ಬೆಂಗಳೂರು,ಫೆ.21- ವಿವಾದಿತ ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್‍ನ ಅಹೋರಾತ್ರಿ ಧರಣಿ ವಿಧಾನಪರಿಷತ್‍ನಲ್ಲಿ ಐದನೆ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಕೂಡ ಮುಂದುವರೆದಿದೆ.
ಬುಧವಾರ ವಿಷಯ ಪ್ರಸ್ತಾಪಿಸಿ ಗುರುವಾರದಿಂದ ಅಹೋರಾತ್ರಿ ಧರಣಿ ಮಾಡುತ್ತಿರುವ ಕಾಂಗ್ರೆಸ್ ಉಭಯ ಸದನಗಳಲ್ಲೂ ತನ್ನ ಹೋರಾಟವನ್ನು ಮುಂದುವರೆಸಿದೆ. ಈ ನಡುವೆ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ಈಶ್ವರಪ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಭಿತ್ತಿ ಪತ್ರಗಳನ್ನು ಹಿಡಿದು ಧರಣಿ ಪ್ರತಿಭಟನೆ ನಡೆಸಿದ್ದಾರೆ.
ವಿಧಾನಮಂಡಲದಲ್ಲೂ ಧರಣಿ ನಡೆದಿದ್ದು, ವಿಧಾನಪರಿಷತ್‍ನಲ್ಲಿ ಕಲಾಪ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್ ಧರಣಿ ಆರಂಭಿಸಿತು. ಸಂತಾಪ ಸೂಚನೆ ನಿರ್ಣಯಕ್ಕಾಗಿ ಕೆಲ ಕಾಲ ತಾತ್ಕಾಲಿಕವಾಗಿ ಧರಣಿ ಹಿಂಪಡೆದ ಕಾಂಗ್ರೆಸಿಗರು ಮತ್ತೆ ಮುಂದುವರೆಸಿದರು. ಸಚಿವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಆಡಳಿತ ಪಕ್ಷದ ಪರವಾಗಿ ಸಭಾನಾಯಕ ಕೋಟ ಶ್ರೀನಿವಾಸಪೂಜಾರಿ ಅವರು, ಈಶ್ವರಪ್ಪ ಅವರದು ಮುಗಿದು ಹೋದ ಅಧ್ಯಾಯ. ಪ್ರತಿ ಪಕ್ಷ ಕಾಂಗ್ರೆಸ್ ನಿಲುವಳಿ ಸೂಚನೆಯನ್ನು ಮಂಡಿಸಿತ್ತು. ಸರ್ಕಾರದ ಮನವಿಯ ಮೇರೆಗೆ ಸಭಾಪತಿಯವರು ಅದನ್ನು ತಿರಸ್ಕರಿಸಿ ಆಗಿದೆ. ಮತ್ತೆ ಮತ್ತೆ ಅದನ್ನೇ ಕೆಣಕುವುದು ಒಳ್ಳೆಯದಲ್ಲ.
ಪ್ರತಿಭಟನೆ ಹಿಂಪಡೆದು ಸದನದ ಸುಗಮ ಕಲಾಪಕ್ಕೆ ಸಹಕಾರ ನೀಡಿ ಎಂದು ಮನವಿ ಮಾಡಿದರು.ಈಶ್ವರಪ್ಪ ಅವರ ವಿವಾದಿತ ಹೇಳಿಕೆ ಮುಗಿದು ಹೋದ ಅಧ್ಯಾಯ ಅಲ್ಲ. ಸರ್ಕಾರ ಅವರನ್ನು ಸಂಪುಟದಿಂದ ವಜಾಗೊಳಿಸಿ ಕ್ರಮ ಕೈಗೊಂಡರೆ ನಾವು ಪ್ರತಿಭಟನೆಯನ್ನು ಹಿಂಪಡೆಯುತ್ತೇವೆ ಎಂದು ಕಾಂಗ್ರೆಸ ಪಟ್ಟು ಹಿಡಿಯಿತು. ಈ ನಡುವೆ ಕಲಾಪ ಅಸ್ತವ್ಯಸ್ತಗೊಂಡಿತು.
