ಸೋಮವಾರದವರೆಗೂ ಅಹೋರಾತ್ರಿ ಧರಣಿಯ ಎಚ್ಚರಿಕೆ ಕೊಟ್ಟ ಕಾಂಗ್ರೆಸ್

Social Share

ಬೆಂಗಳೂರು,ಫೆ.18-ದೆಹಲಿಯ ಕೆಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟ ಕೈಗೆತ್ತಿಕೊಂಡಿರುವ ಕಾಂಗ್ರೆಸ್ ಸೋಮವಾರದವರೆಗೂ ವಿಧಾನಮಂಡಲದಲ್ಲಿ ಅಹೋರಾತ್ರಿ ಧರಣಿ ನಡೆಸುವ ಎಚ್ಚರಿಕೆ ನೀಡಿದೆ.
ಸಚಿವ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒನ್ ಪಾಯಿಂಟ್ ಅಜೆಂಡಾ ಇಟ್ಟುಕೊಂಡು ಕಳೆದ ಮೂರು ದಿನಗಳಿಂದಲೂ ಕಾಂಗ್ರೆಸ್ ವಿಧಾನಸಭೆ ಮತ್ತು ವಿಧಾನಪರಿಷತ್‍ನಲ್ಲಿ ಧರಣಿ, ಪ್ರತಿಭಟನೆ, ಸತ್ಯಾಗ್ರಹ ನಡೆಸುತ್ತಲೇ ಇದೆ. ಸರ್ಕಾರ ಕಾಂಗ್ರೆಸ್‍ನ ಪ್ರತಿಭಟನೆಗೆ ಸೊಪ್ಪು ಹಾಕುತ್ತಿಲ್ಲ. ಹೀಗಾಗಿ ನಿನ್ನೆ ಉಭಯ ಸದನಗಳಲ್ಲೂ ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ.
ವಿಧಾನಸಭೆಯ ಅಧ್ಯಕ್ಷರು ಮತ್ತು ವಿಧಾನಪರಿಷತ್‍ನ ಸಭಾಪತಿ ಕಚೇರಿಯಿಂದ ಶಾಸಕರಿಗೆ ಊಟ ಹಾಗೂ ಮಲಗಲು ಹಾಸಿಗೆಯ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇಂದು ಮುಂಜಾನೆಯಿಂದ ಕಾಂಗ್ರೆಸ್ ಸದಸ್ಯರು ವಿಧಾನಸೌಧದ ಆವರಣದಲ್ಲಿ ವಾಯುವಿಹಾರ ನಡೆಸಿದ್ದಲ್ಲದೆ, ಮೆಟ್ಟಿಲುಗಳ ಮೇಲೆ ಕುಳಿತು ದಿನಪತ್ರಿಕೆಗಳನ್ನು ಓದಿದರು.
ಕಾಂಗ್ರೆಸ್ ಬಿಜೆಪಿ ಆಡಳಿತದ ಅವಧಿಯಲ್ಲಿ ಇದೂ ಸೇರಿದಂತೆ ಮೂರು ಬಾರಿ ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿದೆ. ಈ ಹಿಂದೆಲ್ಲಾ ಒಂದು ದಿನ, ಎರಡು ದಿನಕ್ಕೆ ಧರಣಿ ಅಂತ್ಯಗೊಳ್ಳುತ್ತಿತ್ತು. ಯಡಿಯೂರಪ್ಪ ಅವರ ಆಡಳಿತಾವಧಿಯಲ್ಲಿ ಮೂರ್ನಾಲ್ಕು ದಿನಗಳವರೆಗೂ ಅಹೋರಾತ್ರಿ ಧರಣಿ ನಡೆದ ಉದಾಹರಣೆ ಇದೆ. ಆದರೆ, ಈ ಬಾರಿ ಧರಣಿ ವಿಭಿನ್ನವಾಗಿದ್ದು, ಸಚಿವ ಈಶ್ವರಪ್ಪ ಅವರ ರಾಜೀನಾಮೆಗೆ ಬೇಡಿಕೆ ಸೀಮಿತವಾಗಿರುವುದು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ನಿನ್ನೆಯಿಂದ ಅಹೋರಾತ್ರಿ ಧರಣಿ ಆರಂಭವಾಗಿದೆ. ಇಂದು ಬೆಳಗ್ಗೆ ಕೂಡ ಕಲಾಪದಲ್ಲಿ ಚರ್ಚೆ, ವಾದ-ವಿವಾದ, ಗಲಾಟೆ, ಗದ್ದಲಗಳಿಂದ ಅಧಿವೇಶನ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಕಾಂಗ್ರೆಸ್ ಸದಸ್ಯರು ಧರಣಿಯನ್ನು ಹಿಂಪಡೆದಿಲ್ಲ. ಮಧ್ಯಾಹ್ನದ ವೇಳೆಗೆ ಮುಖ್ಯಮಂತ್ರಿ ಮತ್ತು ಸರ್ಕಾರದ ಪ್ರತಿನಿಗಳು ವಿಪಕ್ಷ ನಾಯಕರ ಜತೆ ಸಂಧಾನ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಸಂಧಾನ ಸಭೆ ಯಶಸ್ವಿಯಾದರೆ ಅಹೋರಾತ್ರಿ ಧರಣಿ ಅಂತ್ಯವಾಗಲಿದೆ. ಇಲ್ಲವಾದರೆ ಮತ್ತೆ ಮುಂದುವರೆಸುವ ಧರ್ಮಸಂಕಟ ಕಾಂಗ್ರೆಸ್ ಸದಸ್ಯರದ್ದು, ಶನಿವಾರ, ಭಾನುವಾರ ಎರಡು ದಿನಗಳ ಕಾಲ ಮನೆ ಹಾಗೂ ಕ್ಷೇತ್ರಗಳಿಗೆ ತೆರಳದೆ ವಿಧಾನಸೌಧದಲ್ಲಿ ಮಲಗುವುದು ಹೇಗೆ ಎಂಬ ಧರ್ಮ ಸಂಕಟ ಕಾಂಗ್ರೆಸ್‍ನ ಬಹುತೇಕ ಶಾಸಕರನ್ನು ಕಾಡುತ್ತಿದೆ.
ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ನೇಮಕವಾಗಿರುವ ಬಿ.ಕೆ.ಹರಿಪ್ರಸಾದ್ ಅವರಿಗೆ ಸಂಜೆ ಅಭಿನಂದನಾ ಸಮಾರಂಭ ಇರುವುದರಿಂದ ಎಲ್ಲರೂ ಅಲ್ಲಿಗೆ ತೆರಳಲೇಬೇಕಿದೆ. ಹೀಗಾಗಿ ಧರಣಿ ಮುಂದುವರೆಸಬೇಕೋ, ಬೇಡವೋ ಎಂಬ ಗೊಂದಲ ಸದಸ್ಯರನ್ನು ಕಾಡುತ್ತಿದೆ.
ಈ ನಡುವೆ ಈ ಸಂಜೆಯೊಂದಿಗೆ ಮಾತನಾಡಿದ ವಿಧಾನಪರಿಷತ್‍ನ ಕಾಂಗ್ರೆಸ್ ಮುಖ್ಯಸಚೇತಕ ಪ್ರಕಾಶ್ ರಾಥೋಡ್, ಸೋಮವಾರದವರೆಗೂ ಧರಣಿ ಮುಂದುವರೆಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ. ಕಾಂಗ್ರೆಸ್‍ನ ಉಪ ನಾಯಕ ಕೆ.ಗೋವಿಂದರಾಜು ಅವರು ಅಹೋರಾತ್ರಿ ಧರಣಿಯ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಆದರೆ, ನಮ್ಮ ಶಾಸಕಾಂಗ ಪಕ್ಷದ ನಾಯಕರು ಮತ್ತು ಹಿರಿಯರು ಸಭೆ ಸೇರಿ ಚರ್ಚಿಸುವ ಮೂಲಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಆವರೆಗೂ ನಾವು ಪರಿಷತ್ ಸಭಾಂಗಣವನ್ನು ಬಿಟ್ಟು ಕದಲುವುದಿಲ್ಲ ಎಂದು ಹೇಳಿದ್ದಾರೆ.

Articles You Might Like

Share This Article