ಶಿವಮೊಗ್ಗ, ಫೆ.27- ದುಷ್ಕರ್ಮಿಗಳಿಂದ ಹತ್ಯೆಗೀಡಾದ ಭಜರಂಗ ದಳ ಕಾರ್ಯಕರ್ತ ಹರ್ಷ ಅವರ ನಿವಾಸಕ್ಕೆ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮತ್ತಿತರ ಮುಖಂಡರು ಹರ್ಷ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು.
ನಂತರ ಮಾತನಾಡಿದ ಅವರು, ಹರ್ಷನನ್ನು ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು.ಅವರ ಹತ್ಯೆಯನ್ನು ಯಾರೇ ಮಾಡಿರಲಿ ಅದನ್ನು ನಾವು ಖಂಡಿಸುತ್ತೇವೆ. ಇಂತಹ ಘಟನೆಗಳು ನಡೆಯಬಾರದು. ದುಷ್ಕರ್ಮಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂಡ ಈ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದಾರೆ.ಸದ್ಯದಲ್ಲಿ ಅವರು ಕೂಡ ಹರ್ಷ ಅವರ ನಿವಾಸಕ್ಕೆ ಆಗಮಿಸಿ ಕುಟುಂಬ ಸದಸ್ಯರಿಗ ಸಾಂತ್ವನ ಹೇಳಲಿದ್ದಾರೆ.
ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕೆಂದು ನಮ್ಮ ನಾಯಕರು ಒತ್ತಾಯಿಸಿದ್ದಾರೆ ಎಂದು ತಿಳಿಸಿದರು. ಕಫ್ರ್ಯೂ, ನಿಷೇಧಾಜ್ಞೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ನಾವು ತಡವಾಗಿ ಬಂದಿದ್ದೇವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಹರ್ಷ ಹತ್ಯೆ ಹಿಂದೆ ಯಾವ ಸಂಘಟನೆಯ ಪಾತ್ರ ಇದೆ ಎಂಬುದನ್ನು ಪೊಲೀಸ್ ಇಲಾಖೆ ಪತ್ತೆಹಚ್ಚಬೇಕು ಎಂದು ಹೇಳಿದರು.
ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಮಂಜುನಾಥ್‍ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಪ್ರಸನ್ನಕುಮಾರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಈ ಸಂದರ್ಭದಲ್ಲಿದ್ದರು.
