ಜನರ ಸಮಸ್ಯೆ ಬಿಟ್ಟು, ಅನಾವಶ್ಯಕ ವಿಚಾರವನ್ನಿಟ್ಟುಕೊಂಡು ವಿಲನ್ ಆದ ಕಾಂಗ್ರೆಸ್

Social Share

ಬೆಂಗಳೂರು,ಫೆ.19- ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿರುವ ಕಾಂಗ್ರೆಸ್ ನಾಯಕರು ತಮ್ಮ ಉದ್ದೇಶಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಲ್ಲಿ ವಿಫಲರಾಗಿ ಪ್ರತಿಭಟನೆಯಿಂದಲೇ ಖಳನಾಯಕರಾಗಿ ಬಿಂಬಿತರಾಗುತ್ತಿದ್ದಾರೆ.ಈ ಹಿಂದೆ ಮೇಕೆದಾಟು ಯೋಜನೆಯ ಶೀಘ್ರ ಅನುಷ್ಠಾನಕ್ಕಾಗಿ ಬೃಹತ್ ಪಾದಯಾತ್ರೆಯನ್ನು ಆಯೋಜಿಸಲಾಗಿತ್ತು. ಕಾಂಗ್ರೆಸಿಗರು ಹೋರಾಟ ಆರಂಭಿಸುವುದಕ್ಕೂ ಮುನ್ನವೇ ಬಿಜೆಪಿ ಪ್ರತಿತಂತ್ರ ರೂಪಿಸಿ ಅನಾಮಧೇಯ ಜಾಹಿರಾತು ನೀಡುವ ಮೂಲಕ ಕಾಂಗ್ರೆಸಿಗರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿತ್ತು.
ಮೇಕೆದಾಟು ಯೋಜನೆಯ ವಿಳಂಬಕ್ಕೆ ಕಾಂಗ್ರೆಸ್ ಸರ್ಕಾರಗಳೇ ಕಾರಣ ಎಂದು ಬಿಜೆಪಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಪಾದಯಾತ್ರೆ ಡಿ.ಕೆ.ಶಿವಕುಮಾರ್ ಅವರ ವೈಯಕ್ತಿಕ ವರ್ಚಸ್ಸಿಗಾಗಿ ಮಾತ್ರ ಎಂಬ ಕುಹುಕಗಳು ಕೇಳಿಬಂದವು. ಅದರ ಜೊತೆಗೆ ಹಲವು ಅಸಂಬದ್ದ ಅಪ್ರಸ್ತುತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೂಲಕ ಪ್ರತಿಭಟನೆಯ ಔಚಿತ್ಯವನ್ನು ಪ್ರಶ್ನಿಸಿದ್ದರು.
ಇದಕ್ಕೆ ತಕ್ಕ ಉತ್ತರ ನೀಡುವಲ್ಲಿ ಕಾಂಗ್ರೆಸ್ ನಾಯಕರು ಮತ್ತು ಜಾಲತಾಣ ಎಡವಿತ್ತು. ಸಚಿವ ಎಂ.ಬಿ.ಪಾಟೀಲ್ ಅವರು ವಿಶೇಷ ಪತ್ರಿಕಾಗೋಷ್ಠಿ ಕರೆದು ಸುದೀರ್ಘ ವಿವರಣೆ ನೀಡಿದರಾದರೂ ಪರಿಣಾಮ ಬೀರಲಿಲ್ಲ.ಅದೇ ಸಮಯಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗಿದ್ದರಿಂದ ಕಾಂಗ್ರೆಸ್ ಪ್ರತಿಭಟನೆ ನಿಲ್ಲಿಸಿದ್ದು ಪಕ್ಷಕ್ಕೆ ಅಡ್ಡಪರಿಣಾಮ ಉಂಟು ಮಾಡಿತ್ತು. ಈಗ 2ನೇ ಹಂತದಲ್ಲಿ ಫೆ.27ರಿಂದ ಮೇಕೆದಾಟು ಪಾದಯಾತ್ರೆ ಶುರುವಾಗಲಿದೆ.
ರಾಮನಗರದಲ್ಲಿ ಸ್ಥಗಿತಗೊಳಿಸಲಾಗಿದ್ದ ಹೋರಾಟವನ್ನು ಮತ್ತೆ ಅಲ್ಲಿಂದಲೇ ಮುಂದುವರೆಸುವ ನಿರ್ಧಾರವನ್ನು ಕಾಂಗ್ರೆಸ್ ಪ್ರಕಟಿಸಿದೆ.
ಜೊತೆಗೆ ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಪಟ್ಟು ಹಿಡಿದು ಹೋರಾಟ ನಡೆಸುತ್ತಿದೆ. ಒಬ್ಬ ಸಚಿವರ ವಿರುದ್ಧ ಹಗೆ ಸಾಧಿಸಲು ಮೂರು ದಿನಗಳ ಕಲಾಪ ಹಾಳು ಮಾಡುವ ಅಗತ್ಯವಿದೆಯೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸಚಿವ ಈಶ್ವರಪ್ಪ ಮತ್ತು ಸಿದ್ದರಾಮಯ್ಯನವರ ನಡುವೆ ಸೈದ್ದಾಂತಿಕ ಮತ್ತು ರಾಜಕೀಯ ಪ್ರತಿಸ್ಪರ್ಧೆಗಳಿವೆ. ಡಿ.ಕೆ.ಶಿವಕುಮಾರ್ ಅವರ ವಿಷಯವಾಗಿಯೂ ಈಶ್ವರಪ್ಪ ಸದನದಲ್ಲಿ ಉದ್ದಟತನದ ಹೇಳಿಕೆ ನೀಡಿದ್ದಾರೆ.ಈ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಶುರುವಾಗಿದೆ. ಈಶ್ವರಪ್ಪ ಅವರನ್ನು ಮಣಿಸಲೇ ಬೇಕು ಎಂಬ ಹಗೆತನ ಸಾಸುತ್ತಿರುವ ಕಾಂಗ್ರೆಸ್ ನಾಯಕರು ಜನಪರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಆದರೆ ಹೋರಾಟದ ಹಿಂದೆ ವೈಯಕ್ತಿಕ ಹಗೆತನಕ್ಕಿಂತಲೂ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸಾಂವಿಧಾನಿಕ ರಕ್ಷಣೆಯ ಉದ್ದೇಶವಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರು ವಿಫಲರಾಗಿದ್ದಾರೆ.ಈವರೆಗೂ ಈಶ್ವರಪ್ಪ ದೇಶ ದ್ರೋಹ ಎಂಬ ಘೋಷಣೆ ಕೂಗಿ ಸಂಘ ಪರಿವಾರವನ್ನು ಟೀಕಿಸಲಾಗುತ್ತಿದೆಯೇ ಹೊರತು ಕೆಂಪುಕೋಟೆಯ ಮೇಲೆ ಕೇಸರಿ ಧ್ವಜ ಹಾರಿಸುವುದರಿಂದ ಆಗುವ ಪರಿಣಾಮಗಳು ಏನು ಎಂಬ ಬಗ್ಗೆ ಜನರಿಗೆ ತಲುಪಿಸಲು ಕಾಂಗ್ರೆಸ್ ನಾಯಕರು ಸೂಕ್ತ ವಿವರಣೆ ನೀಡಿಲ್ಲ.ಹೀಗಾಗಿ ಹೋರಾಟದ ಉದ್ದೇಶ ಸಂಕುಚಿತ ಎಂಬ ಭಾವನೆಯಲ್ಲಿ ಜನರಲ್ಲಿ ಮೂಡಲಾರಂಭಿಸಿದೆ. ರಾಜಕೀಯವಾಗಿ ಲಾಭವಾಗಬೇಕಿದ್ದ ಹೋರಾಟಗಳು ಪಕ್ಷಕ್ಕೆ ಹಾನಿ ಉಂಟು ಮಾಡುತ್ತಿದೆ.
ಕಾಂಗ್ರೆಸಿಗರಲ್ಲಿ ಗೊಂದಲದ ಅಭಿಪ್ರಾಯಗಳಿವೆ. ಹಿಜಾಬ್ ಬೆಂಬಲಿಸಿದರೆ ಬಹುಸಂಖ್ಯಾತ ಹಿಂದುಗಳ ಮತಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕ ಒಂದುಕಡೆಯಾದರೆ, ಬೆಂಬಲಿಸದೇ ಇದ್ದರೆ ಅಲ್ಪಸಂಖ್ಯಾತರನ್ನು ದೂರ ಮಾಡಿಕೊಳ್ಳುವ ಗೊಂದಲವೂ ಕೈ ನಾಯಕರಲ್ಲಿದೆ.ಹೀಗಾಗಿ ಕಾಂಗ್ರೆಸ್ ಮುಖಂಡರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಕ್ಷದಲ್ಲಿರುವ ಅಲ್ಪಸಂಖ್ಯಾತ ಜನಪ್ರತಿನಿಗಳು ಹಿರಿಯ ನಾಯಕರ ಗೊಂದಲಗಳ ಬಗ್ಗೆ ತೀವ್ರ ಅಸಮಾಧಾನ ಹೊಂದಿದ್ದಾರೆ.
ಆದರೆ ಹಿಜಾಬ್ ವಿಷಯದಲ್ಲಿ ಸ್ಪಷ್ಟ ನಿಲುವು ಹೊಂದಿರುವ ಬಿಜೆಪಿ ಹಿಜಾಬ್‍ನ್ನು ರಾಜಕೀಯವಾಗಿ ಹೈಜಾಕ್ ಮಾಡಿಕೊಂಡಿದೆ. ಬಿಜೆಪಿ ಮತ್ತು ಸಂಘ ಪರಿವಾರವೇ ಹುಟ್ಟು ಹಾಕಿರುವ ವಿವಾದ ಸರ್ಕಾರದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದರೂ ಸಹ ಆರೋಪಗಳು ಬಿರುಬಾಣ ಕಾಂಗ್ರೆಸ್‍ನತ್ತ ಧಾವಿಸಿವೆ.  ಇದಕ್ಕೆ ಪರಿಣಾಮಕಾರಿಯಾಗಿ ಉತ್ತರಿಸಿ ತಿರುಗೇಟು ನೀಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಹೀಗಾಗಿ ಕಾಂಗ್ರೆಸ್ ನಡೆಸುತ್ತಿರುವ ಬಹುತೇಕ ಹೋರಾಟಗಳು ಯಶಸ್ವಿ ಎನ್ನುವುದಕ್ಕಿಂತಲೂ ಪಕ್ಷಕೆ ಮುಜುಗರ ಉಂಟು ಮಾಡುತ್ತಿವೆ.
 

Articles You Might Like

Share This Article