ್ದರು. ಅವರು ಎಕೆ ಆಂಟನಿ ಸಂಪುಟ ಮತ್ತು ಉಮ್ಮನ್ ಚಾಂಡಿ ಸಂಪುಟದಲ್ಲಿ ಸಚಿವರಾಗಿ ಜವಾಬ್ದಾರಿ ನಿಭಾಯಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದು, 8 ಬಾರಿ ಶಾಸಕರಾಗಿದ್ದ ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಆರ್ಯಾದನ್ ಮುಹಮ್ಮದ್ ಜೀ ತಳಮಟ್ಟದ ರಾಜಕಾರಣಿ, ಅತ್ಯುತ್ತಮ ಆಡಳಿತಗಾರ ಮತ್ತು ಇನ್ನೂ ಉತ್ತಮ ವ್ಯಕ್ತಿಯಾಗಿದ್ದರು. ಅವರ ಅಗಲಿಕೆ ಪಕ್ಷಕ್ಕೆ ದೊಡ್ಡ ನಷ್ಟ ಮತ್ತು ನನಗೆ ವೈಯಕ್ತಿಕವಾಗಿ ನೋವು ತಂದಿದೆ ಎಂದು ಸಂತಾಪ ಸೂಚಿಸಿದ್ದಾರೆ.
ಹಿರಿಯ ನಾಯಕ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದು, ನಿಲಂಬೂರ್‍ನ ಆರ್ಯಾದನ್ ಮುಹಮ್ಮದ್ ಅವರ ನಿಧನಕ್ಕೆ ಸಂತಾಪಗಳು. ಪ್ರಗತಿಪರ ಮತ್ತು ಜ್ಯಾತ್ಯತೀತ ವಿಧಾನದೊಂದಿಗೆ ಸಮಾಜದ ನಾಡಿಮಿಡಿತ ಮತ್ತು ಸೇವೆಯ ಜ್ಞಾನವು ಅವರನ್ನು ಎಲ್ಲರಿಗೂ ಇಷ್ಟವಾಗಿತ್ತು ಎಂದು ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ.