ಬೆಂಗಳೂರು, ಜೂ.18- ಬೆಲೆ ಏರಿಕೆ ಖಂಡಿಸಿ ಇಂದು ಕಾಂಗ್ರೆಸ್‍ನಾಯಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ. ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ದಿನೇಶ್ ಗುಂಡೂರಾವ್, ಯು.ಟಿ ಖಾದರ್ ಸೇರಿದಂತೆ ಹಲವರು ಬೆಲೆ ಏರಿಕೆಗೆ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಅಚ್ಛೇ ದಿನ ಅಂತಾ ಹೇಳಿಕೊಂಡು ಜನರಿಗೆ ಅನ್ಯಾಯ ಮಾಡಿದ್ದಾರೆ. ದಿನಸಿ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್ ಸಿಲಿಂಡರ್ ಬೆಲೆಯೂ ಹೆಚ್ಚಳವಾಗಿದೆ. ಅಚ್ಛೇ ದಿನ್ ಅಂತಾ ಹೇಳಿಕೊಂಡು ಬಂದವರು ಜನರ ರಕ್ತ ಹೀರಿದ್ದಾರೆ. ಈಗ ಜಿಎಸ್‍ಟಿ ಹೆಚ್ಚಳ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.
ಇದೀಗ ಮೊಸಲು, ಮಜ್ಜಿಗೆ, ಲಸ್ಸಿ, ಪನ್ನೀರು ದರ ಹೆಚ್ಚಳವಾಗಿದೆ. ಅಕ್ಕಿ, ಗೋದಿ, ಬಾರ್ಲಿ ಮೇಲೆ ಶೇ.5 ರಷ್ಟು ದರ ಹೆಚ್ಚಿದೆ. ಸೋಲಾರ್, ಎಲïಇಡಿ ಬಲ್ಬï ಗಳಿಗೆಲ್ಲಾ ಜಿಎಸ್ಟಿ ಹಾಕಲಾಗಿದೆ ಎಂದರು. ಬಡವರು, ಮಧ್ಯಮವರ್ಗದವರು ಬಳಸುವ ವಸ್ತುಗಳು, ಹೆಚ್ಚಿಸಲಾಗಿದೆ. ರೈತರು, ಕೂಲಿ ಕಾರ್ಮಿಕರ ಮಾತ್ರ ಆದಾಯ ಹೆಚ್ಚಾಗಿಲ್ಲ ಎಂದರು.
ಬಸವರಾಜ್ ಬೊಮ್ಮಾಯಿ ಒಂದು ವರ್ಷದ ಸಾಧನೆ ಅಂತಾ ಬಿಂಬಿಸಿಕೊಳ್ತಿದ್ದಾರೆ. ಆದರೆ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ರೈತರಿಗೆ ಸಕಾಲದಲ್ಲಿ ರಸಗೊಬ್ಬರ ದೊರೆಯುತ್ತಿಲ್ಲ. ಇಂತಹ ಪರಿಸ್ಥಿತಿಯಿಂದ ಸಣ್ಣ, ಗುಡಿ ಕೈಗಾರಿಕೆಗಳು ಉಳಿಯಲಿವೆಯಾ ? ಎಂದು ಪ್ರಶ್ನಿಸಿದರು.ಜಿಎಸ್ಟಿ ಹೆಚ್ಚಳದ ಹೊಡೆತ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ ಎಂದರು.
ಇಂದು ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ವಿರೋಧ ಪಕ್ಷದ ಅಭ್ಯರ್ಥಿ ಯಶವಂತ ಸಿನ್ಹ ಅವರಿಗೆ ಮತ ಚಲಾಯಿಸುತ್ತಿದ್ದಾರೆ. ಈಗಾಗಲೇ ನಮ್ಮ ಪಕ್ಷದ 20ಶಾಸಕರು ಮತ ಹಾಕಿದ್ದಾರೆ. ದೇಶಕ್ಕೆ ಒಳ್ಳೆಯ ದಿನ ಬರುತ್ತೆ ಅಂತಾ ಮೋದಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಎಂಟು ವರ್ಷಗಳನ್ನ ಪೂರೈಸಿದ್ದಾರೆ. ಸಂಭ್ರಮಾಚರಣೆ ದೇಶದೆಲ್ಲೇಡೆ ಮಾಡಿದ್ದಾರೆ.
ಕರ್ನಾಟಕಕ್ಕೆ ವಿವಿಧ ಯೋಜನೆಗಳಿಗೆ 129766 ಕೋಟಿ ಹಣ ಕೊಟ್ಟಿದ್ದೇವೆ ಅಂತಾ ಜಾಹೀರಾತು ಕೊಟ್ಟಿದ್ದಾರೆ.
ರಾಜ್ಯದಿಂದಲೇ ಒಟ್ಟು 19 ಲಕ್ಷ ಕೋಟಿ ಸಂಗ್ರಹವಾಗಿದೆ. ಇಡೀ ದೇಶದಲ್ಲಿ ತೆರಿಗೆ ಕೊಡೋದ್ರಲ್ಲಿ ರಾಜ್ಯ ಎರಡನೇ ಸ್ಥಾನದಲ್ಲಿದೆ. ಆದರೂ ಜನಪರ ವಾಗಿ ಸರ್ಕಾರವಿಲ್ಲ ಎಂದರು. ಮುವತ್ತೈದು ಸಾವಿರ ಹುದ್ದೆಗೆ 1.26 ಕೋಟಿ ಮಂದಿ ಅರ್ಜಿ ಹಾಕಿದ್ದರು. ಒಂದು ಹುದ್ದೆಗೆ 130 ಜನ ಅರ್ಜಿ ಹಾಕಿದ್ದರು. ಬಿಜೆಪಿಯವರು ಜನರ ಜೀವನವನ್ನ ಅಸ್ತವ್ಯಸ್ತ ಮಾಡಿದ್ದಾರೆ ಎಂದು ಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವ, ಮv್ತು ಸಂವಿಧಾನವನ್ನೂ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗೋವಾದಲ್ಲಿ ನಮ್ಮವರು ಹನ್ನೊಂದು ಜನ ಗೆದ್ದಿದ್ದಾರೆ. ಕೋಟ್ಯಾಂತರ ಹಣದ ಅಮಿಷವೊಡ್ಡಿ ಸೆಳೆಯುತ್ತಿದ್ದಾರೆ. ನಲ್ವತ್ತು ಪರ್ಸೆಂಟ್ ಸರ್ಕಾರ ಇದೆ ಅಂತಾ ಜಗಜ್ಜಾಹೀರಾಗಿದೆ. ನರೇಂದ್ರ ಮೋದಿ ಅವರಿಗೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನೇರವಾಗಿ ದೂರು ನೀಡಿದ್ದಾರೆ. ಆದರೂ ಯಾವುದೇ ಕ್ರಮಕೈಗೊಂಡಿಲ್ಲ. ಸತೋಷ್ ಪಾಟೀಲ್ ಲಂಚ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಇದೇ ಕಾರಣಕ್ಕೆ ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ ಹಾಗಿದ್ದು ಸಹ ಮಾತೆತ್ತಿದರೆ, ಅವರ ಕಾಲದಲ್ಲಿ ನಡೆದಿರಲಿಲ್ಲವೋ ಅಂತಾರೆ. ಹಾಗಾದರೆ ವಿಪಕ್ಷ ಸ್ಥಾನದಲ್ಲಿ ಇದ್ದಾಗ ಏನು ಮಾಡುತ್ತಿದ್ದರು ಎಂದು ಟೀಕಿಸಿದರು.
ನಮ್ಮ ಕಾಲದಲ್ಲಿ ಆಡಳಿತ ಗಬ್ಬೆದ್ದು ಹೋಗಿತ್ತು ಅಂತಾರೆ. ನಮ್ಮ ಅವಧಿಯಲ್ಲಿ 165 ಭರವಸೆಗಳನ್ನ ಈಡೇರಿಸಿದ್ದೇವೆ. ಇದಲ್ಲದೆ 30 ಹೊಸ ಕಾರ್ಯಕ್ರಮಗಳನ್ನ ತಂದಿದ್ದಾವು. ಬಿಜೆಪಿಯವರಿಗೆ ಮಾನ ಮರ್ಯದೆ ಇದೆಯಾ ? ಪ್ರಣಾಳಿಕೆಯನ್ನ ಮೊದಲು ತೆಗೆದು ನೋಡಲಿ ಎಂದು ಸವಾಲು ಹಾಕಿದರು.
ಪಿಎಸ್‍ಐ ಅಕ್ರಮ ನೇಮಕಾತಿಯಲ್ಲೂ ದುಡ್ಡು ಹೊಡೆದಿದ್ದಾರೆ. ಸದನದಲ್ಲಿ ಏನೂ ಹಗರಣ ನಡೆದಿಲ್ಲ ಅಂತಾ ಗೃಹ ಸಚಿವರು ಉತ್ತರ ನೀಡಿದ್ದರು. ಈಗ ಆರಗ ಜ್ಞಾನೇಂದ್ರ ಏನು ಹೇಳುತ್ತಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ಮಾಡಿದರು.