ಬೆಂಗಳೂರು, ಆ.23- ಕೊಡಗಿನಲ್ಲಿ ಮೂರು ದಿನಗಳ ನಿಷೇಧಾಜ್ಞೆ ವಿಧಿಸಿರುವುದರಿಂದ ಆ.26ರಂದು ಆಯೋಜಿಸಿದ್ದ ಮಡಿಕೇರಿ ಚಲೋ ಪ್ರತಿಭಟನೆಯನ್ನು ಮುಂದೂಡಲಾಗಿದೆ ಎಂದು ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆದೇಶ ಎಂದರೆ ಸರ್ಕಾರದ ಆದೇಶ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ನಾವು ಸರ್ಕಾರದ ಆದೇಶ ಪರಿಪಾಲಿಸುತ್ತೇವೆ. ಕೊಡಗು ಜಿಲ್ಲೆಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಮುಂದೂಡಲು ನಿರ್ಧರಿಸಿದ್ದೇವೆ ಎಂದರು.
ಆಗಸ್ಟ್18ರಂದು ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆದ ಹಾನಿಯನ್ನು ಪರಿಶೀಲಿಸಲು ತೆರಳಿದ್ದೆ. ವಾಡಿಕೆಗಿಂತಲೂ ಎರಡು-ಮೂರು ಪಟ್ಟು ಹೆಚ್ಚು ಮಳೆ ಬಿದ್ದಿದೆ. ಹಲವೆಡೆ ಮಳೆಯಿಂದ ಹೆಚ್ಚು ಹಾನಿಯಾಗಿದೆ. ಇಡೀ ಕೊಡಗು ಜಿಲ್ಲೆಯಲ್ಲಿ ಮಣ್ಣು ಕುಸಿದಿದೆ. ಜನರು ವಾಸ ಮಾಡುತ್ತಿದ್ದ ಮನೆಗಳಿಗೆ ಹಾನಿಯಾಗಿದೆ.
ಇನ್ನು ಕೆಲವು ಕಡೆ ರಸ್ತೆಯ ಮೇಲೆ ಮಣ್ಣು ಬಿದ್ದು ರಸ್ತೆಗಳು ಮುಚ್ಚಿ ಹೋಗಿ ಸಂಚಾರಕ್ಕೆ ತೊಂದರೆ ಆಗಿದೆ. ಕೆಲವು ಜಾಗಗಳಲ್ಲಿ ನಿರ್ಮಿಸಲಾಗಿದ್ದ ತಡೆ ಗೋಡೆ ಕಾಮಗಾರಿ ಹಂತದಲ್ಲೆ ಬಿದ್ದು ಹೋಗಿದ್ದವು. ಅದು ಕಳಪೆ ಕಾಮಗಾರಿಯಾಗಿದೆ.
ಸ್ಥಳೀಯ ಶಾಸಕರು ಮತ್ತು ಅಧಿಕಾರಿಗಳು ಸೇರಿ ಕಾಮಗಾರಿ ಮಾಡಿದ್ದಾರೆ. ಮುಖ್ಯಮಂತ್ರಿಯವರಿಗೂ ಆ ಸ್ಥಳ ತೋರಿಸದೆ ಮುಚ್ಚಿಟ್ಟಿದ್ದಾರೆ. ಕಾರ್ಯಕರ್ತರ ಮಾಹಿತಿ ಮೇರೆಗೆ ನಾನು ಆ ಸ್ಥಳಕ್ಕೆ ಹೋಗಿದ್ದೆ. ಅದಕ್ಕಾಗಿ ಕೆಲವರು ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶನ ಮಾಡಿದ್ದರು ಎಂದರು.
ತಮ್ಮ ವಿರುದ್ಧ ಪ್ರತಿಭಟನೆ ನಡೆಸುವುದನ್ನು ಎಸ್‍ಪಿ ಸೇರಿ ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತಾ ನಿಂತಿದ್ದರು. ಎರಡು ಮೂರು ಕಡೆ ಮೊಟ್ಟೆ ಎಸೆದಿದ್ದಾರೆ. ಕೆಲವೆಡೆ ಬಟ್ಟೆಯೊಳಗೆ ಕಲ್ಲು ಅಡಗಿಸಿಟ್ಟು ನನ್ನ ಕಾರಿನತ್ತ ಎಸೆಯಲಾಗಿದೆ. ಅದು ನಾನು ಪ್ರಯಾಣಿಸುತ್ತಿದ್ದ ಕಾರಿನ ಹಿಂದೆ ಬಿದ್ದಿದೆ ಎಂದು ಹೇಳಿದರು.
ಬಿಜೆಪಿ, ಭಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಪ್ರತಿಭಟನೆ. ಜಾಗ್ರತೆಯಾಗಿ ಕಾರ್ಯಕರ್ತರನ್ನು ವಶಕ್ಕೆ ಪಡೆಯ ಬಹುದಿತ್ತು. ಆದರೆ ಏನನ್ನೂ ಮಾಡಿಲ್ಲ. ಯಾರೋ ಒಬ್ಬ ಬಂದು ಏನೋ ಕಾರಿನ ಒಳಗಡೆ ಬ್ಯಾನರ್ ಹಾಕಿದ.
ಅವನನ್ನೂ ಪೊಲೀಸರು ಹಿಡಿಯಲಿಲ್ಲ. ಕೊನಾನು ಎಂಬಲ್ಲಿಗೆ ಭೇಟಿ ಕೊಟ್ಟಾಗ ಪ್ರತಿಭಟನೆ ವೇಳೆ ಮೊಟ್ಟೆ ಎಸೆದರು. ಆಗಲೂ ಪೊಲೀಸರು ಏನೂ ಮಾಡಲಿಲ್ಲ. ಗಲಾಟೆ ಮಾಡಿದ ಆರ್‍ಎಸ್‍ಎಸ್ ಭಜರಂಗದಳದವರ ಮೇಲೆ ಏನೂ ಕ್ರಮ ಕೈಗೊಂಡಿಲ್ಲ. ನಮ್ಮ ಕಾರ್ಯಕರ್ತರ ಮೇಲೆ ಮಾತ್ರ ಲಾಠಿ ಚಾರ್ಜ್ ನಡೆಸಿದ್ದಾರೆ ಎಂದರು.
ಪೊಲೀಸರು ಪಕ್ಷಪಾತ ಮಾಡಿದ್ದಾರೆ. ನಾನು ಸಿಟ್ಟಾದ ಮೇಲೆ ಕೆಲವರನ್ನು ಬಂಧಿಸಿದ್ದಾರೆ. ನನ್ನತ್ತ ಮೊಟ್ಟೆ ಎಸೆದ ಸಂಪತ್ ಪಕ್ಕಾ ಆರ್‍ಎಸ್‍ಎಸ್ ಕಾರ್ಯಕರ್ತ. ನಂತರ ಆತನಿಗೆ ಕಾಂಗ್ರೆಸ್ ಬಾವುಟ ಹಾಕಿ ಸುಳ್ಳು ಹೇಳಿಸಿದ್ದಾರೆ. ಬಂಧಿತನಾಗಿದ್ದ ಸಂಪತ್‍ನನ್ನು ಶಾಸಕ ಅಪ್ಪಚ್ಚು ರಂಜನ್ ಬಿಡಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಳಪೆ ಕೆಲಸ ಮಾಡಿದ್ದ ಶಾಸಕರು ತಮ್ಮ ಹಗರಣ ಮುಚ್ಚಿಡಲು ಕಾರ್ಯಕರ್ತರನ್ನು ಪ್ರಚೋದಿಸಿ ಪ್ರತಿಭಟನೆ ಮಾಡಿಸಿದ್ದಾರೆ. ನಾನು ಕೊಡಗಿಗೆ ಹೋಗಿದ್ದು ರೈತರ ಕಷ್ಟ ಕೇಳಲು, ಅದಕ್ಕೂ ಅಡ್ಡಿ ಪಡಿಸಿದ್ದಾರೆ. ದಾವಣಗೆರೆಯಲ್ಲಿ ನನ್ನ ಹುಟ್ಟು ಹಬ್ಬದ ಕಾರ್ಯಕ್ರಮ ಆದ ನಂತರ ಬಿಜೆಪಿ, ಆರ್‍ಎಸ್‍ಎಸ್‍ಗೆ ಹೊಟ್ಟೆ ಉರಿ ಬಂದಿದೆ. ಅದಕ್ಕಾಗಿ ಈ ರೀತಿ ನನ್ನ ವರ್ಚಸ್ಸು ಕುಂದಿಸುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ನಾವು ಮಡಿಕೇರಿ ಚಲೋ ಘೋಷಿಸಿದ್ದು, ಸರ್ಕಾರದ ವಿರುದ್ಧವೇ ಹೊರತು, ಕೊಡಗಿನ ಜನರ ವಿರುದ್ಧ ಅಲ್ಲ. ನಾವು ಪ್ರತಿಭಟನೆಯನ್ನು ಘೋಷಿಸಿದ ಬಳಿಕ ಅಲ್ಲಿನ ಶಾಸಕ ಕೆ.ಜಿ.ಬೋಪಯ್ಯ, ಕಾಂಗ್ರೆಸಿಗರು ಕೊಡಗಿಗೆ ಬರಲಿ ನೋಡಿಕೊಳ್ಳುತ್ತೇವೆ ಎಂದು ಸವಾಲು ಹಾಕಿದ್ದಾರೆ. ಶಾಡೋ ಮುಖ್ಯಮಂತ್ರಿ ಆಗಿರುವ ನನಗೆ ಸವಾಲು ಹಾಕಿ, ಎದುರಿಸಲು ನೋಡುತ್ತಾರೆ. ನಾವೇನು ಪ್ರಜಾಪ್ರಭುತ್ವದಲ್ಲಿ ಇದ್ಧೇವೆಯೋ ಅಥವ ಸರ್ವಾಧಿಕಾರದಲ್ಲೋ ಎಂದು ಪ್ರಶ್ನಿಸಿದರು.
ನಾವು ಪ್ರತಿಭಟನೆ ಘೋಷಿಸಿದ ಬಳಿಕ ಬಿಜೆಪಿ ಜನ ಜಾಗೃತಿ ಸಮಾವೇಶ ಘೋಷಣೆ ಮಾಡಿದ್ದಾರೆ. ಶಾಸಕರಿಬ್ಬರು ಸೇರಿ ಬಿಜೆಪಿ ಕಾರ್ಯಕ್ರಮ ಘೋಷಣೆ ಮಾಡಿ, ನಮ್ಮ ಪ್ರತಿಭಟನೆಯನ್ನು ತಡೆಯಲು ಹುನ್ನಾರ ನಡೆಸಿದ್ದಾರೆ. ಕೊಡಗಿನಲ್ಲಿ ನನ್ನ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಕಾರಣವೇ ಇಲ್ಲ. ಟಿಪ್ಪು ಹೆಸರು ಹೇಳುತ್ತಿರುವುದು ಕುಂಟು ನೆಪ. ಈ ಹಿಂದೆ 2019ರಲ್ಲಿ ನಾನು ಕೊಡಗಿಗೆ ಹೋಗಿದ್ದೆ. ಆಗ ಯಾವ ಪ್ರತಿಭಟನೆಗಳೂ ಇರಲಿಲ್ಲ ಯಾಕೆ ಎಂದರು.
ಈ ಪ್ರಕರಣದಲ್ಲಿ ಪ್ರತಿಹಂತದಲ್ಲಿಯೂಪೊಲೀಸರ ನಿಷ್ಕ್ರಿಯತೆ ಎದ್ದು ಕಾಣುತ್ತಿದೆ. ಈಗ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಅದನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಬಹುದು. ಆದರೆ ಇದು ಪಕ್ಷದ ಕಾರ್ಯಕ್ರಮವಾಗಿತ್ತು. ಪಕ್ಷ ಸಂವಿಧಾನವನ್ನು ಗೌರವಿಸಬೇಕು. ಅದಕ್ಕಾಗಿ ಪ್ರತಿಭಟನೆ ಬೇಡ ಎಂದು ನಿರ್ಧರಿಸಲಾಗಿದೆ ಎಂದರು.
ನಾನು ದೇವರನ್ನು ನಂಬ್ತೀನಿ, ದೇವಸ್ಥಾನಕ್ಕೆ ಹೋಗ್ತೀನಿ. ಮಾಂಸ ತಿನ್ನುವುದು ತಿನ್ನದಿರುವುದು ಅವರವರ ವೈಯಕ್ತಿಕ ಅಭ್ಯಾಸ. ಅದೊಂದು ವಿಷಯವೇ ಇಲ್ಲ. ಅದರ ಬಗ್ಗೆ ಚರ್ಚಿಸುವ ಅಗತ್ಯವಿಲ್ಲ. ಬಿಜೆಪಿಗೆ ಬೇರೆ ಕೆಲಸವೇ ಇಲ್ಲ. ಸಮಸ್ಯೆಗಳಿಂದ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.
ನಾನು ದೇವಸ್ಥಾನಗಳಿಗೆ ಹೋಗುವುದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ನಮ್ಮೂರಲ್ಲಿ ಇರುವ ದೇವರು ಸಿದ್ದರಾಮೇಶ್ವರ. ಅಲ್ಲಿಗೆ ನಿಯಮಿತವಾಗಿ ಹೋಗ್ತೀನಿ. ನಂಜನಗೂಡು, ತಿರುಪತಿ, ಚಾಮುಂಡೇಶ್ವರಿ ದರ್ಶನಕ್ಕೆ ಹೋಗ್ತೀನಿ. ನಾನು ದೇವಸ್ಥಾನಕ್ಕೆ ಹೋಗ್ತಾನೇ ಇರ್ತೀನಿ, ಆದರೆ ಅದೇ ಒಂದು ಕಸುಬಲ್ಲ. ನನಗೆ ದೇವರಲ್ಲಿ ನಂಬಿಕೆಯಿದೆ. ಎಲ್ಲ ದೇವರೂ ಒಂದೇ ಎಂದು ನಂಬುವವ ನಾನು ಎಂದು ವಿವರಿಸಿದ ಅವರು, ಎಷ್ಟೋ ದೇವರಿಗೆ ಮಾಂಸದ ಎಡೆ ಇಡುತ್ತಾರೆ. ನಾನು ಕೇವಲ ಕುರಿ, ಕೋಳಿ, ಮೇಕೆ ಮಾಂಸ ತಿನ್ನುತ್ತೇನೆ ಎಂದರು.
ಹಂದಿಮಾಂಸ ತಿಂದು ಮಸೀದಿಗೆ ಹೋಗಲಿ ಎಂಬ ಬಿಜೆಪಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಹಂದಿಮಾಂಸ ತಿನ್ನಲ್ಲ. ಹಾಗೆಂದು ಹಂದಿಮಾಂಸ ತಿನ್ನುವವರ ವಿರುದ್ಧವೂ ಇಲ್ಲ. ನಾನು ಇನ್ನೊಬ್ಬರ ಸ್ವಾತಂತ್ರ್ಯ ಕಿತ್ತುಕೊಳ್ಳುವವನಲ್ಲ ಎಂದು ತಿಳಿಸಿದರು.
ಕೊಡಗಿನಲ್ಲಿ ಅವತ್ತು ನಾನು ತಿಂದಿಲ್ಲ. ವೀಣಾ ಅಚ್ಚಯ್ಯ ಅವರು ನಾಟಿಕೋಳಿಯ ಅಡುಗೆ ಮಾಡಿಕೊಂಡು ಬಂದಿದ್ದು ನಿಜ. ಆದರೆ ನಾನು ಕೇವಲ ಅಕ್ಕಿರೊಟ್ಟಿ ತಿಂದಿದ್ದೆ ಅಷ್ಟೇ. ಅಂದು ಅಲ್ಲಿನ ಜನರೇ ನನ್ನನ್ನು ದೇವಸ್ಥಾನಕ್ಕೆ ಆಹ್ವಾನಿಸಿದ್ದರು. ಹೀಗಾಗಿ ಹೋಗಿದ್ದೆ. ಯಾರ ಭಾವನೆಗೂ ಧಕ್ಕೆ ತರುವುದು ನನ್ನ ಉದ್ದೇಶವಲ್ಲ ಎಂದರು. ಆದರೆ ನಾನು ಮಾಂಸಾಹಾರಿ. ಮಾಂಸಾಹಾರ ಸೇವಿಸಿದರೆ ತಪ್ಪೇನು ಎಂದು ವಾದಕ್ಕಾಗಿ ಪ್ರಶ್ನಿಸಿದ್ದೆ ಎಂದು ಹೇಳಿದರು.