ಕಾಂಗ್ರೆಸ್ ಸದಸ್ಯರ ಅಹೋರಾತ್ರಿ ಧರಣಿ : ಸ್ಪೀಕರ್ ಕಾಗೇರಿ ಸಂಧಾನ ಮತ್ತೆ ವಿಫಲ

Social Share

ಬೆಂಗಳೂರು,ಫೆ.18- ಸಚಿವ ಈಶ್ವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಪಕ್ಷದ ಕಾಂಗ್ರೆಸ್ ಸದಸ್ಯರು ಸದನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಯನ್ನು ಕೈಬಿಡಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ನಡೆಸಿದ ಸಂಧಾನ ಮತ್ತೆ ವಿಫಲವಾಗಿದೆ.
ಇಂದು ಬೆಳಗ್ಗೆ ಸದನ ಆರಂಭವಾಗುವ ಮೊದಲು ಸಭಾಧ್ಯಕ್ಷರಾದ ಕಾಗೇರಿ ಅವರು ತಮ್ಮ ಕಚೇರಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದರು.
ತಮ್ಮ ಧರಣಿಯನ್ನು ಕೈಬಿಟ್ಟು ಚರ್ಚೆಯಲ್ಲಿ ಪಾಲ್ಗೊಳ್ಳಿ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆಯಾಗಬೇಕು. ಅನೇಕ ಸದಸ್ಯರು ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಚಿವರಿಂದ ಉತ್ತರ ಪಡೆಯಬೇಕಿದೆ ಹೀಗಾಗಿ ನಿಮ್ಮ ಧರಣಿಯನ್ನು ಕೈಬಿಡಿ ಎಂದು ಮನವಿ ಮಾಡಿದರು.
ಸಭಾಧ್ಯಕ್ಷರ ಸಲಹೆಯನ್ನು ಒಪ್ಪಿದ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ದಯವಿಟ್ಟು ಧರಣಿಯನ್ನು ಕೈಬಿಟ್ಟು ಅವೇಶನ ನಡೆಸಲು ಸಹಕರಿಸಿ, ಯಾವುದೇ ವಿಚಾರಗಳಿದ್ದರೂ ಸದನದಲ್ಲಿ ಚರ್ಚೆ ಮಾಡಿ ಸರ್ಕಾರ ಉತ್ತರ ಕೊಡಲು ಸಿದ್ದವಿದೆ. ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳಬೇಡಿ ಎಂದು ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿಕೊಂಡರು.
ಸಭಾಧ್ಯಕ್ಷರು ಮತ್ತು ಆಡಳಿತ ಪಕ್ಷದ ಸಂಧಾನವನ್ನು ಸುತಾರಾಂ ಒಪ್ಪದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್, ಯಾವುದೇ ಕಾರಣಕ್ಕೂ ನಾವು ನಮ್ಮ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವ ಈಶ್ವಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರ ವಿರುದ್ಧ ತಕ್ಷಣವೇ ದೇಶದ್ರೋಹ ಪ್ರಕರಣ ದಾಖಲಿಸಬೇಕು. ಅಲ್ಲಿಯವರೆಗೂ ನಾವು ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ನಾಯಕರು ತಮ್ಮ ಪಟ್ಟಿನಿಂದ ಹಿಂದೆ ಸರಿಯದ ಕಾರಣ ಸಭಾಧ್ಯಕ್ಷರ ಸಂಧಾನ ವಿಫಲವಾಯಿತು.

Articles You Might Like

Share This Article