ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಬೆಳಗಾವಿಯಲ್ಲಿ ಸಭೆ

Social Share

ಹುಬ್ಬಳ್ಳಿ, ಡಿ.18- ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿಂದು ರಾಜ್ಯ ಚುನಾವಣಾ ಸಮಿತಿಯ ಮೊದಲ ಸಭೆ ನಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿಗಳನ್ನು ಇಂದಿನ ಸಭೆಯಲ್ಲಿ ರಚಿಸಲಾಗುವುದು.ಈಗಾಗಲೇ ರಚನೆಯಾಗಿರುವ ಚುನಾವಣಾ ಸಮಿತಿ ಮೊದಲ ಬಾರಿಗೆ ಸಭೆ ನಡೆಸುತ್ತಿದೆ. ಅಲ್ಲಿ ಎಲ್ಲ ಸದಸ್ಯರೂ ಭಾಗವಹಿಸಲಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ಸಿಂಗ್ ಸುರ್ಜೆವಾಲ ಅಧ್ಯಕ್ಷತೆ ವಹಿಸುವರು.

ಆಕಾಂಕ್ಷಿಗಳು ಸಲ್ಲಿಸಿರುವ 1300ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುವುದು ಎಂದರು.ಅರ್ಜಿಗಳನ್ನು ಆಯಾ ಕ್ಷೇತ್ರಗಳಿಗೆ ರವಾನಿಸಲಾಗುವುದು. ಅಲ್ಲಿ ಜಿಲ್ಲೆ, ಬ್ಲಾಕ್, ಮಹಿಳಾ ಮತ್ತು ಇತರ ಘಟಕಗಳು ಪರಿಶೀಲನೆ ನಡೆಸಲಿವೆ. ಅವರು ಯಾವೆಲ್ಲ ಅಂಶಗಳನ್ನು ವಿಶ್ಲೇಷಿಸಬೇಕು ಎಂಬ ಬಗ್ಗೆಯೂ ಪಕ್ಷ ಸೂಚನೆ ನೀಡಲಿದೆ.

ಕಾಂಗ್ರೆಸ್ಗೆ 78 ಲಕ್ಷ ಮಂದಿ ನೊಂದಾಯಿತ ಸದಸ್ಯರಿದ್ದಾರೆ. ಅವರ ಅಭಿಪ್ರಾಯ ಕೇಳಲು ಎಐಸಿಸಿ ಚಿಂತನೆ ನಡೆಸಿದೆ. ಇದಕ್ಕಾಗಿ ಒಂದು ಸಮಿತಿಯನ್ನು ನೇರವಾಗಿ ರವಾನೆ ಮಾಡುವ ಸಾಧ್ಯತೆಗಳಿವೆ ಎಂದರು.
ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಅವಕಾಶ ನೀಡುವುದು ಪಕ್ಷದ ಉದ್ದೇಶ. ಕಷ್ಟಕಾಲದಲ್ಲಿ ಗೆದ್ದು ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.

ಅವರಿಗೆ ಅವಕಾಶ ನೀಡುವುದು ಧರ್ಮ ಎಂದು ಹೇಳುವ ಮೂಲಕ ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಎಂಬುದನ್ನು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಹೇಳಿದರು.ಬಸ್ ಯಾತ್ರೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಡ್ಡಿಪಡಿಸಿದ್ದಾರೆ ಎಂಬುದು ಸರಿಯಲ್ಲ. ಪಕ್ಷದ ಅಧ್ಯಕ್ಷನಾಗಿ ನಾನೊಬ್ಬನೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಸಿದ್ದರಾಮಯ್ಯ, ಪಕ್ಷದ ಕಾರ್ಯಾಧ್ಯಕ್ಷರು, ಮುಖಂಡರು ಸೇರಿದಂತೆ ಎಲ್ಲರೊಂದಿಗೆ ಚರ್ಚಿಸುತ್ತೇನೆ. ನಂತರವೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಯಾರ ವಿರೋಧವೂ ಇಲ್ಲ ಎಂದು ಹೇಳಿದರು.

ನಮ್ಮ ಹತ್ರ ಅಣುಬಾಂಬ್ ಇದೆ : ಭಾರತಕ್ಕೆ ಬೆದರಿಕೆ ಹಾಕಿದ ಪಾಕ್ ಸಚಿವೆ

ನಾಳೆ ಬೆಳಗ್ಗೆ ಪೂರ್ವಭಾವಿ ಸಭೆ ನಡೆಯಲಿದೆ. ಸಂಜೆ ವೇಳೆಗೆ ಬಸ್ ಯಾತ್ರೆಯ ದಿನಾಂಕ ಮತ್ತು ಮಾರ್ಗಗಳನ್ನು ಘೋಷಿಸಲಾಗುವುದು. ಅದರಂತೆ ನಾನು ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಹಿರಿಯ ನಾಯಕರ ತಂಡ 20 ಜಿಲ್ಲೆಗಳಲ್ಲಿ ಪ್ರವಾಸ ನಡೆಸಲಿದೆ ಎಂದು ಹೇಳಿದರು.

ಕುಕ್ಕರ್ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಶಾರೀಕ್ ಸಿಕ್ಕಿಬಿದ್ದ ವೇಳೆ ಗಾಯಗೊಂಡು ಆಸ್ಪತ್ರೆಯಲ್ಲಿದ್ದ ಆತನಿಗೆ ಪ್ರಜ್ಞೆ ಬರಲು ಐದಾರು ದಿನ ಬೇಕು. ನಾವಿನ್ನೂ ಯಾವುದೇ ಹೇಳಿಕೆ ಪಡೆದಿಲ್ಲ, ಮಾಹಿತಿ ಸಿಕ್ಕಿಲ್ಲ ಎಂದು ಅಲ್ಲಿನ ಪೊಲೀಸ್ ಆಯುಕ್ತರು ಹೇಳಿಕೆ ನೀಡಿದ್ದಾರೆ.

ಆದರೆ, ಮಾರನೆ ದಿನವೇ ಪೊಲೀಸ್ ಮಹಾನಿರ್ದೇಶಕರು ಘಟನೆಯಲ್ಲಿ ಭಯೋತ್ಪಾದನಾ ಜಾಡುಗಳಿವೆ ಎಂದು ಮಾಹಿತಿ ನೀಡಿದರು. ಗೃಹ ಸಚಿವರ ಹೇಳಿಕೆಗಳು ಬೇರೆ ರೀತಿಯಲ್ಲಿದ್ದವು. ನಾವು ಯಾರನ್ನು ನಂಬಬೇಕು ಎಂದು ಪ್ರಶ್ನಿಸಿದರು.

ಡಿ.ಕೆ.ಶಿವಕುಮಾರ್ ಅವರು ಆರೋಪಿಯನ್ನು ಅಮಾಯಕ ಎಂದು ಬಿಂಬಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ದೂಷಣೆ ಮಾಡಿದ್ದಾರೆ. ಈ ಬಗ್ಗೆ ಚರ್ಚೆಗೆ ಒಂದು ವೇದಿಕೆಯೇ ಸಿದ್ಧಗೊಳ್ಳಲಿ, ನಾನು ತಯಾರಿದ್ದೇನೆ. ಮತದಾರರ ಪಟ್ಟಿ ಅಕ್ರಮಗಳು, ಭ್ರಷ್ಟಾಚಾರದ ಆರೋಪಗಳನ್ನು ಮರೆಮಾಚಲು ಕುಕ್ಕರ್ಬಾಂಬ್ ಪ್ರಕರಣವನ್ನು ಎಳೆದು ತರಲಾಯಿತು.

ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಅಡ್ಡಿಪಡಿಸಿಲ್ಲ. ಭಯೋತ್ಪಾದನೆ, ದೇಶದ ಸಮಗ್ರತೆ, ಐಕ್ಯತೆ ವಿಷಯಕ್ಕೆ ಕಾಂಗ್ರೆಸ್ ಪಕ್ಷ ಸದಾ ಬೆಂಬಲವಾಗಿರಲಿದೆ ಎಂದು ಹೇಳಿದರು.
ಮಹತ್ವದ ಸಭೆ: ವಿಧಾನಸಭೆ ಚುನಾವಣೆ ತಯಾರಿ ನಡೆಸಿರುವ ಕಾಂಗ್ರೆಸ್ ಇಂದು ಮೊದಲ ಸಮಿತಿ ಸಭೆ ನಡೆಸುವ ಮೂಲಕ ತಿಂಗಳಾಂತ್ಯಕ್ಕೆ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿದೆ.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಸ್ ಯಾತ್ರೆ ಆರಂಭಗೊಳ್ಳುವ ವೇಳೆಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದರಿಂದ ಚುನಾವಣಾ ಪ್ರಚಾರಕ್ಕೆ ಅನುಕೂಲವಾಗಲಿದೆ. ಭಿನ್ನಮತಗಳನ್ನು ನಿವಾರಿಸಿ ಪಕ್ಷ ವಿರೋಗಳನ್ನು ದೂರವಿಟ್ಟು ಒಟ್ಟಾಗಿ ಚುನಾವಣೆ ನಡೆಸಲು ಸಾಧ್ಯವಾಗಲಿದೆ. ಇದು ಪಕ್ಷದ ಗೆಲುವಿಗೆ ನೆರವಾಗಬಹುದು. ಹೀಗಾಗಿ ಅಭ್ಯರ್ಥಿಗಳ ಪಟ್ಟಿಗೆ ಶೀಘ್ರವೇ ಅನುಮತಿ ನೀಡಿ ಎಂದು ಹೈಕಮಾಂಡ್ಗೆ ಮನವಿ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಬೆಳಗಾವಿಯ ಸಭೆ ಮಹತ್ವ ಪಡೆದುಕೊಂಡಿದೆ.

#CongressMeeting #Belagavi #CandidatesList

Articles You Might Like

Share This Article