ಬೆಂಗಳೂರು,ಫೆ.3- ವಿಧಾನಸಭೆ ಚುನಾವಣೆಯ ತಯಾರಿ ಭಾಗವಾಗಿ ಕಾಂಗ್ರೆಸ್ ನಾಯಕರು ಇಂದಿನಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆ ಆರಂಭಿಸಿದ್ದು, ಉತ್ತರ ಹಾಗೂ ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರತ್ಯೇಕ ರಣಕಹಳೆ ಮೊಳಗಿಸಲಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಇಂದಿನಿಂದ ಫೆ.13ರವರೆಗೆ ಬೀದರ್, ಕಲಬುರಗಿ, ವಿಜಯಪುರ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಯಾತ್ರೆ ನಡೆಸಲಿದ್ದಾರೆ.
ಇಂದು ಜಗಜ್ಯೋತಿ ಬಸವೇಶ್ವರರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ್ಪಕ್ಕೆ ಭೇಟಿ ನೀಡಿ ಬಸವೇಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ವಿಧಾನಮಂಡಲದ ಅಧಿವೇಶನವನ್ನೂ ಲೆಕ್ಕಿಸದೆ ಸಿದ್ದರಾಮಯ್ಯ ಪ್ರತಿ ದಿನ ಎರಡು ಕ್ಷೇತ್ರಗಳಲ್ಲಿ ಯಾತ್ರೆ ಕೈಗೊಳ್ಳಲಿದ್ದಾರೆ.
ಸಿದ್ದರಾಮಯ್ಯ ಅವರ ತಂಡದಲ್ಲಿ ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕರಿದ್ದಾರೆ. ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದಲ್ಲಿ ಸಿದ್ದರಾಮಯ್ಯ ಮೊದಲ ಹಂತದ ಯಾತ್ರೆ ಪೂರ್ಣಗೊಳಿಸಿದ ಬಳಿಕ ಉತ್ತರ ಕರ್ನಾಟಕ ಭಾಗಕ್ಕೆ ತೆರಳಲಿದ್ದಾರೆ. ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದಿನಿಂದ ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದಿಂದ ಆರಂಭಿಸಿದ್ದಾರೆ.
ಕರ್ನಾಟಕ-ಆಂಧ್ರಪ್ರದೇಶ ರಾಜ್ಯಗಳ ನಡುವೆ ಅಂತರರಾಜ್ಯ ಸಾರಿಗೆ ಒಪ್ಪಂದ
ಕುರುಡುಮಲೆಯಲ್ಲಿರುವ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಡಿ.ಕೆ.ಶಿವಕುಮಾರ್ ತಂಡದ ಯಾತ್ರೆ ಆರಂಭಗೊಂಡಿದೆ. ಕೋಲಾರ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ತಂಡ ಯಾತ್ರೆ ನಡೆಸಲಿದೆ. ಈ ತಂಡ ಕೂಡ ದಿನಕ್ಕೆ ಎರಡು ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ನಡೆಸಲಿದೆ. ಬಳಿಕ ಕಲ್ಯಾಣ ಕರ್ನಾಟಕ, ಕಿತ್ತೂರು ಭಾಗದಲ್ಲಿ ಯಾತ್ರೆ ಮುಂದುವರೆಯಲಿದೆ.
Congress, Praja Dhwani, Yatra, Siddaramaiah, dk shivakumar,