ಕ್ಷಮೆ ಕೇಳಲು ನಿರಾಕರಿಸಿದ ಸತೀಶ್ ಜಾರಕಿಹೊಳಿ, ತಮ್ಮದೇ ಪಕ್ಷದವರಿಗೂ ಟಾಂಗ್

Social Share

ಬೆಂಗಳೂರು, ನ.9- ವಿವಾದಿತ ಹೇಳಿಕೆ ನೀಡಿ, ಅದನ್ನು ಸಮರ್ಥಿಸಿಕೊಳ್ಳುತ್ತಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಪಾಲಿಗೆ ಬಿಸಿ ತುಪ್ಪವಾಗಿದ್ದಾರೆ. ತಾವು ನೀಡಿದ್ದ ಹೇಳಿಕೆಯಲ್ಲಿ ತಪ್ಪಿಲ್ಲ, ಒಂದು ವೇಳೆ ತಪ್ಪು ಎಂದು ಸಾಬೀತು ಪಡಿಸಿ ನಾನು ಕ್ಷಮೆ ಕೇಳುವುದಷ್ಟೆ ಅಲ್ಲ, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಸಾಬೀತು ಪಡಿಸಲಾಗದಿದ್ದರೆ ನನ್ನ ವಿರುದ್ಧ ಮಾತನಾಡುವವರು ರಾಜೀನಾಮೆ ನೀಡುತ್ತಾರೆಯೇ ಎಂದು ಸತೀಶ್ ಪ್ರತಿ ಸವಾಲು ಹಾಕಿದ್ದಾರೆ.

ಸತೀಶ್ ಜಾರಕಿಹೊಳಿ ಅವರು ತಿರುಗಿ ಬೀಳುವವರೆಗೂ ಬಿಜೆಪಿಯ ಎಲ್ಲಾ ನಾಯಕರು ವಿವಾದಿತ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಸಾಬೀತು ಪಡಿಸಲಾಗದವರು ರಾಜೀನಾಮೆ ನೀಡುತ್ತಾರೆ ಎಂದು ಪ್ರತಿ ಸವಾಲು ಹಾಕುತ್ತಿದ್ದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಎಲ್ಲಾ ನಾಯಕರು ಜಾರಿಕೆಯ ಉತ್ತರ ನೀಡಲಾರಂಭಿಸಿದ್ದಾರೆ.

ಸತೀಶ್ ಜಾರಕಿಹೊಳಿ ಕ್ಷಮೆ ಕೇಳಲಿ ಬಿಡಲಿ ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ ಎನ್ನುತ್ತಿದ್ದಾರೆ. ತಮ್ಮ ಹೇಳಿಕೆಗೆ ಪೂರಕ ದಾಖಲೆಗಳನ್ನು ಒದಗಿಸಲು ಸಿದ್ದನಿದ್ದೇನೆ. ಸರ್ಕಾರ ತನಿಖೆ ನಡೆಸಲಿ, ಯಾವುದೇ ರೀತಿಯ ಸಮಿತಿ ಅಥವಾ ಆಯೋಗವನ್ನಾದರೂ ರಚನೆ ಮಾಡಲಿ ಎಂದು ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಇದು ನಂಬಿಕೆಯ ಪ್ರಶ್ನೆ, ಮತ್ತೊಬ್ಬರ ನಂಬಿಕೆಗಳನ್ನು ಘಾಸಿ ಮಾಡುವುದು ದೇಶದ್ರೋಹ ಎಂದು ಮುಖ್ಯಮಂತ್ರಿ ಹೇಳುತ್ತಿದ್ದಾರೆ.

# ಸ್ವಪಕ್ಷೀಕರಿಗೂ ಟಾಂಗ್:
ಕಾಂಗ್ರೆಸ್ ನಾಯಕರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಅನೇಕ ನಾಯಕರು ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ವಿರೋಸಿದ್ದಲ್ಲದೆ, ಅದು ಅವರ ವೈಯಕ್ತಿಕ ಅಭಿಪ್ರಾಯ. ಕಾಂಗ್ರೆಸ್‍ಗೂ ಅದಕ್ಕೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಚುನಾವಣೆ ಕಾಲಘಟ್ಟದಲ್ಲಿ ಈ ರೀತಿಯ ವಿವಾದ ಬೇಕಿರಲಿಲ್ಲ ಎಂಬುದು ಕಾಂಗ್ರೆಸಿಗರ ಆಕ್ಷೇಪವಾಗಿದೆ. ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ಸೇರಿದಂತೆ ಅನೇಕ ಹಗರಣಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಹೈಪರ್ ಪ್ರಚಾರದಲ್ಲಿ ತೊಡಗಿತ್ತು.

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಯಶಸ್ಸಿನ ಹುಮ್ಮಸ್ಸಿನಲ್ಲಿ ತೇಲುತ್ತಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿನ ಜನಸಂಕಲ್ಪ ಯಾತ್ರೆ ನಡೆಸಿ ಎದಿರೇಟು ನೀಡಲು ಹೆಣಗುತ್ತಿತ್ತು. ಈ ಪೈಪೋಟಿಯ ನಡುವೆ ಸತೀಶ್ ಜಾರಕಿಹೊಳಿ ಅವರ ಹೇಳಿಕೆ ಬಿಜೆಪಿಗೆ ದೊಡ್ಡ ಅಸ್ತ್ರ ಕೊಟ್ಟಂತಾಗಿದೆ. ದೆಹಲಿಯ ಹಲವು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ನಾಯಕರು ಸತೀಶ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಹರಿ ಹಾಯ್ದಿದ್ದಾರೆ. ಬೆಳಗಾವಿ ಸೇರಿದಂತೆ ಅನೇಕ ಕಡೆ ಬಿಜೆಪಿ ಮತ್ತು ಸಂಘ ಪರಿವಾರ ಬೆಂಬಲಿತರು ಸತೀಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಆರ್ಥಿಕ ದುರ್ಬಲರ ಮೀಸಲಾತಿ ಅನುಷ್ಠಾನಕ್ಕೆ ವಿಶೇಷ ಕಾಯ್ದೆ

ಸತೀಶ್ ಜಾರಕಿಹೊಳಿ ಜೊತೆ ಅಂತರ ಕಾಯ್ದುಕೊಂಡರೂ ಹೇಳಿಕೆ ಉಂಟು ಮಾಡಿರುವ ಮುಜುಗರದಿಂದ ಪಾರಾಗಲಾಗಲು ಕಾಂಗ್ರೆಸ್‍ಗೆ ಸಾಧ್ಯವಾಗಿಲ್ಲ. ಒಟ್ಟಾರೆ ಕಾಂಗ್ರೆಸ್ ಪಕ್ಷವನ್ನೇ ಹಿಂದು ವಿರೋಧಿ ಎಂದು ಬಿಜೆಪಿ ಈಗಾಗಲೇ ವ್ಯಾಪಕ ಪ್ರಚಾರ ಮಾಡಿದೆ. ಹಿಂದಿನ ಹಲವು ಹೇಳಿಕೆಗಳನ್ನು ಜೊತೆಗೂಡಿಸಿ ಪ್ರಸ್ತುತ ಸತೀಶ್ ಜಾರಕಿಹೊಳಿ ಅವರ ವಿವಾದವನ್ನು ಬಿಂಬಿಸಿರುವುದರಿಂದ ಕಾಂಗ್ರೆಸ್ ಭಾರೀ ಪ್ರಮಾಣದಲ್ಲಿ ಮತ ಕಳೆದುಕೊಳ್ಳುವ ಆತಂಕದಲ್ಲಿದೆ. ಕನಿಷ್ಠ ಸತೀಶ್ ಜಾರಕಿಹೊಳಿಯಿಂದ ಕ್ಷಮೆ ಕೇಳಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಬಹುದಾದ ಅವಕಾಶವನ್ನು ಕಾಂಗ್ರೆಸ್ ನಾಯಕರು ಕಳೆದುಕೊಂಡಿದ್ದಾರೆ.

ಈ ಮೊದಲು ಕಾಂಗ್ರೆಸ್ ವಿರುದ್ಧ ಅಸಮದಾನಗೊಂಡು ಸತೀಶ್ ಜಾರಕಿಹೊಳಿ ಬಿಜೆಪಿಯತ್ತ ಮುಖ ಮಾಡಿದ್ದರು. ಆಗ ಹೈಕಮಾಂಡ್ ನಾಯಕರು ಅವರನ್ನು ದೆಹಲಿಗೆ ಕರೆಸಿಕೊಂಡು ಸಮಾಧಾನ ಪಡಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ನೀಡಿ ಉಳಿಸಿಕೊಂಡಿದ್ದರು.

ಮೊದಲಿನಿಂದಲೂ ಸಿದ್ದರಾಮಯ್ಯ ಅವರ ಆಪ್ತ ಬಳಗದಲ್ಲಿದ್ದ ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಸಂಪುಟದಲ್ಲಿ ಸಚಿವರಾಗಿದ್ದರು. ಆದರೆ ಇಲಾಖೆ ನಿರ್ವಹಣೆಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂಬ ನೆಪವೊಡ್ಡಿ ಸಂಪುಟದಿಂದ ಕೈ ಬಿಡಲಾಗಿತ್ತು. ಬದಲಾಗಿ ಅದೇ ಕುಟುಂಬದ ರಮೇಶ್ ಜಾರಕಿಹೊಳಿಯನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು.

ಇದು ಪದೇ ಪದೇ ಹಗ್ಗ ಜಗ್ಗಾಟಕ್ಕೂ ಕಾರಣವಾಗಿತ್ತು. ನಂತರ ಅಧಿಕಾರಕ್ಕೆ ಬಂದ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಸಂಪುಟದಲ್ಲಿ ಅವಕಾಶ ವಂಚಿತ ರಮೇಶ್ ಜಾರಕಿಹೊಳಿ ಬಿಜೆಪಿ ನಡೆಸಿದ ಆಪರೇಷನ್ ಕಮಲಕ್ಕೆ ಬೆನ್ನುಲುಬಾಗಿ ನಿಂತು ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ್ದರು.

ಆ ವೇಳೆ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಜಾರಕಿಹೊಳಿ ಕುಟುಂಬ ಪಕ್ಷಬೇಧ ಮರೆತು ಸೆಟೆದು ನಿಂತಿತ್ತು. ಈಗ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿದ್ದಾರೆ ಆದರೂ ಜಾರಕೊಹೊಳಿ ಕುಟುಂಬ ಮತ್ತು ಡಿ.ಕೆ. ನಡುವಿನ ಪೈಪೋಟಿ ಕಡಿಮೆಯಾದಂತಿಲ್ಲ.

ಸಚಿವ ಸಂಪುಟ ಸೇರಲು ಶಾಸಕರು ಹಿಂದೇಟು

ಸಿದ್ದರಾಮಯ್ಯ ಅವರ ಪಾಳೇಯದಲ್ಲೂ ಸತೀಶ್ ಜಾರಕಿಹೊಳಿ ಮೊದಲಿನಷ್ಟು ಆತ್ಮೀಯವಾಗಿ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ ಸತೀಶ್ ಅವರ ಮನವೋಲಿಕೆ ರಾಜ್ಯ ನಾಯಕರ ಕೈ ಮೀರಿ ಹೋಗಿದೆ.
ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಜಾರಕಿಹೊಳಿ ಕುಟುಂಬ ತನ್ನದೇ ಆದ ಪ್ರಭಾವ ಹೊಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಕುಟುಂಬದ ಮೂರು ಮಂದಿಯನ್ನು ಕಣಕ್ಕಿಳಿಸಲು ಸತೀಶ್ ಜಾರಕಿಹೊಳಿ ತಯಾರಿ ನಡೆಸಿದ್ದರು.

ಆದರೆ ಇತ್ತೀಚೆಗೆ ರಾಜಸ್ಥಾನದ ಉದಯಪುರ್‍ನಲ್ಲಿ ನಡೆದ ಚಿಂತನ್ ಶಿವರ್‍ನಲ್ಲಿ ಒಂದು ಮನೆಗೆ ಒಂದೇ ಟಿಕೆಟ್ ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಉದಯಪುರ್ ಘೋಷಣೆಗಳನ್ನು ತಾವು ಕಡ್ಡಾಯವಾಗಿ ಪಾಲನೆ ಮಾಡುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇತ್ತೀಚೆಗೆ ನಡೆದ ಅಭಿನಂದನಾ ಸಮಾರಂಭದಲ್ಲಿ ಹೇಳಿದ್ದಾರೆ. ಇದು ಸತೀಶ್ ಜಾರಕಿಹೊಳಿ ಸಿಡಿಮಿಡಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಜಾರಕಿಹೊಳಿ ಕುಟುಂಬದ ಬಾಲಚಂದ್ರ ಮತ್ತು ರಮೇಶ್ ಬಿಜೆಪಿಯಲ್ಲಿದ್ದಾರೆ. ಸತೀಶ್ ಮತ್ತು ಲಕ್ಕನ್ ಕಾಂಗ್ರೆಸ್‍ನಲ್ಲಿದ್ದಾರೆ. ಲಕ್ಕನ್ ಪ್ರಸ್ತುತ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇರಾದೆಯಲ್ಲೂ ಇದ್ದಾರೆ. ಅಷ್ಟೇ ಅಲ್ಲದೆ ಸತೀಶ್ ಜಾರಕಿಹೊಳಿ ತಾವು ಸ್ಪರ್ಧೆ ಮಾಡುವ ಜೊತೆಗೆ ಪುತ್ರ ಅಥವಾ ಪುತ್ರಿಗೆ ಮತ್ತೊಂದು ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ಎಂದು ಬೇಡಿಕೆಯಿಟ್ಟಿದ್ದರು.

ಪ್ರಸ್ತುತ ಸನ್ನಿವೇಶದಲ್ಲಿ ಒಂದೇ ಕುಟುಂಬದ ಮೂರು ಮಂದಿಗೆ ಟಿಕೆಟ್ ಕೊಟ್ಟರೆ ಉಳಿದ ನಾಯಕರು ತಮ್ಮ ಮಕ್ಕಳಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಸಲ್ಲಿಸುವ ಸಾಧ್ಯತೆ ಇರುವುದರಿಂದ ಜಾರಕಿಹೊಳಿ ಕುಟುಂಬದ ಅರ್ಜಿಗಳನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಸಿಎಂ ಬೊಮ್ಮಾಯಿ ಭೇಟಿ

ಈ ಹಿನ್ನೆಲೆಯಲ್ಲಿ ಅಸಮದಾನಗೊಂಡಿರುವ ಸತೀಶ್ ಪಕ್ಷಕ್ಕೆ ಮುಜುಗರವಾಗುತ್ತಿದೆ ಎಂಬ ಅರಿವಿದ್ದರೂ ತಲೆ ಕೆಡಿಸಿಕೊಳ್ಳದೆ, ವಿವಾದಿತ ಹೇಳಿಕೆಗೆ ಕ್ಷಮೆ ಕೇಳಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ದನಿದ್ದೇನೆ, ಸಮಾಜ ಸೇವೆ ಮಾಡಲು ನನಗೆ ಅಧಿಕಾರವೇ ಬೇಕು ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಸತೀಶ್ ಅವರನ್ನು ಎದುರು ಹಾಕಿಕೊಂಡು ಬೆಳಗಾವಿಯಲ್ಲಿ ಪಕ್ಷ ಕಟ್ಟುವುದು ಕಾಂಗ್ರೆಸ್ ಪಾಲಿಗೆ ಸವಾಲೇ ಸರಿ. ಆ ಜಿಲ್ಲೆಯ ಲಕ್ಷ್ಮೀ ಹೆಬಾಳ್ಕರ್ ಮತ್ತು ಹುಕ್ಕೇರಿ ಕುಟುಂಬಕ್ಕೆ ಆದ್ಯತೆ ನೀಡಬಹುದಾದರೂ ಅದು ಅಷ್ಟು ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಕಾಂಗ್ರೆಸ್ ಪಾಲಿಗೆ ಸತೀಶ್ ಜಾರಕಿಹೊಳಿ ಹೇಳಿಕೆ ಬಿಸಿ ತುಪ್ಪವಾಗಿದೆ.

Articles You Might Like

Share This Article