ಪ್ರಮುಖ ಸಮುದಾಯಗಳ ಕಡೆಗಣನೆ, ಬಿಜೆಪಿ ಕಡೆ ಮುಖ ಮಾಡಿದ ಮತ್ತಷ್ಟು ಕಾಂಗ್ರೆಸ್ ಶಾಸಕರು

Spread the love

ಬೆಂಗಳೂರು, ಮೇ 28- ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಲಿಂಗಾಯಿತ ಸಮುದಾಯವನ್ನು ಕಡೆಗಣಿಸಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದಂತೆ, ಕಾಂಗ್ರೆಸ್‍ನ ಮತ್ತಷ್ಟು ಶಾಸಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದು ಕೈ ಪಡೆಯಲ್ಲಷ್ಟೆ ಅಲ್ಲ ಕೇಸರಿ ಪಡೆಯಲ್ಲೂ ಅಲ್ಲೊಲಕಲ್ಲೋಲ ಸೃಷ್ಟಿಯಾಗಿದೆ.

ಕಳೆದ ಬಾರಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರ ಶಿಫಾರಸ್ಸುಗಳನ್ನು ಕಸದ ಬುಟ್ಟಿಗೆ ಹಾಕಿ, ಬೇರು ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಿದ ಕಾರ್ಯಕರ್ತರಿಗೆ ರಾಜ್ಯಸಭೆ ಮತ್ತು ವಿಧಾನ ಪರಿಷತ್‍ನಲ್ಲಿ ಅವಕಾಶ ನೀಡಿತ್ತು. ಅದೇ ವೇಳೆ ಕಾಂಗ್ರೆಸ್ ಪ್ರಭಾವಿ ನಾಯಕರಿಗೆ ಮಣೆ ಹಾಕಿ ಟೀಕೆಗೆ ಗುರಿಯಾಗಿತ್ತು. ಈ ಬಾರಿಯೂ ಬಿಜೆಪಿ ಮತ್ತೆ ಕಾರ್ಯಕರ್ತರಿಗೆ ಮಣೆ ಹಾಕಲಿದೆ ಎಂಬ ಅಂದಾಜುಗಳಿದ್ದವು, ರಾಜ್ಯ ನಾಯಕರ ಶಿಫಾರಸು
ಈ ಬಾರಿಯೂ ಕಸದ ಬುಟ್ಟಿ ಸೇರಲಿದೆ ಎಂಬ ನಿರೀಕ್ಷೆಯಂತೆ ಬಿಜೆಪಿ ಹೈಕಮಾಂಡ್ ನಡೆದುಕೊಂಡಿದೆ.

ಬಿಜೆಪಿಯ ನಡವಳಿಕೆ ಅಂದಾಜಿಸಿಯೇ ಕಾಂಗ್ರೆಸ್ ಮುಂಜಾಗೃತೆಯಾಗಿ ಈ ಬಾರಿ ಕಾರ್ಯಕರ್ತರಿಗೆ ಮಣೆ ಹಾಕುವುದಾಗಿ ಹೇಳಿತ್ತು. ಒಳಗೊಳಗೆ ಕೆಲ ಕಾರ್ಯಕರ್ತರ ಹೆಸರನ್ನು ಪಟ್ಟಿ ಮಾಡಿಕೊಂಡಿತ್ತು. ವೋಟ್ ಬ್ಯಾಂಕ್ ಅನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ರಿಶ್ಚಿಯನ್ ಮತ್ತು ಲಿಂಗಾಯಿತ ಸಮುದಾಯಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿತ್ತು.

ಆದರೆ ದೆಹಲಿ ಮಟ್ಟದಲ್ಲಿ ನಡೆದ ಮಾತುಕತೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ಪ್ರತಿಪಕ್ಷದ ನಾಯಕರ ನಡುವೆ ಪೈಪೋಟಿ ಏರ್ಪಟ್ಟಾಗ ಕಾರ್ಯಕರ್ತರು ಮತ್ತು ಅವಕಾಶ ವಂಚಿತ ವರ್ಗವನ್ನು ಪಕ್ಕಕ್ಕಿಟ್ಟು ಯಥಾರೀತಿ ಇಬ್ಬರು ನಾಯಕರು ತಮ್ಮ ಬೆಂಬಲಿಗರಿಗೆ ಅವಕಾಶ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಹಂಚಿಕೆ ಪ್ರವೃತ್ತಿಯಲ್ಲಿ ಪ್ರಮುಖವಾಗಿ ಲಿಂಗಾಯಿತ ಮತ್ತು ಒಕ್ಕಲಿಗ ಸಮುದಾಯವನ್ನು ಕಡೆಗಣಿಸಲಾಗಿದೆ ಎಂಬ ಆಕ್ಷೇಪಗಳು ಕೇಳಿ ಬಂದಿವೆ. ಕಾರ್ಯಕರ್ತರಂತೂ ಅಸಮದಾನದಿಂದ ಕುದಿಯಲಾರಂಭಿಸಿದ್ದಾರೆ.

ಕಾಂಗ್ರೆಸ್‍ನ ಹಿರಿಯ ನಾಯಕ ಎಸ್.ಆರ್.ಪಾಟೀಲ್ ಅವರಿಗೆ ಅವಕಾಶ ತಪ್ಪಿ ಹೋಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಉದ್ದೇಶ ಪೂರ್ವಕವಾಗಿಯೇ ಪಾಟೀಲರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂಬ ವ್ಯಾಖ್ಯಾನಗಳು ನಡೆದಿವೆ. ಅವರಿಂದ ಕಾಂಗ್ರೆಸ್‍ಗೆ ಯಾವುದೇ ಲಾಭವಾಗುತ್ತಿರಲಿಲ್ಲ, ಬಿಜೆಪಿ ಜೊತೆ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದರು ಎಂಬೆಲ್ಲಾ ಟೀಕೆಗಳು ಎಸ್.ಆರ್.ಪಾಟೀಲ್ ಅವರ ವಿರುದ್ಧ ಕೇಳಿ ಬರುತ್ತಿವೆ.

ಯಡಿಯೂರಪ್ಪ ಅವರನ್ನು ಬಲವಂತವಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ನಂತರ ಲಿಂಗಾಯಿತ ಸಮುದಾಯದಲ್ಲಿ ಬಿಜೆಪಿ ವಿರುದ್ಧ ಸೃಷ್ಟಿಯಾಗಿದ್ದ ಆಕ್ರೋಶದ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂಬ ಕುದಿಮೌನ ಕೈ ಪಡೆಯಲ್ಲಿ ಹರಿದಾಡುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಮಾಡಿದ 2500 ಕೋಟಿ ರೂಪಾಯಿ ಡೀಲ್ ಆರೋಪ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಬಗ್ಗೆಯೇ ಅನುಮಾನಗಳನ್ನು ಹುಟ್ಟು ಹಾಕಿದೆ. ಯಡಿಯೂರಪ್ಪ ಅವರನ್ನು ಇಳಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ನೀಡಿ ಲಿಂಗಾಯಿತರಿಗೆ ಮಣೆ ಹಾಕಲಾಗಿದೆ ಎಂಬ ಸಮಾಧಾನ ಯತ್ನಾಳ್ ಹೇಳಿಕೆಯಿಂದ ಕೊಚ್ಚಿ ಹೋಗಿದೆ.

ಈ ಹಂತದಲ್ಲಿ ಕಾಂಗ್ರೆಸ್ ಲಿಂಗಾಯಿತ ಸಮುದಾಯಕ್ಕೆ ಅವಕಾಶ ನೀಡಿದ್ದರೆ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ಮರಳುವ ನಿರೀಕ್ಷೆಗಳು ಬಹಳಷ್ಟಿತ್ತು. ಆದರೆ ನಾಯಕರ ಸ್ವಾರ್ಥ ರಾಜಕಾರಣಕ್ಕಾಗಿ ಪ್ರಭಾವಿ ಸಮುದಾಯವನ್ನು ದೂರ ಮಾಡಿಕೊಳ್ಳಲಾಗುತ್ತಿದೆ. ವಿಜಯಪುರದಲ್ಲಿ ಹೊಸದಾಗಿ ಹೇಳಿಕೆ ನೀಡಿರುವ ಯತ್ನಾಳ್, ಕಾಂಗ್ರೆಸ್‍ನಲ್ಲಿ ತಿಂದುಂಡ ಇಬ್ಬರು ಶಾಸಕರು ಬಿಜೆಪಿಯತ್ತ ವಲಸೆ ಬರುತ್ತಿದ್ದಾರೆ ಅವರಿಗೆ ಅವಕಾಶ ನೀಡಬಾರದು ಎಂದು ಎಚ್ಚರಿಸಿದ್ದಾರೆ.

ಈ ಮೊದಲು ಆ ಜಿಲ್ಲೆಯಲ್ಲಿ ಕಾಂಗ್ರೆಸ್‍ನ ಶಾಸಕ ಶಿವಾನಂದ ಪಾಟೀಲ್, ಬಹಿರಂಗ ಹೇಳಿಕೆ ನೀಡಿ ತಮ್ಮದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಬಿಜೆಪಿಯ ಯತ್ನಾಳ್ ಜೊತೆ ಸೇರಿ ಎಂ.ಬಿ.ಪಾಟೀಲ್ ತಮ್ಮನ್ನು ಮೂಲೆಗುಂಪು ಮಾಡಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದರು. ಈಗ ಅದೇ ಶಿವಾನಂದ ಪಾಟೀಲ್ ಹಾಗೂ ಜಿಲ್ಲೆಯ ಯಶವಂತರಾಯಗೌಡ ವಿಠ್ಠಲಗೌಡ ಬಿಜೆಪಿಯತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ. ಎಸ್.ಆರ್.ಪಾಟೀಲ್ ಕಾಂಗ್ರೆಸ್‍ನ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದು, ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆ.

ಯಡಿಯೂರಪ್ಪ ಅವರ ಪದಚ್ಯುತಿಗೆ ಪ್ರಮುಖ ಕಾರಣವಾದ ಬಸವನಗೌಡ ಪಾಟೀಲ್ ಯತ್ನಾಳ್ ವಿಜಯಪುರ ಜಿಲ್ಲೆಯ ರಾಜಕಾರಣದಲ್ಲಿ ಈವರೆಗೂ ಪ್ರಭಾವಿಯಾಗಿದ್ದಾರೆ. ಕಾಂಗ್ರೆಸ್‍ನ ಘಟಾನುಘಟಿ ನಾಯಕರು ಬಿಜೆಪಿಯತ್ತ ಮುಖ ಮಾಡಿರುವುದು, ಬಿಜೆಪಿಯ ಕೆಲ ನಾಯಕರು ಅವರಿಗೆ ಮಣೆ ಹಾಕುತ್ತಿರುವುದು ಯತ್ನಾಳ್‍ಗೆ ನುಂಗಲಾರದ ತುತ್ತಾಗಿದೆ. ಅದಕ್ಕಾಗಿ ಮತ್ತೆ ತಮ್ಮದೆ ಪಕ್ಷದ ವಿರುದ್ಧ ಹಲ್ಲು ಮಸೆಯಲಾರಂಭಿಸಿದ್ದಾರೆ.

ಕಾಂಗ್ರೆಸ್ ತನ್ನ ಪ್ರಮುಖ ನಾಯಕರನ್ನು ಉಳಿಸಿಕೊಳ್ಳಲು ಯಾವ ಪ್ರಯತ್ನವನ್ನು ಮಾಡುತ್ತಿಲ್ಲ. ಬದಲಾಗಿ ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‍ನಿಂದ ಕಾಂಗ್ರೆಸ್‍ನತ್ತ ವಲಸೆ ಬರುವ ನಾಯಕರ ಸ್ವಾಗತಕ್ಕೆ ತಯಾರಿ ನಡೆಸಿದೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಸಮುದಾಯದ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯಿತ ಸಮುದಾಯದ ರಾಜಕೀಯ ನಿಲುವುಗಳು ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರಲಿವೆ.
ಆ ಸಮುದಾಯವನ್ನೇ ನಿರ್ಲಕ್ಷ್ಯಿಸಿರುವ ಕಾಂಗ್ರೆಸ್ ವಿರುದ್ಧ ಕಾರ್ಯಕರ್ತರಲ್ಲೇ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿವೆ.