ಬೆಂಗಳೂರು,ಜು.30- ಸೋಲುವ ಭೀತಿಯಿಂದ ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಮುಂದೂಡುವ ಪ್ರಯತ್ನ ನಡೆಸುತ್ತಿದೆ. ಅನುದಾನದಲ್ಲಿ ಮುಂದೆ, ಅಭಿವೃದ್ಧಿಯಲ್ಲಿ ಹಿಂದೆ ಎಂಬಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿಯ ಮಾಜಿ ಮೇಯರ್ಗಳಾದ ಹುಚ್ಚಪ್ಪ, ಗಂಗಾಂಬಿಕೆ, ಮಾಜಿ ಸದಸ್ಯರಾದ ಎಂ.ಶಿವರಾಜ್, ವಾಜಿದ್ ಸತ್ಯನಾರಾಯಣ ಹಾಗೂ ಕೆ.ಎಲ್.ಮೋಹನ್ ಅವರು ಬಿಬಿಎಂಪಿಗೆ 2008ರಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ 4 ವರ್ಷ ಚುನಾವಣೆ ನಡೆಸದೆ ಕಾಲಹರಣ ಮಾಡಿತ್ತು. ಈಗ ಎರಡು ವರ್ಷದಿಂದಲೂ ಚುನಾವಣೆ ನಡೆಸದೆ ಕುಂಟು ನೆಪಗಳನ್ನು ಹೇಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ಆಡಳಿತ ಮತ್ತು ಅಧಿಕಾರ ವಿಕೇಂದ್ರಿಕರಣಕ್ಕೆ ಆದ್ಯತೆ ನೀಡುವುದಾಗಿ ಬಿಜೆಪಿ ಬಾಯಿ ಮಾತಿನ ಹೇಳಿಕೆ ನೀಡು ತ್ತಿದೆ. ಚುನಾವಣೆ ನಡೆಸಲು ಮುಂದಾ ಗದೆ ಮತ್ತಷ್ಟು ಕಾಲಾವಕಾಶ ಕೇಳುವ ಪ್ರಯತ್ನ ನಡೆಸಿರುವುದು ನಮಗೆ ಮಾಹಿತಿ ಇದೆ.
ಕಾಂಗ್ರೆಸ್ ಹೋರಾಟದಿಂದಾಗಿ ಸುಪ್ರೀಂಕೋರ್ಟ್ ಚುನಾವಣೆ ಪ್ರಕ್ರಿಯೆ ಆರಂಭಿಸಲು ನಿರ್ದೇಶನ ನೀಡಿದೆ. ಒಂದು ವಾರದ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಟ ಸೇರಿದಂತೆ ಪ್ರಕ್ರಿಯೆಗಳನ್ನು ಆರಂಭಿಸಬೇಕು. ಆದರೆ ಸರ್ಕಾರ ಈ ಹಿಂದೆ 8 ವಾರ ಸಮಯ ತೆಗೆದುಕೊಂಡು ವಚನ ಭ್ರಷ್ಟವಾಗಿತ್ತು. ಮತ್ತೆ ಒಂದು ವಾರ ಕಾಲಾವಕಾಶ ನೀಡಿದರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.
ನ್ಯಾಯಾಲಯಕ್ಕೆ ಅಗೌರವ ತೋರಲಾಗುತ್ತಿದೆ ಎಂದು ಆರೋಪಿಸಿದರು.
ಮುಂದಿನ ನಾಲ್ಕು ದಿನಗಳ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಟಿಸಬೇಕು. ಚುನಾವಣಾ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕು. ಇಲ್ಲವಾದರೆ 7ದಿನಗಳ ಗಡುವು ಮುಗಿದ ಬಳಿಕ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ಎಚ್ಚರಿಸಿದ್ದಾರೆ.
198 ವಾರ್ಡ್ಗಳಿದ್ದಾಗಲೇ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗಿರಲಿಲ್ಲ. ಹೊಸದಾಗಿ ಬಿಬಿಎಂಪಿಗೆ ಸೇರಿದ 110 ಹಳ್ಳಿಗಳು ರಸ್ತೆ, ನೀರು, ಒಳಚರಂಡಿಯಂತಹ ಮೂಲಸೌಕರ್ಯಗಳಿಂದ ವಂಚಿತವಾಗಿದ್ದವು.
ಈಗ ವಾರ್ಡ್ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸಲಾಗಿದೆ. ಮನಸೋ ಇಚ್ಛೆ ಕ್ಷೇತ್ರ ಪುನರ್ ವಿಂಗಡನೆ ಮಾಡಲಾಗಿದೆ. ಕನಿಷ್ಠ ಮೀಸಲಾತಿ ನಿಗದಿಯನ್ನು ನಾಯೋಚಿತವಾಗಿ ಮಾಡಿ ಎಂದು ನಗರಾಭಿವೃದ್ಧಿ ಇಲಾಖೆಯನ್ನು ಒತ್ತಾಯಿಸಿದರು.
ಬೆಂಗಳೂರಿನಲ್ಲಿ. 1.30 ಕೋಟಿ ಜನರಿದ್ದಾರೆ. ಅವರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸ್ಥಳೀಯ ಆಡಳಿತದ ಅಗತ್ಯತೆ ಹೆಚ್ಚಿದೆ. ಈ ಮೊದಲು ರಾಜಕಾಲುವೆಗೆ 6 ಕೋಟಿ ಮಂಜೂರು ಮಾಡಲಾಗಿತ್ತು. ಅದನ್ನು ಖರ್ಚು ಮಾಡುವಲ್ಲಿ ಉತ್ಸುಕತೆ ತೋರಿಸಿದ ಸರ್ಕಾರ ಅಭಿವೃದ್ಧಿ ವಿಷಯ ಬಂದಾಗ ಹಿನ್ನಡೆ ಅನುಭವಿಸುತ್ತಿದೆ.
ಬಿಬಿಎಂಪಿಗೆ ರೂಪಿಸಲಾಗಿರುವ ಹೊಸ ಕಾಯ್ದೆ ಸಮಸ್ಯೆ ಬಗೆಹರಿಸುತ್ತಿಲ್ಲ.ಸ್ಥಳೀಯ ಜನಪ್ರತಿನಿಗಳಿಲ್ಲದೆ ಸೈಕಲ್, ಲ್ಯಾಪ್ಟಾಪ್, ಹೊಲಿಗೆಯಂತ್ರ, ವೈದ್ಯಕೀಯ ವೆಚ್ಚ ಪಾವತಿಯಂತಹ ಸೌಲಭ್ಯಗಳು ಜನಸಾಮಾನ್ಯರಿಗೆ ಸಿಗುತ್ತಿಲ್ಲ. ಜನರ ಕಷ್ಟ ಕೇಳುವವರು ಇಲ್ಲ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.