ಬೆಂಗಳೂರು,ಜೂ.23- ವಸತಿ ಯೋಜನೆಗಳ ಮನೆಗಾಗಿ ಲಂಚದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ನೀಡಬೇಕೆಂದು ಆಡಳಿತ ಪಕ್ಷದ ಶಾಸಕರೇ ಒತ್ತಾಯಿಸಲಾರಂಭಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ, ವಸತಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಗಂಭೀರ ಸ್ವರೂಪದ ಆರೋಪಗಳು ಕೇಳಿಬಂದಿವೆ. ಹೀಗಾಗಿ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಒಳ್ಳೆಯದು ಎಂದಿದ್ದಾರೆ.
ಈ ರೀತಿ ಆರೋಪಗಳು ಕೇಳಿಬಂದಾಗ ಹಲವಾರು ಮಂದಿ ರಾಜೀನಾಮೆ ನೀಡಿ ತನಿಖೆ ಎದುರಿಸಿದ ಉದಾಹರಣೆಗಳಿವೆ. ಅದೇ ರೀತಿ ಜಮೀರ್ ಅಹಮದ್ ಖಾನ್ ಕೂಡ ರಾಜೀನಾಮೆ ನೀಡಲಿ, ತನಿಖೆ ಎದುರಿಸಲಿ.
ನಿರ್ದೋಷಿ ಎಂದು ಸಾಬೀತಾದ ಬಳಿಕ ಬೇಕೆಂದರೆ ಸಂಪುಟಕ್ಕೆ ಸೇರ್ಪಡೆಯಾಗಲಿ ಎಂದಿದ್ದಾರೆ.
ಈ ಮೂಲಕ ವಸತಿ ಇಲಾಖೆಯ ಲಂಚ ಹಗರಣ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಶಾಸಕರೇ ಒತ್ತಾಯಿಸಲಾರಂಭಿಸಿದ್ದಾರೆ. ಸಚಿವ ಜಮೀರ್ ಅಹಮದ್ ಖಾನ್ ರಾಜೀನಾಮೆ ಒತ್ತಡ ಹೆಚ್ಚಾಗುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ.
ಗಂಭೀರ ಆರೋಪ ಮಾಡಿರುವುದ ತಮ ಆಪ್ತ ಬಳಗದ ಶಾಸಕ ಬಿ.ಆರ್.ಪಾಟೀಲ್. ಆರೋಪಕ್ಕೆ ಗುರಿಯಾಗಿರುವುದು ತಮದೇ ಆಪ್ತ ಸಚಿವ ಜಮೀರ್ ಅಹಮದ್ ಖಾನ್. ಈ ಇಬ್ಬರ ನಡುವೆ ಯಾವುದೇ ಹೇಳಿಕೆ ನೀಡದೇ ಸಿದ್ದರಾಮಯ್ಯ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯದ ಪ್ರತಿಯೊಂದು ಬೆಳವಣಿಗೆಗೂ ಹೇಳಿಕೆ ನೀಡುವ ಮೂಲಕ ಪ್ರತಿಕ್ರಿಯಿಸುತ್ತಿದ್ದ ಸಿದ್ದರಾಮಯ್ಯ, ತಮದೇ ಆದ ಸರ್ಕಾರದಲ್ಲಿ ಕೇಳಿ ಬಂದಿರುವ ವಸತಿ ಇಲಾಖೆಯ ಹಗರಣಕ್ಕೆ ಪ್ರತಿಕ್ರಿಯಿಸಿದೇ ತಟಸ್ಥರಾಗಿರುವುದು ಮೌನಂ ಸಮತಿ ಲಕ್ಷಣಂ ಎಂಬಂತಾಗಿದೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿನ್ನೆ ಬಿ.ಆರ್.ಪಾಟೀಲರ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದ್ದರು. ಇಂದು ತಮ ಹೇಳಿಕೆಯಿಂದ ಯೂಟರ್ನ್ ಪಡೆದಿದ್ದು ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ವಸತಿ ಸಚಿವ ಜಮೀರ್ ಅಹಮದ್ ಖಾನ್ ಉತ್ತರಿಸಬೇಕು ಎಂದು ಜಾರಿಕೊಂಡಿದ್ದಾರೆ.ಅಲ್ಲಿಗೆ ವಸತಿ ಲಂಚ ಹಗರಣ ರಾಜ್ಯಸರ್ಕಾರವನ್ನು ತೀವ್ರ ಮುಜುಗರಕ್ಕೀಡು ಮಾಡಿದೆ ಎಂಬುದು ಸ್ಪಷ್ಟವಾಗಿದೆ.
ಈ ಹಂತದಲ್ಲಿ ಯಾವುದೇ ಹೇಳಿಕೆ ನೀಡಿದರೂ ಅದು ಬೇರೆಯದೇ ಸ್ವರೂಪ ಪಡೆದುಕೊಳ್ಳುವುದರಿಂದಾಗಿ ಮುಖ್ಯಮಂತ್ರಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ. ಈ ನಡುವೆ ಪಕ್ಷದ ಶಾಸಕರುಗಳೇ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ತಿರುಗಿಬಿದ್ದಿದ್ದಾರೆ. ವಸತಿ ಇಲಾಖೆಯ ಲಂಚ ಹಗರಣ ತನಿಖೆಯಾಗಬೇಕೆಂಬ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.
- ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2025)
- ಬೆಂಗಳೂರಲ್ಲಿ ಇಂದು ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು
- ಶಾಲೆಗಳಿಗೆ ಬಾಂಬ್ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ : ಗೃಹಸಚಿವ ಪರಮೇಶ್ವರ
- ನೈರುತ್ಯ ಮುಂಗಾರು ಚೇತರಿಕೆ, ರಾಜ್ಯದ ಹಲವೆಡೆ ಮಳೆ
- 20 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ, ಬೆಚ್ಚಿ ಬಿದ್ದ ದೆಹಲಿ