ಸಿದ್ಧಾಂತ ಮರೆತವರಿಗೆ ಬಿಸಿ ಮುಟ್ಟಿಸಲು ವ್ಯೂಹ ರಚಿಸಿದ ಕಾಂಗ್ರೆಸ್

Social Share

ಬೆಂಗಳೂರು,ಡಿ.7- ರಾಜ್ಯ ಕಾಂಗ್ರೆಸ್‍ನಲ್ಲಿ ನಾಯಕತ್ವದ ಗೊಂದಲ ಸೃಷ್ಟಿಸಿ, ವ್ಯಕ್ತಿಪೂಜೆ ಮಾಡಿದ ನಾಯಕರಿಗೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಟಿಕೆಟ್ ಘೋಷಣೆ ವೇಳೆ ಕೈ ಕೊಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.

ರಾಜ್ಯದಲ್ಲಿ ಬಹಳಷ್ಟು ಮಂದಿ 2ನೇ ಹಂತದ ಮುಖಂಡರು ಪಕ್ಷ ಅಧಿಕಾರಕ್ಕೆ ಬಂದ ವೇಳೆ ಮುಖ್ಯಮಂತ್ರಿಯಾಗುವ ಸಮರ್ಥರ ಬಗ್ಗೆ ಪದೇ ಪದೇ ಹೇಳಿಕೆ ನೀಡಿ ಗೊಂದಲ ಮೂಡಿಸಿದ್ದಾರೆ.

ಹಲವು ಬಾರಿ ಎಚ್ಚರಿಕೆ ನೀಡಿದಾಗ್ಯೂ ಸೊಪ್ಪು ಹಾಕದೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂದು ಬಹಿರಂಗ ಹೇಳಿಕೆ ನೀಡಿ ಕಾಂಗ್ರೆಸ್‍ನಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬಿಂಬಿಸಿದ್ದರು. ಇದು ರಾಜ್ಯ ನಾಯಕರಿಗಷ್ಟೇ ಅಲ್ಲ ಹೈಕಮಾಂಡ್‍ಗೂ ತೀವ್ರ ಮುಜುಗರ ಉಂಟು ಮಾಡಿತ್ತು.

BEST CEO ಅವಾರ್ಡ್ ಗೆ ಎನ್.ಜಯರಾಮ್ ಭಾಜನ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ಬಾರಿ ಎಚ್ಚರಿಕೆ ನೀಡಿದಾಗ್ಯೂ ಸ್ಥಳೀಯ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲ ಅವರೇ ಮಧ್ಯಪ್ರವೇಶ ಮಾಡಿ ಎಚ್ಚರಿಕೆ ನೀಡಬೇಕಾಯಿತು. ಆದಾಗ್ಯೂ ಕೆಲವರು ಈಗಲೂ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಹೇಳಿಕೆ ನೀಡುತ್ತಲೇ ಇದ್ದಾರೆ.

ಈವರೆಗೂ ವ್ಯಕ್ತಿಪೂಜೆಯಿಂದಾಗಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಇನ್ನು ಮುಂದೆ ಅದಕ್ಕೆ ಅವಕಾಶವಿಲ್ಲ. ಏನಿದ್ದರೂ ಪಕ್ಷದ ಸಿದ್ದಾಂತ ಮತ್ತು ಕಾರ್ಯಕ್ರಮಗಳನ್ನು ವೈಭವೀಕರಿಸಬೇಕು ಎಂದು ಹಲವು ಬಾರಿ ಹೈಕಮಾಂಡ್ ಸೂಚನೆ ನೀಡಿದೆ. ಆದಾಗ್ಯೂ ಪಕ್ಷದ ಶಿಸ್ತನ್ನು ಉಲ್ಲಂಘಿಸಿದವರಿಗೆ ಚುನಾವಣಾ ಸಮಯದಲ್ಲಿ ಬಿಸಿ ಮುಟ್ಟಿಸಲು ಚಕ್ರವ್ಯೂಹ ರಚಿಸಲಾಗಿದೆ.

ಜನವರಿಯಲ್ಲಿ ಸುಮಾರು 150ಕ್ಕೂ ಹೆಚ್ಚು ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ದಗೊಳ್ಳಲಿದೆ. ಇದರಲ್ಲಿ ವ್ಯಕ್ತಿಪೂಜೆ ಮಾಡಿದ ನಾಯಕರನ್ನು ಬದಿಗಿರಿಸುವ ಸಾಧ್ಯತೆಗಳಿವೆ. ಕೆಲವರು ಹಾಲಿ ಶಾಸಕರಿದ್ದು, ಅವರಿಗೆ ಟಿಕೆಟ್ ನಿರಾಕರಿಸುವುದು ಕಷ್ಟಸಾಧ್ಯ. ಆದರೂ ಮೊದಲ ಪಟ್ಟಿಯಲ್ಲಿ ಅವಕಾಶ ನೀಡದೆ ಕೊನೆಯ ಹಂತದಲ್ಲಿ ಬಿ ಫಾರಂ ನೀಡುವ ಚರ್ಚೆಗಳಾಗಿವೆ ಎಂದು ಹೇಳಲಾಗಿದೆ.

ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಮಗು ಕೊಂದ ತಾಯಿ

ಪಕ್ಷ ಸಿದ್ಧಾಂತ ಬಿಟ್ಟು ವ್ಯಕ್ತಿಪೂಜೆ ಮಾಡಿದ ನಾಯಕರನ್ನು ಕೊನೆ ಕ್ಷಣದವರೆಗೂ ಗೊಂದಲಿಟ್ಟು , ಮಾನಸಿಕ ಒತ್ತಡ ಸೃಷ್ಟಿಸುವ ಮೂಲಕ ಕನಿಷ್ಟ ಬಿಸಿ ಮುಟ್ಟಿಸುವ ಸಲಹೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ಗುಂಪುಗಾರಿಕೆಯನ್ನು ಮಟ್ಟ ಹಾಕಲು ವ್ಯೂಹ ರಚಿಸಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಕಟ್ಟಪ್ಪಣೆ:
ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಪ್ರಕ್ರಿಯೆಗಳು ಶುರುವಾಗಿವೆ. ಅರ್ಜಿ ಸ್ವೀಕರಿಸಿ, ಆಕಾಂಕ್ಷಿಗಳ ಜೊತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಕ್ಷೇತ್ರಗಳಿಗೆ ವೀಕ್ಷಕರನ್ನು ಕಳುಹಿಸಿ ವರದಿ ಪಡೆಯುವುದು ಮತ್ತು ಖಾಸಗಿ ಸಮೀಕ್ಷೆಗಳ ಮೂಲಕ ಗೆಲ್ಲುವ ಅಭ್ಯರ್ಥಿಗಳ ಹುಡುಕಾಟ ಬಿರುಸಿನಿಂದ ನಡೆಯುತ್ತಿದೆ.

ಈ ನಡುವೆ ಅರ್ಜಿ ಸಲ್ಲಿಸುವ ಆಕಾಂಕ್ಷಿಗಳು ಕ್ಷೇತ್ರಗಳಲ್ಲಿ ತಾವೇ ಮುಂದಿನ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದು, ಪತ್ರಿಕಾ ಹೇಳಿಕೆ ನೀಡುವುದು ಹಾಗೂ ಗುಂಪುಗಟ್ಟಿಕೊಂಡು ಪ್ರಚಾರ ಮಾಡಲು ಆರಂಭಿಸಿದ್ದಾರೆ.

ಮಹಾರಾಷ್ಟ್ರ – ಕರ್ನಾಟಕ ನಡುವೆ ಬಸ್ ಸೇವೆ ಬಂದ್

ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಿಗೆ ನಿನ್ನೆ ಪತ್ರವೊಂದನ್ನು ಬರೆದಿದ್ದಾರೆ. ಹೈಕಮಾಂಡ್ ಅನುಮತಿ ಇಲ್ಲದೆ ಯಾವುದೇ ಸಭೆ ನಡೆಸಬಾರದು, ಹೇಳಿಕೆ ನೀಡಬಾರದು, ಗುಂಪುಗೂಡಿ ಪ್ರಚಾರ ಮಾಡಬಾರದು ಎಂದು ಅದರಲ್ಲಿ ಕಟ್ಟಪ್ಪಣೆ ಮಾಡಿದ್ದಾರೆ.

Congress, new, strategy, Karnataka, assembly elections,

Articles You Might Like

Share This Article