ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಮಹತ್ವದ ಸಭೆ

Social Share

ಬೆಂಗಳೂರು, ಫೆ.20- ಮುಂದಿನ ಚುನಾವಣೆಯ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ನಾಯಕರ ಮೇಲೆ ದಾಳಿ ನಡೆಸಿ, ಕಿರುಕುಳ ನೀಡುವ ಸಾಧ್ಯತೆ ಇರುವುದರಿಂದ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಪ್ರಮುಖ ನಾಯಕರ ನಿಯೋಗದ ಜೊತೆ ಚರ್ಚೆ ನಡೆಸಲಿದೆ.
ಹೈಕಮಾಂಡ್‍ನ ಆಹ್ವಾನದ ಮೇರೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಲವು ನಾಯಕರ ಜೊತೆ ದೆಹಲಿಯಲ್ಲಿ ವರಿಷ್ಠ ಮಂಡಳಿಯ ರಾಹುಲ್‍ಗಾಂಧಿ, ರಣದೀಪ್ ಸಿಂಗ್ ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಸಭೆ ನಡೆಸಲಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆ ಸಿದ್ಧತೆಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ. ಫೆಬ್ರವರಿ 25ರಂದು ಸಂಜೆ 4.30ಕ್ಕೆ ದೆಹಲಿಯಲ್ಲಿ ಸಭೆ ನಡೆಯಲಿದೆ. ಅದರಲ್ಲಿ ಭಾಗವಹಿಸಲು 15ಕ್ಕೂ ಹೆಚ್ಚು ಮಂದಿ ಪ್ರಮುಖ ನಾಯಕರಿಗೆ ಆಹ್ವಾನವಿದೆ. ಇದು ರಾಷ್ಟ್ರ ಹಾಗೂ ರಾಜ್ಯ ಸಂಘಟನೆಯ ದೃಷ್ಟಿಯಿಂದ ಮಹತ್ವದ ಸಭೆಯಾಗಿದೆ. ಪ್ರಮುಖವಾಗಿ ಬಿಜೆಪಿಯ ಹಿಡನ್ ಅಜೆಂಡಾಗಳ ಬಗ್ಗೆ ತಮಗಿರುವ ಮಾಹಿತಿಯನ್ನು ಹೈಕಮಾಂಡ್‍ನ ನಾಯಕರು ರಾಜ್ಯ ನಾಯಕರ ಜೊತೆ ಹಂಚಿ ಕೊಳ್ಳಲಿದ್ದಾರೆ.
ಹಿಜಾಬ್ ಸೇರಿದಂತೆ ಹಲವು ಮಹತ್ವದ ವಿಷಯದಲ್ಲಿ ಸಂಘ ಪರಿವಾರ ತನ್ನ ಗುಪ್ತ ಕಾರ್ಯಸೂಚಿಯನ್ನು ಜಾರಿಗೆ ತಂದು, ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಸಿದೆ. ಹಿಜಾಬ್ ವಿಷಯ ಸೂಕ್ಷ್ಮವಾಗಿದ್ದು, ಅದರ ಕುರಿತು ದೇಶಾದ್ಯಂತ ಒಂದೇ ನಿಲುವು ಇರಬೇಕು ಎಂಬ ಕಾರಣಕ್ಕೆ ರಾಜ್ಯ ನಾಯಕರ ಜೊತೆ ಹೈಕಮಾಂಡ್ ಮುಖ್ಯಸ್ಥರು ಚರ್ಚೆ ನಡೆಸಲಿದ್ದಾರೆ.
ಪ್ರಮುಖವಾಗಿ ಚುನಾವಣೆ ಕಾಲದಲ್ಲಿ ಕೇಂದ್ರ ಸರ್ಕಾರ ಜಾರಿ ನಿರ್ದೇಶನಾಲಯ, ಸಿಬಿಐ, ಆದಾಯ ತೆರಿಗೆ ಮತ್ತು ಇತರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ಕಾಂಗ್ರೆಸ್‍ನ ಪ್ರಮುಖ ನಾಯಕರು ಹಾಗೂ ಬೆಂಬಲಿಗರ ಮೇಲೆ ದಾಳಿ ನಡೆಸುವ ಸಾಧ್ಯತೆ ಇದೆ. ಈ ಮೂಲಕ ಚುನಾವಣೆ ವೇಳೆ ಆತ್ಮಸ್ಥೈರ್ಯ ಕುಗ್ಗಿಸಿ, ಹಿನ್ನೆಡೆ ಅನುಭವಿಸುವಂತೆ ಮಾಡುವ ಷಡ್ಯಂತ್ರ ನಡೆದಿದೆ. ಅದಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ. ಜೊತೆಗೆ ತಮಗಿರುವ ಕೆಲ ಮಹತ್ವದ ಮಾಹಿತಿಗಳನ್ನು ರಾಜ್ಯ ನಾಯಕರ ಜೊತೆ ಹಂಚಿಕೊಳ್ಳಲು ಸಭೆ ಕರೆಯಲಾಗಿದೆ ಎಂದು ತಿಳಿದು ಬಂದಿದೆ.
ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಬಿಜೆಪಿ ದೇಶ ವಿಭಾಗ ಮಾಡಲು ಹೊರಟಿದೆ. ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಚುನಾವಣೆ ಸಂದರ್ಭದಲ್ಲಿ ಅಕಾರಿಗಳ ದುರುಪಯೋಗ ಪಡಿಸಿಕೊಳ್ಳುವ ಮಾಹಿತಿ ಹೈಕಮಾಂಡ್‍ನವರಿಗಿದೆ. ಅವರಿಗಿರುವ ಮಾಹಿತಿ ಆಧರಿಸಿ ನಮ್ಮ ಜೊತೆ ಚರ್ಚೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ನಾನು ಅಧ್ಯಕ್ಷನಾದಾಗಲೇ ರಾಜ್ಯ ನಾಯಕರ ನಿಯೋಗ ತೆಗೆದುಕೊಂಡು ಹೋಗಿ ಚರ್ಚೆ ಮಾಡಬೇಕು ಎಂದಿದ್ದೆ. ಆದರೆ ಆಗ ಸಮಯ ಸಿಗಲಿಲ್ಲ. ನಾನು ಮತ್ತು ಸಿದ್ದರಾಮಯ್ಯ ಅವರು ಮಾತ್ರ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಬಂದಿದ್ದೆವು. ಚುನಾವಣೆ ತಯಾರಿ ಸಂಬಂಧ ಸಭೆಗಳಾಗಿವೆ. ಕಳೆದೆರಡು ದಿನಗಳಿಂದ ಶಾಸಕರಿಗೆ ತರಬೇತಿಗಳಾಗುತ್ತಿವೆ. ದೆಹಲಿಯ ನಾಯಕರು ತರಬೇತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಲ ಮಹತ್ವದ ವಿಷಯಗಳ ಚರ್ಚೆಗೆ ರಾಷ್ಟ್ರೀಯ ನಾಯಕರು ಆಹ್ವಾನ ನೀಡಿದ್ದಾರೆ. ಅದಕ್ಕಾಗಿ ನಮ್ಮ ನಿಯೋಗ ದೆಹಲಿಗೆ ಹೋಗುತ್ತಿದೆ ಎಂದು ಸ್ಪಷ್ಟ ಪಡಿಸಿದ್ದಾರೆ.

Articles You Might Like

Share This Article