ಕರ್ನಾಟಕದಿಂದ ರಾಜ್ಯಸಭೆಗೆ ಪ್ರಿಯಾಂಕಾ ಗಾಂಧಿ ಆಯ್ಕೆಗೆ ಕಸರತ್ತು

ಬೆಂಗಳೂರು, ಮೇ 14- ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಸದಸ್ಯರ ಚುನಾವಣೆಗೆ ವೇಳಾ ಪಟ್ಟಿ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳ ಲಾಬಿ ಬಿರುಸುಗೊಂಡಿದ್ದು, ಕಾಂಗ್ರೆಸ್‍ನ ಪ್ರಭಾವಿ ನಾಯಕಿ ಪ್ರಿಯಾಂಕ ಗಾಂಧಿ ಅವರನ್ನು ಕರ್ನಾಟಕದಿಂದ ರಾಜ್ಯಸಭೆಗೆ ಆರಿಸಿ ಕಳುಹಿಸುವ ತೆರೆಮರೆ ಕಸರತುಗಳು ಜೋರಾಗಿವೆ.

ರಾಜ್ಯಸಭೆ ಸದಸ್ಯರಾದ ಬಿಜೆಪಿಯ ಕೆ.ಸಿ.ರಾಮಮೂರ್ತಿ, ನಿರ್ಮಿಲಾ ಸೀತಾರಾಮನ್, ಕಾಂಗ್ರೆಸ್‍ನ ಕೇಂದ್ರದ ಮಾಜಿ ಸಚಿವ ಜೈರಾಮ್ ರಮೇಶ್, ನಿಧನರಾದ ಆಸ್ಕರ್ ಫರ್ನಾಡಿಸ್ ಸೇರಿದಂತೆ ನಾಲ್ವರ ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಕಾಂಗ್ರೆಸ್‍ನಿಂದ ಜೈರಾಮ್ ರಮೇಶ್ ಮರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಆದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಆರಿಸಿ ಕಳುಹಿಸಲು ತಯಾರಿ ನಡೆಸಿದ್ದಾರೆ. ಗಾಂಧಿ ಕುಟುಂಬದೊಂದಿಗೆ ಅಪಾರ ನಿಷ್ಠೆ ಹೊಂದಿರುವ ಡಿ.ಕೆ.ಶಿವಕುಮಾರ್ ಪಕ್ಷದ ಅಧ್ಯಕ್ಷರಾದಾಗ ಪ್ರಿಯಾಂಕ ಗಾಂಧಿ ದೂರವಾಣಿ ಕರೆ ಮಾಡಿ ಶುಭಾಷಯ ಹೇಳಿದ್ದರು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸಂಸದರಾಗಿದ್ದ ಪ್ರಿಯಾಂಕ ಗಾಂಧಿ ಅವರು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಗೆಲವಿಗಾಗಿ ಬಾರೀ ಕಸರತು ನಡೆಸಿದ ಪ್ರಿಯಾಂಕ ಯಶಸ್ವಿಯಾಗಲಿಲ್ಲ.

ಬೇರೆ ಬೇರೆ ರಾಜ್ಯಗಳು ಪ್ರಿಯಾಂಕ ಅವರನ್ನು ರಾಜ್ಯಸಭೆಯಿಂದ ಆರಿಸಿ ಕಳುಹಿಸಲು ದುಂಬಾಲು ಬಿದ್ದಿವೆ. ಈ ಹಿಂದೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದಾಗ ನವ ಹುರುಪು ತುಂಬಿದ್ದೆ ಕರ್ನಾಟಕ. ಚಿಕ್ಕಮಗಳೂರು ಲೋಕಸಭೆಯಿಂದ ಚುನಾಯಿತರಾದ ಇಂದಿರಾ ಗಾಂಧಿ ಮತ್ತೆ ರಾಜಕೀಯದಲ್ಲಿ ವಿಜೃಂಭಿಸಿದರು. ಹಾಗಾಗಿ ಪ್ರಿಯಾಂಕ ಗಾಂಧಿ ಅವರನ್ನು ಕರ್ನಾಟಕದಿಂದ ಆರಿಸಿ ಕಳುಹಿಸಿದರೆ ಮುಂದೆ ಉಜ್ವಲ ಭವಿಷ್ಯ ಇರಲಿದೆ ಎಂಬ ನಂಬಿಕೆಯನ್ನು ಕಾಂಗ್ರೆಸಿಗರು ಹೊಂದಿದ್ದಾರೆ.

ಅದಕ್ಕಾಗಿ ಜೈರಾಮ್ ರಮೇಶ್ ಅವರಿಗೆ ಟಾಂಗ್ ಕೊಟ್ಟು ಪ್ರಿಯಾಂಕ ಗಾಂಧಿ ಅವರಿಗೆ ಮಣೆ ಹಾಕಲು ತೆರೆ ಮರೆಯ ಕಸರತು ನಡೆಯುತ್ತಿವೆ. ಜೈರಾಮ್ ರಮೇಶ್ ಅವರಿಂದ ರಾಜ್ಯ ರಾಜಕಾರಣಕ್ಕೆ ಯಾವುದೇ ನೆರವಾಗಿಲ್ಲ. ರಾಷ್ಟ್ರ ಮಟ್ಟದಲ್ಲೂ ಜಿ-23 ಬಳಗದಲ್ಲಿ ಜೈರಾಮ್ ರಮೇಶ್ ಗುರುತಿಸಿಕೊಂಡಿದ್ದರು. ಹೀಗಾಗಿ ಅವರನ್ನು ಮತ್ತೆ ಕರ್ನಾಟಕದಿಂದ ಚುನಾಯಿಸಬಾರದು ಎಂಬ ವಾದಗಳು ಕೇಳಿ ಬರುತ್ತಿವೆ.

ರಾಜಸ್ಥಾನದ ಉದಯಪುರ್‍ನಲ್ಲಿ ನಡೆಯುತ್ತಿರುವ ಚಿಂತನ್ ಶಿವಿರ್‍ನಲ್ಲಿ ಒಂದು ಕುಟುಂಬ ಒಂದು ಟಿಕೆಟ್ ಎಂಬ ನಿಯಮ ರೂಪಿಸುವ ತಯಾರಿ ನಡೆದಿದೆ. ಅದು ಅಂಗೀಕಾರಗೊಂಡರೆ ಪ್ರಿಯಾಂಕ ಗಾಂಧಿ ಅವರ ರಾಜ್ಯಸಭೆ ಪ್ರವೇಶದ ಕನಸು ಭಗ್ನವಾಗಲಿದೆ. ಇಲ್ಲವಾದರೆ ಕರ್ನಾಟಕದಿಂದಲೇ ಅವರನ್ನು ರಾಜಕಾರಣದ ಮುಖ್ಯವಾಹಿನಿಗೆ ತರಬೇಕು ಎಂಬ ಉಮೇದುಗಳು ರಾಜ್ಯ ನಾಯಕರಲ್ಲಿ ಜೋರಾಗಿ ನಡೆಯುತ್ತಿವೆ.

ಆದರೆ ದೆಹಲಿಯ ನಾಯಕರು ಜೈರಾಮ್ ರಮೇಶ್ ಅವರನ್ನು ಪುನರಾಯ್ಕೆ ಮಾಡುವಂತೆ ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಜೈರಾಮ್ ರಮೇಶ್ ಬೇಡ ಎಂದಾದರೆ ರಾಜ್ಯಸಭೆ ಪ್ರವೇಶಿಸಲು ಹಲವು ನಾಯಕರು ನಾ ಮುಂದು ತಾ ಮುಂದು ಎಂದು ಮುಗಿ ಬಿದಿದ್ದಾರೆ.

ಇನ್ನು ವಿಧಾನ ಪರಿಷತ್‍ನಲ್ಲಿ ಏಳು ಸ್ಥಾನಗಳು ತೆರವಾಗಲಿವೆ. ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ, ಎಸ್.ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ, ಲಹರ್ ಸಿಂಗ್ ಸಿರೋಯಾ, ಎಚ್.ಎಂ.ರಮೇಶ್‍ಗೌಡ, ಲಕ್ಷ್ಮಣ ಸಂಗಪ್ಪ ಸವದಿ ಅವರಿಂದ ತೆರವಾಗುತ್ತಿರುವ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಎರಡು ಸ್ಥಾನಗಳನ್ನು ನಿರಾಯಸವಾಗಿ ಗೆಲ್ಲಬಹುದಾಗಿದೆ. ಅದಕ್ಕಾಗಿ 30ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದಾರೆ.

ಎರಡರಲ್ಲಿ ಒಂದನ್ನು ಅಲ್ಪಸಂಖ್ಯಾತರಿಗೆ ಮತ್ತೊಂದನ್ನು ದಲಿತ ಸಮುದಾಯಕ್ಕೆ ನೀಡುವ ಚಿಂತನೆ ನಡೆದಿದೆ. ಮಾಜಿ ಸಚಿವ ಎಂ.ಆರ್.ಸೀತಾರಾಮ್, ಐವಾನ್ ಡಿ.ಸೋಜಾ, ಎಸ್.ಆರ್.ಪಾಟೀಲ್, ಜಯಮಾಲ, ಆರ್.ಬಿ.ತಿಮ್ಮಾಪುರ, ಅಲ್ಲಂ ವೀರಭದ್ರಪ್ಪ ಸೇರಿದಂತೆ ಅನೇಕರು ಸಾಲಿನಲ್ಲಿದ್ದಾರೆ. ಹಿಂದೆ ಸದಸ್ಯರಾಗಿ ಕೆಲಸ ಮಾಡಿದವರಿಗೆ ಅವಕಾಶ ನೀಡಬೇಕೆ ಅಥವಾ ಹೊಸ ಮುಖಗಳಿಗೆ ಮಣೆ ಹಾಕಬೇಕೆ ಎಂಬ ಚರ್ಚೆಗಳು ನಡೆಯುತ್ತಿವೆ. ಚಿಂತನ್ ಶಿವಿರ್ ನಂತರ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗಳು ಶುರುವಾಗಲಿವೆ.

ರಾಜ್ಯಸಭೆಗೆ ಎರಡನೇ ಅಭ್ಯರ್ಥಿ ಹಾಕುವುದು, ವಿಧಾನಸಭೆಗೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಜೆಡಿಎಸ್‍ಗೆ ಪೈಪೆÇೀಟಿ ನೀಡಲು ಕಾಂಗ್ರೆಸ್‍ನಲ್ಲಿ ಒಂದು ಬಣ ಪಟ್ಟು ಹಿಡಿದಿದೆ. ಆದರೆ ಕಾಂಗ್ರೆಸ್ ಉನ್ನತ ವಲಯದಲ್ಲಿ ಜೆಡಿಎಸ್ ಬಗ್ಗೆ ಮೃದು ಧೋರಣೆ ಇರುವುದರಿಂದ ಹೆಚ್ಚುವರಿ ಅಭ್ಯರ್ಥಿಗಳ ಕುರಿತು ಚರ್ಚಿಸಿ ತಿರ್ಮಾನಿಸುವಂತೆ ಸಲಹೆ ಕೇಳಿ ಬಂದಿದೆ.