ಸಂಕ್ರಾಂತಿ ಸಮೀಪಿಸಿದರು ಕೆಪಿಸಿಸಿಗೆ ಬಿಡದ ಗ್ರಹಣ..!

ಬೆಂಗಳೂರು, ಜ.8- ಸಂಕ್ರಾಂತಿ ಸಮೀಪಿಸುತ್ತಿದೆ, ಕೆಪಿಸಿಸಿಗೆ ನೂತನ ಸಾರಥಿ ನೇಮಕವಾಗಲಿದೆ ಎಂಬ ನಿರೀಕ್ಷೆ ಇಟ್ಟುಕೊಂಡವರಿಗೆ ಮತ್ತೆ ನಿರಾಸೆಯು ಕಾಡಲಾರಂಭಿಸಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕಾತಿ ವಿಳಂಬ ಮಾಡಲು ವಿಳಂಬವಾಗುತ್ತಿದ್ದಂತೆ ದಿನಕೊಬ್ಬರಂತೆ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಈವರೆಗೂ ಪ್ರಮುಖವಾಗಿ ಕೇಳಿ ಬಂದವರ ಹೆಸರುಗಳು ನೆಪಥ್ಯಕ್ಕೆ ಸರಿದು, ಹೊಸ ಹೊಸ ನಾಯಕರು ತಾವು ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳೆಂದು ಹೇಳಿಕೊಳ್ಳಲಾರಂಭಿಸಿದ್ದಾರೆ.

ಈ ರೀತಿ ತಮ್ಮ ಹೆಸರನ್ನು ಘೋಷಣೆ ಮಾಡಿಕೊಳ್ಳುವವರಲ್ಲಿ ಬಹುತೇಕರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರು ಎಂಬುದು ಕಾಕತಾಳೀಯವಾಗಿದೆ.  ಉಪಚುನಾವಣೆಯ ಸೋಲಿನ ನೈತಿಕ ಹೊಣೆ ಹೊತ್ತು ವಿರೋಧ ಪಕ್ಷದ ಸ್ಥಾನಕ್ಕೆ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡುರಾವ್ ರಾಜೀನಾಮೆ ನೀಡಿದ ಬಳಿಕ ರಾಜ್ಯದಲ್ಲಿ ನಿಜವಾದ ರಾಜಕೀಯ ಆರಂಭವಾಗಿದೆ.

ಯಾವುದೋ ಲೆಕ್ಕಾಚಾರದಲ್ಲಿ ರಾಜೀನಾಮೆ ನೀಡಿದವರು ಈಗ ಮತ್ತೆ ಅದೇ ಹುದ್ದೆಯಲ್ಲಿ ಮುಂದುವರೆಯಲು ತೆರೆಮರೆಯ ಲಾಬಿ ನಡೆಸುವಂತಾಗಿದೆ. ರಾಜೀನಾಮೆಯನ್ನು ಅಂಗೀಕರಿಸಿ ಬದಲಿ ವ್ಯಕ್ತಿಗಳನ್ನು ನೇಮಿಸಬೇಕು ಎಂದು ಕಾಂಗ್ರೆಸ್‍ನ ಮತ್ತೊಂದು ಬಣ ತೆರೆಮರೆಯಲ್ಲಿ ಒತ್ತಡ ಹೇರಲಾರಂಭಿಸಿದೆ. ಡಿ.ಕೆ.ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದು, ಆದಾಯ ತೆರಿಗೆ ದಾಳಿ, ಜಾರಿ ನಿರ್ದೇಶನಾಲಯದ ವಿಚಾರಣೆ ಸೇರಿದಂತೆ ನಾನಾ ತೊಂದರೆಗಳನ್ನು ಎದುರಿಸಿದ್ದಾರೆ. ಈ ಕಾರಣಕ್ಕೆ ಅವರಿಗೆ ಕೆಪಿಸಿಸಿ ಹುದ್ದೆ ನೀಡಲಾಗುವುದು ಎಂಬ ವದ್ಧಂತಿಗಳಿದ್ದವು.

ಮೂಲ ಕಾಂಗ್ರೆಸಿಗರಾಗಿದ್ದರೂ ದಿನೇಶ್ ಗುಂಡುರಾವ್ ಇತ್ತೀಚೆಗೆ ಸಿದ್ದರಾಮಯ್ಯ ಅವರ ಮಾತುಗಳನ್ನು ಹೆಚ್ಚಾಗಿ ಕೇಳಿ ಪಕ್ಷ ನಿಷ್ಠರನ್ನು ಕಡೆಗಣಿಸುತ್ತಿದ್ದಾರೆ. ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಸಿದರೆ ಮುಂದೆ ಪಕ್ಷಕ್ಕೆ ಭಾರೀ ಹಾನಿಯಾಗಲಿದೆ ಎಂದು ಕೆಲವರು ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಖಚಿತ ಎಂದು ಹೇಳಲಾಗುತ್ತಿದೆ.

ಆರಂಭದಿಂದಲೂ ಡಿ.ಕೆ.ಶಿವಕುಮಾರ್ ಅವರು ಈ ಹುದ್ದೆಗೆ ನೇಮಕವಾಗುವುದು ಪಕ್ಕಾ ಎಂದು ಹೇಳಲಾಗಿತ್ತು. ಏಕಾಏಕಿ ಕೃಷ್ಣಬೈರೇಗೌಡ, ಕೆ.ಎಚ್.ಮುನಿಯಪ್ಪ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್, ರಾಮಲಿಂಗಾ ರೆಡ್ಡಿ ಅವರ ಹೆಸರುಗಳು ಕೇಳಿ ಬಂದಿದ್ದವು. ಇವರೆಲ್ಲರ ಪೈಪೋಟಿಯನ್ನು ಹಿಂದಿಕ್ಕಿ ಡಿ.ಕೆ.ಶಿವಕುಮಾರ್ ಮುಂದೊಗುತ್ತಿದ್ದಾರೆ, ಪಕ್ಷದಲ್ಲಿ ಮೂಲ ಕಾಂಗ್ರೆಸಿಗರ ಕೈ ಮೇಲಾಗುತ್ತಿದೆ ಎಂಬ ಹಂತದಲ್ಲಿ ಮತ್ತಷ್ಟು ಹೊಸ ಪಾತ್ರಗಳ ಪ್ರವೇಶವಾಗಿದೆ.

ಮಾಜಿ ಸಚಿವ ಸತೀಶ್ ಜಾರಕಿಹೊಳಿ ರಂಗ ಪ್ರವೇಶ ಹೈಕಮಾಂಡ್‍ಗೆ ನುಂಗಲಾರದ ತುತ್ತಾಗಿದೆ. ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪ ಜಾರಕಿಹೊಳಿ ಸಹೋದರರ ಸಿಟ್ಟಿಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಪತನಕ್ಕೂ ನಾಂದಿಯಾಗಿತ್ತು. ಡಿ.ಕೆ.ಶಿವಕುಮಾರ್ ಅವರ ಹಸ್ತಕ್ಷೇಪದಿಂದಾದ ಮುಜುಗರಕ್ಕೆ ಪ್ರತಿಯಾಗಿ ಸತೀಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ರೇಸ್‍ಗೆ ಬಂದು ಗೊಂದಲ ಸೃಷ್ಠಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪರಮೇಶ್ವರ್ ಉಪಮುಖ್ಯಮಂತ್ರಿಯಾಗಿದ್ದಾಗ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಕೆ.ಎನ್.ರಾಜಣ್ಣ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ರೇಸ್‍ಗೆ ಆಗಮಿಸಿದ್ದಾರೆ. ಈಗಾಗಲೇ ಮೀಸಲಾತಿ ಹೆಚ್ಚಳದ ಹೋರಾಟಕ್ಕಾಗಿ ಸಂಘಟಿತವಾಗಿರುವ ವಾಲ್ಮೀಕಿ ಸಮುದಾಯವನ್ನು ಈ ಹಂತದಲ್ಲಿ ಕಾಂಗ್ರೆಸ್ ನಿರ್ಲಕ್ಷ್ಯಿಸಲು ಸಾಧ್ಯವಿಲ್ಲ. ವಾಲ್ಮೀಕಿ ಸಮುದಾಯದ ಈ ಇಬ್ಬರು ನಾಯಕರ ಬೇಡಿಕೆಯನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ ಎಂಬ ಇಕ್ಕಟ್ಟಿಗೆ ಕಾಂಗ್ರೆಸ್ ಹೈ ಕಮಾಂಡ್ ನಾಯಕರು ಸಿಲುಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ನೇಮಕಕ್ಕೆ ಅಧಿಕೃತ ಪ್ರಕಟಣೆ ಹೊರ ಬೀಳದೆ ಇದ್ದರೆ ಮತ್ತಷ್ಟು ಮಂದಿ ಹೊಸ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಾರೆ. ಮುಂದೆ ಹೊಸದಾಗಿ ಜವಾಬ್ದಾರಿ ವಹಿಸಿಕೊಳ್ಳುವವರಿಗೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಕಷ್ಟವಾಗಲಿದೆ ಎಂದು ಕೆಲವು ನಾಯಕರು ಹೈಕಮಾಂಡ್‍ಗೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ.