ಬೆಂಗಳೂರು,ಫೆ.28-ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿ ಕಾಂಗ್ರೆಸ್ ಕೈಗೊಂಡಿರುವ 2ನೇ ಹಂತದ ಪಾದಯಾತ್ರೆ 2ನೇ ದಿನಕ್ಕೆ ಕಾಲಿಟ್ಟಿದ್ದು, ಬಿಡದಿಯಿಂದ ಕೆಂಗೇರಿವರೆಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಾಲ್ನಡಿಗೆ ಮೂಲಕ ಸಾಗಿಬಂದರು.
ಉರಿ ಬಿಸಿಲಿನಲ್ಲಿ ಕಾಂಗ್ರೆಸ್ ಮುಖಂಡರು ಹೆಜ್ಜೆ ಹಾಕುತ್ತಾ ನಮ್ಮ ನೀರು, ನಮ್ಮ ಹಕ್ಕು ಮೇಕೆದಾಟು ಯೋಜನೆ ಆಗಲೇಬೇಕು ಎಂಬ ಘೋಷಣೆಗಳನ್ನು ಕೂಗಿದರು. ರಾಮನಗರದಲ್ಲಿ ಮಂಡ್ಯ ಜಿಲ್ಲಾ ಕಾಂಗ್ರೆಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಕಾಂಗ್ರೆಸ್‍ನ ಶಕ್ತಿಪ್ರದರ್ಶನ ಮಾಡಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಇಂದು ತುಮಕೂರು ಜಿಲ್ಲೆಯಾದ್ಯಂತ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಂಗೇರಿಯಿಂದ ಬಿಡದಿಯವರೆಗೆ ಪಾದಯಾತ್ರೆ ನಡೆಸಿ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕೆಂಗೇರಿಯಿಂದ ಅದ್ವೈತ ಪೆಟ್ರೋಲ್ ಬಂಕ್‍ವರೆಗೆ ಮುಖಂಡರು ಬಿಸಿಲಿನ ಝಳವನ್ನು ಮರೆತು ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಬಿಡದಿಯಲ್ಲಿ ಸಮಾವೇಶಗೊಂಡ ಕಾಂಗ್ರೆಸ್ ಮುಖಂಡರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಮಾಡುತ್ತಿವೆ. ಆದರೆ ಧೃತಿಗೆಡದೆ ನಮ್ಮ ಕಾರ್ಯಕರ್ತರು ಪಾದಯಾತ್ರೆ ಮೂಲಕ ಯೋಜನೆ ಜಾರಿಗೆ ಅಗ್ರಹಿಸುತ್ತಿದ್ದಾರೆ. ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಇದನ್ನ ನಾವು ದೆಹಲಿ ಮಟ್ಟಕ್ಕೂ ಕೊಂಡೊಯ್ಯುತ್ತೇವೆ.
ಮೇಕೆದಾಟು ಯೋಜನೆಯಿಂದ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ ಜಿಲ್ಲೆ ಸೇರಿದಂತೆ ಸುಮಾರು 4 ಕೋಟಿ ಜನರಿಗೆ ಕುಡಿಯುವ ನೀರು ಸರಬರಾಜು ಆಗುತ್ತದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತದೆ.
ಈ ಯೋಜನೆ ಜಾರಿಗೆ ಬೇರೆ ಯಾವ ರಾಜ್ಯಗಳಿಂದಲೂ ತಕರಾರು ಇಲ್ಲ. ಆದರೆ ಬಿಜೆಪಿಯೇ ತಕರಾರು ಮಾಡುತ್ತಿದೆ. ಅದಕ್ಕಾಗಿಯೇ ನಾವು ಹೋರಟಕ್ಕಿಳಿದಿದ್ದೇವೆ. ಪಕ್ಷಾತೀತವಾಗಿ ಎಲ್ಲರೂ ಇದಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಉರಿ ಬಿಸಿಲಿನಲ್ಲೂ ನಮ್ಮ ಕಾರ್ಯಕರ್ತರು ರಸ್ತೆಯಲ್ಲಿ ನಡೆಯುತ್ತಿದ್ದಾರೆ. ಈ ಯೋಜನೆಗಾಗಿ ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಿದ್ದಾರೆ. ಇದರ ನೇತೃತ್ವವನ್ನು ನಮ್ಮ ಪಕ್ಷ ವಹಿಸಿದೆ. ಇದು ನೀರಿಗಾಗಿ ನಡೆಸುತ್ತಿರುವ ಹೋರಾಟ. ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ನಮ್ಮ ಆಡಳಿತ ಅವಯಲ್ಲಿ ಈ ಯೋಜನೆಗೆ ಡಿಪಿಆರ್ ಮಾಡಲಾಗಿತ್ತು. 4 ವರ್ಷಗಳಾದರೂ ಈ ಯೋಜನೆ ಜಾರಿ ಬಗ್ಗೆ ಡಬಲ್ ಇಂಜಿನ್ ಸರ್ಕಾರ ಚಕಾರವೆತ್ತಿಲ್ಲ. ಈ ನಿರ್ಲಕ್ಷ್ಯ ಧೋರಣೆಯನ್ನು ನಾವು ಜನತೆಗೆ ತಿಳಿಸುವ ನಿಟ್ಟಿನಲ್ಲಿ ಹೋರಾಟ ಕೈಗೊಂಡಿದ್ದೇವೆ. ಇದಕ್ಕೆ ಅಭೂತಪೂರ್ವ ದೊರೆತಿದೆ ಎಂದರು.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ಮೊದಲ ಹಂತದ ಪಾದಯಾತ್ರೆ ಸಂದರ್ಭದಲ್ಲಿ ಹರಿದುಬಂದ ಜನಸಮೂಹದಿಂದ ಭಯಗೊಂಡ ಸರ್ಕಾರ ಕೊರೊನಾ ನೆಪವೊಡ್ಡಿ ಇದನ್ನು ನಿಯಂತ್ರಿಸಿತು. 2ನೇ ಹಂತದ ಪಾದಯಾತ್ರೆಯಲ್ಲಿ ಅದರ ಎರಡು ಪಟ್ಟು ಜನ ಆಗಮಿಸಿ ಕಾಂಗ್ರೆಸ್‍ನ ಶಕ್ತಿ ಪ್ರದರ್ಶಿಸಿದ್ದಾರೆ.
ಅಲ್ಲದೆ ಈ ಯೋಜನೆಯ ಅನಿವಾರ್ಯತೆ ಏನೆಂಬುದನ್ನು ಮನಗಂಡಿದ್ದಾರೆ. ದಿವ್ಯ ನಿರ್ಲಕ್ಷ್ಯ ವಹಿಸಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಜನತಾ ನ್ಯಾಯಾಲಯ ಬಿಸಿ ಮುಟ್ಟಿಸಬೇಕು ಎಂದು ಅವರು ಹೇಳಿದರು.
ದಾರಿಯುದ್ದಕ್ಕೂ ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಎಳನೀರು, ಕಲ್ಲಂಗಡಿ ಹಣ್ಣು, ಕಬ್ಬಿನ ಹಾಲು, ಮಜ್ಜಿಗೆ, ತಂಪು ಪಾನೀಯಗಳ ವ್ಯವಸ್ಥೆ ಮಾಡಲಾಗಿತ್ತು. ಕಾಂಗ್ರೆಸ್ ಪರ ಘೋಷಣೆಗಳನ್ನು ಮೊಳಗಿಸುತ್ತಾ, ಸರ್ಕಾರದ ವಿರುದ್ಧದ ಘೋಷಣೆಗಳನ್ನು ಕೂಗುತ್ತಾ ಕಾಂಗ್ರೆಸ್ ಧ್ವಜ ಹಿಡಿದು ಕಾರ್ಯಕರ್ತರು ಪಾದಯಾತ್ರೆಯಲ್ಲಿ ಸಾಗಿಬಂದರು.
