ಕಾಂಗ್ರೆಸ್‍ನಲ್ಲಿ ಹಬ್ಬದ ಸಡಗರ, ಪಾದಯಾತ್ರೆಯಲ್ಲಿ ಒಗ್ಗಟ್ಟಿನ ಪ್ರದರ್ಶನ

Social Share

-ಉಮೇಶ್ ಕೋಲಿಗೆರೆ
ಸಂಗಮ, ಜ.9- ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ರಣಕಹಳೆ ಮೊಳಗಿಸಿದ ಕಾಂಗ್ರೆಸ್ ನಾಯಕರು ಪಾದಯಾತ್ರೆಗೆ ಚಾಲನೆ ನೀಡಿದರು.ಸಂಗಮದಲ್ಲಿ ಕೈಗೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಪಾರ ಜನಸ್ತೋಮದ ನಡುವೆ ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಆರಂಭವಾದ ಪಾದಯಾತ್ರೆ ಕಾರ್ಯಕ್ರಮ ಕಾಂಗ್ರೆಸ್‍ನ ಒಗ್ಗಟ್ಟಿನ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಕಾಂಗ್ರೆಸ್‍ನ ಸಮಸ್ತ ನಾಯಕರು ಕಾವೇರಿ ಸಂಗಮದಲ್ಲಿ ಸಮಾವೇಶಗೊಂಡು ಮೇಕೆದಾಟು ಯೋಜನೆ ಶೀಘ್ರ ಜಾರಿಯಾಗಬೇಕು ಎಂದು ಒಕ್ಕೊರಲ ಒತ್ತಾಯವನ್ನು ಮಂಡಿಸಿದರು. ನಮ್ಮ ನೀರು ನಮ್ಮ ಹಕ್ಕು ಪಾದಯಾತ್ರೆಯಲ್ಲಿ ಹಬ್ಬದ ಮಾದರಿಯ ಸಂಭ್ರಮದ ವಾತವರಣ ಕಂಡು ಬಂತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಎಲ್ಲವನ್ನು ಖುದ್ದಾಗಿ ಪರಿಶೀಲಿಸಿ ಸಲಹೆ-ಸೂಚನೆ, ನಿರ್ದೇಶನ ನೀಡಿ ಕಾರ್ಯಕ್ರಮ ನಿರೂಪಿಸಿದರು.
ಮೇಕೆದಾಟು ಸಮೀಪ ಸಂಗಮದಲ್ಲಿ ವಿಶೇಷವಾದ ವೇದಿಕೆ ನಿರ್ಮಿಸಲಾಗಿತ್ತು. ನೀರಿನ ನಡುವೆ ಹಾಕಲಾಗಿದ್ದ ವೇದಿಕೆಯಲ್ಲಿ ಪಾದಯಾತ್ರೆ ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಆಯ್ದ ಗಣ್ಯರು ಮತ್ತು ಶಾಸಕರಿಗೆ ಅವಕಾಶ ನೀಡಲಾಗಿತ್ತು. ಮುಂಜಾನೆ 5.30ಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಅವರು ವೇದಿಕೆ ಸ್ಥಳಕ್ಕೆ ಆಗಮಿಸಿ ಕೊನೆ ಕ್ಷಣದ ಸಿದ್ಧತೆಗಳನ್ನು ಪರಿಶೀಲಿಸಿದರು.
ವೇದಿಕೆ ಸಮೀಪ ಪೂಜೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಅವರು ಸಂಗಮದಲ್ಲಿ ಒಂದಷ್ಟು ದೂರ ತೆಪ್ಪದಲ್ಲಿ ಪ್ರಯಾಣ ಮಾಡಿ ತಾವೇ ಉಟ್ಟು ಹಾಕಿ ಗಮನ ಸೆಳೆದರು.ಸಾಂಸ್ಕøತಿಕ ತಂಡಗಳಾದ ವೀರಗಾಸೆ, ನಂದಿಕೋಲು, ಪಟದ ಕುಣಿತ, ಡೋಲು-ತಮಟೆ ವಾದ್ಯಗಳು ಹೋರಾಟಕ್ಕೆ ರಂಗು ತಂದಿದ್ದವು. ಮಾಜಿ ಸಚಿವೆ ಉಮಾಶ್ರೀ, ಮುಖ್ಯಮಂತ್ರಿ ಚಂದ್ರು, ಹಿರಿಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ಸಾಂಸ್ಕøತಿಕ ಚಟುವಟಿಕೆಗಳನ್ನು ನಿರ್ದೇಶಿಸಿದರು.
ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಕಾವೇರಿ ನೀರನ್ನು ತಂದು ಸಂಗಮದಲ್ಲಿ ಅರ್ಕಾವತಿ ಮತ್ತು ವೃಷಭಾವತಿ ನಾಲೆಗೆ ಸುರಿಯುವ ಮೂಲಕ ನೀರಿಗಾಗಿ ನಡಿಗೆಗೆ ನಾಂದಿ ಹಾಡಿದರು.
# ಕಾರ್ಪೊರೇಟ್ ಟಚ್:
ಮೊದಲ ದಿನದ ಪಾದಯಾತ್ರೆ ಸಂಗಮದಿಂದ ಆರಂಭವಾಗಿ ಡಿ.ಕೆ.ಶಿವಕುಮಾರ್ ಅವರ ಹುಟ್ಟುರು ದೊಡ್ಡ ಆಲನಹಳ್ಳಿವರೆಗೂ ನಡೆಯಿತು.ಮಧ್ಯದಲ್ಲಿ ಹೆಗ್ಗನೂರಿನಲ್ಲಿ ಭೋಜನ ವಿರಾಮಕ್ಕೆ ಬ್ರೇಕ್ ನೀಡಲಾಗಿತ್ತು. ಬೆಳಿಗ್ಗೆ ಆರು, ಮಧ್ಯಾಹ್ನದಿಂದ ಸಂಜೆವರೆಗೂ ಎಂಟು ಸೇರಿ ಮೊದಲ ದಿನ ಒಟ್ಟು 14 ಕಿಲೋ ಮೀಟರ್ ಪಾದಯಾತ್ರೆ ನಡೆಯಿತು.
ಪಾದಯಾತ್ರೆ ಯುದ್ಧಕ್ಕೂ ಅತ್ಯಂತ ವ್ಯವಸ್ಥಿತವಾಗಿ ಆಯೋಜನೆ ಮಾಡಲಾಗಿತ್ತು.
ದಾರಿಯುದ್ಧಕ್ಕೂ ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಲಾಗಿತ್ತು. ಪಾದಯಾತ್ರೆ ಹಾದಿಯಲ್ಲಿ ನಮ್ಮ ನೀರು ನಮ್ಮ ಹಕ್ಕು ಎಂಬ ಘೋಷವಾಕ್ಯಗಳನ್ನು ಬರೆಸಲಾಗಿತ್ತು. ಕಾಂಗ್ರೆಸ್ ಬಾವುಟ ಬಳಸದೆ ರಾಷ್ಟ್ರಧ್ವಜ, ಕನ್ಮಡ ಧ್ವಜ, ಜೆಡಿಎಸ್ ಧ್ವಜ ಹೋಲುವ ಹಸಿರು ಧ್ವಜ, ನೀಲಿಧ್ವಜಗಳನ್ನು ಆರೋಹಣ ಮಾಡಲಾಗಿತ್ತು.
ಸುಮಾರು ನೂರಕ್ಕೂ ಹೆಚ್ಚು ವೈದ್ಯರು, ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ವಾಕಿ ಟಾಕಿಯೊಂದಿಗೆ ಸಜ್ಜಾಗಿದ್ದರು. ಹಿರಿಯ ನಾಯಕರಿಗಾಗಿ 13ಕ್ಕೂ ಹೆಚ್ಚು ಹವಾನಿಯಂತ್ರಿತ ಕ್ಯಾರವಾನ್‍ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ದಣಿದವರಿಗೆ ಅಲ್ಲಲ್ಲಿ ಹಣ್ಣು, ಎಳನೀರು, ಹಣ್ಣಿನ ರಸ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿತ್ತು. ಅತ್ಯಂತ ವ್ಯವಸ್ಥಿತವಾಗಿ ಪಾದಯಾತ್ರೆ ಆಯೋಜನೆಗೊಂಡಿತ್ತು. ಸಾಂಪ್ರದಾಯಿಕ ಹೋರಾಟದ ಶೈಲಿ ಹೊರತಾಗಿ ಭಿನ್ನ ಶೈಲಿ ಪಾಲಿಸಲಾಗಿತ್ತು. ಸಾಂಸ್ಕøತಿಕ ತಂಡ ಸಿದ್ಧಪಡಿಸಿದ ಮೇಕೆದಾಟು ಕಾವೇರಿ ಗೀತೆ ಹೋರಾಟದ ಹುರುಪನ್ನು ಹೆಚ್ಚಿಸಿತ್ತು. ಉದ್ಘಾಟನೆಯ ವೇಳೆ ಸಾಧುಕೋಕಿಲ ತಂಡ ಪ್ರಸ್ತುತ ಪಡಿಸಿದ ಹಾಡಿಗೆ ಕಾರ್ಯಕರ್ತರು ಕುಣಿದು ಕುಪ್ಪಳಿಸಿದರು.
ಕಾಂಗ್ರೆಸ್‍ನಲ್ಲಿ ಹಿಂದೆಂದೂ ಇಲ್ಲದಂತಹ ಒಗ್ಗಟ್ಟು ಕಂಡು ಬಂತು. ಕಾಂಗ್ರೆಸ್ ನಾಯಕರ ಫ್ಲೆಕ್ಸ್ ಗಳು ಹೆಜ್ಜೆ ಹೆಜ್ಜೆಗೂ ಕಾಣಸಿಗುತ್ತಿದ್ದವು. ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ ಭಾಗದವರನ್ನು ಒಳಗೊಂಡಂತೆ ರಾಜ್ಯ ಕಾಂಗ್ರೆಸ್‍ನ ಮೊದಲ ಮತ್ತು ಎರಡನೆ ಸಾಲಿನ ಎಲ್ಲ ನಾಯಕರ ಭಾವಚಿತ್ರಗಳ ಫ್ಲೆಕ್ಸ್ ïಗಳು ದಾರಿಯುದ್ಧಕ್ಕೂ ರಾರಾಜಿಸುತ್ತಿದ್ದವು.
ಸಂಗಮದಲ್ಲಿ ಎರಡು ಅಂಡೆಗಳಲ್ಲಿ ಸಂಗ್ರಹಿಸಿದ ಕಾವೇರಿ ನೀರಿನ ಪೈಕಿ ಒಂದನ್ನು ಬೆಂಗಳೂರಿಗೆ, ಮತ್ತೊಂದನ್ನು ರೈತರಿಗಾಗಿ ಪಾದಯಾತ್ರೆ ಜೊತೆಯಲ್ಲಿ ತರಲಾಯಿತು.
# ಕರಗಿದ ಕಾರ್ಮೋಡ:
ಪಾದಯಾತ್ರೆಗೆ ಅನುಮತಿ ಇಲ್ಲ, ವೀಕೆಂಡ್ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಪೊಲೀಸರು ಮುಖಂಡರು, ಕಾರ್ಯಕರ್ತರನ್ನು ಬಂಧಿಸಲಿದ್ದಾರೆ ಎಂಬ ವದಂತಿಗಳು ವ್ಯಾಪಕವಾಗಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೂಡ ಸಾಕಷ್ಟು ತಂತ್ರಗಾರಿಕೆ ರೂಪಿಸಿತ್ತು.
ನಿನ್ನೆ ನಡೆದ ಹಿರಿಯ ನಾಯಕರ ಸಭೆಯ ವೇಳೆಯಲ್ಲಿ ಎರಡುವರೆ ಸಾವಿರ ಮಂದಿ ಜಮಾವಣೆಗೊಂಡಿದ್ದರು. ಹಳ್ಳಿಗಳಲ್ಲೂ ಬಲಾಬಲ ಪ್ರದರ್ಶನಕ್ಕೆ ತಯಾರಿ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತದಿಂದ ಯಾವುದೇ ಅಡ್ಡಿ ಇಲ್ಲದೆ ಎಲ್ಲವೂ ನಡೆದು ಸೂಸುತ್ರವಾಗಿ ಪಾದಯಾತ್ರೆ ಶುರುವಾಯಿತು.

Articles You Might Like

Share This Article