ಫೆ.3ರಿಂದ ಕಾಂಗ್ರೆಸ್‍ನ 2ನೇ ಹಂತದ ಪ್ರಜಾಧ್ವನಿ ಯಾತ್ರೆ

Social Share

ಬೆಂಗಳೂರು,ಜ.29- ಮೊದಲ ಹಂತದ ಪ್ರಜಾಧ್ವನಿ ಈ ತಿಂಗಳ ಅಂತ್ಯಕ್ಕೆ ಮುಕ್ತಾಯಗೊಳ್ಳಲಿದ್ದು, ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿ ಇಬ್ಬರು ಪ್ರಮುಖ ನಾಯಕರು ತಂಡದೊಂದಿಗೆ ಫೆಬ್ರವರಿ 3ರಿಂದ ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ.

ನಿಗದಿಯಂತೆ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕದ ಗಡಿ ಜಿಲ್ಲೆ ಬೀದರ್‍ನ ಜಿಲ್ಲೆಯ ಬಸವಕಲ್ಯಾಣ ಕ್ಷೇತ್ರದಿಂದ, ಡಿ.ಕೆ.ಶಿವಕುಮಾರ್ ಕೋಲಾರದ ಮುಳಬಾಗಿಲು ಕ್ಷೇತ್ರದಿಂದ ಯಾತ್ರೆ ಆರಂಭಿಸಲಿದ್ದಾರೆ. ಈ ಎರಡು ಕ್ಷೇತ್ರಗಳು ಧಾರ್ಮಿಕ ನಂಬಿಕೆಗಳೊಂದಿಗೆ ಬೇರೆತಿದ್ದು, ಅಲ್ಲಿಂದಲೇ ಯಾತ್ರೆ ಆರಂಭಿಸುತ್ತಿರುವುದು ವಿಶೇಷವಾಗಿದೆ. ಮೊದಲ ಹಂತದಲ್ಲಿ ಇಬ್ಬರು ನಾಯಕರು ರಾಜ್ಯಾಧ್ಯಂತ 20 ಜಿಲ್ಲೆಗಳಲ್ಲಿ ಜಂಟಿ ಬಸ್ ಯಾತ್ರೆ ನಡೆಸಿದ್ದಾರೆ. ಎರಡನೇ ಹಂತದ ಪ್ರಜಾಧ್ವನಿ ಯಾತ್ರೆಯಲ್ಲಿ ಪ್ರತ್ಯೇಕವಾಗಿ ತಮ್ಮ ತಮ್ಮ ತಂಡದೊಂದಿಗೆ ಮತಭೇಟೆಗಿಳಿಯಲಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಫೆ.3ರಿಂದ 9ರವರೆಗೆ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಲ್ ನಲ್ಲಿರುವ ಕುರುಡುಮಲೆಯ ಮಹಾಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಯಾವುದೇ ಕಾರ್ಯಕ್ರಮ ಆರಂಭಿಸುವುದರಿಂದ ಶುಭವಾಗಲಿದೆ ಎಂಬ ನಂಬಿಕ ರಾಜಕೀಯ ಪಕ್ಷಗಳಲ್ಲಿ ಬಲವಾಗಿದೆ.

ದೇಶದ ಜನರ ನಡುವೆ ಬಿರುಕು ಮೂಡಿಸುವ ಯತ್ನಗಳು ನಡೆಯುತ್ತಿವೆ, ಎಚ್ಚರದಿಂದಿರಿ : ಮೋದಿ

ಹಾಗಾಗಿ ಡಿ.ಕೆ.ಶಿವಕುಮಾರ್ ಅವರು ಫೆ.3ರಂದು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮುಳಬಾಗಲ್ ವಿಧಾನಸಭಾ ಕ್ಷೇತ್ರದ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ ಕೆ.ಜಿ.ಎಫ್ ಕ್ಷೇತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಮಾರನೆಯ ದಿನ ಮಾಲೂರು ಮತ್ತು ದೇವನಹಳ್ಳಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಫೆ.5ರಂದು ಪ್ರಜಾಧ್ವನಿ ಯಾತ್ರೆಗೆ ಬಿಡುವು ನೀಡಲಿದ್ದಾರೆ. ಫೆ.6ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮೂರು ಕ್ಷೇತ್ರಗಳಲ್ಲಿ, ಫೆ.7ರಂದು ಹೊಳಲ್ಕೆರೆ, ಹೊಸದುರ್ಗ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಫೆ.8ರಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ, ಸೊರಬ, ಸಾಗರ ಕ್ಷೇತ್ರಗಳಲ್ಲಿ, ಫೆ.9ರಂದು ತೀರ್ಥಹಳ್ಳಿ, ಭದ್ರಾವತಿ ಕ್ಷೇತ್ರಗಳ ಪ್ರಜಾಧ್ವನಿ ಯಾತ್ರೆ ಕಾಂಗ್ರೆಸ್ ತಂಡದೊಂದಿಗೆ ನಡೆಯಲಿದೆ.

ಸಿದ್ದರಾಮಯ್ಯ ಫೆಬ್ರವರಿ 3ರಂದು ಜಗಜ್ಯೋತಿ ಬಸವೇಶ್ವರದ ಕರ್ಮಭೂಮಿ ಬೀದರ್‍ನ ಬಸವಕಲ್ಯಾಣದಿಂದ ಪ್ರಜಾಧ್ವನಿ ಯಾತ್ರೆ ಶುರು ಮಾಡಲಿದ್ದಾರೆ. ಅಲ್ಲಿನ ಅನುಭವ ಮಂಟಪಕ್ಕೆ ಭೇಟಿ ನೀಡಿ ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಿ, ಬಸವಕಲ್ಯಾಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ನಂತರ ಬಾಲ್ಕಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂಜೆ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಮಾರನೆಯ ದಿನ ಬಾಲ್ಕಿಯಿಂದ ಔರಾದ್‍ಗೆ ಆಗಮಿಸಿ ಅಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಬೀದರ್, ಹುಮ್ನಾಬಾದ್ ಕ್ಷೇತ್ರಗಳಲ್ಲಿ ಸಂಚರಿಸಿ ಕಲಬುರಗಿಗೆ ಭೇಟಿ ನೀಡಿ ವಾಸ್ತವ್ಯ ಹೂಡಲಿದ್ದಾರೆ.

ಫೆ.5ರಂದು ಬೆಳಗ್ಗೆ ಕಲಬುರಗಿಯಿಂದ ಹೆಲಿಕಾಫ್ಟರ್ ಮೂಲಕ ಹೂವಿನಹಡಗಲಿಗೆ ಭೇಟಿ ನೀಡಿ ಮೈಲಾರದಲ್ಲಿನ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ವಾಪಾಸ್ ಕಲಬುರಗಿಗೆ ವಾಪಾಸಾಗಲಿದ್ದು, ಮಾರನೇಯ ದಿನ ಕಲಬುರಗಿ ಗ್ರಾಮೀಣ, ಚಿಂಚೋಳಿ, ಸೇಡಂ ಕ್ಷೇತ್ರಗಳ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಫೆ.7ರಂದು ಆಳಂದ, ಅಫ್ಜಲ್‍ಪುರ, ಜೇವರ್ಗಿಗಳಲ್ಲಿ, ಫೆ.8ರಂದು ಚಿತ್ತಾಪೂರ ಕ್ಷೇತ್ರಗಳಲ್ಲಿ ಬಹಿರಂಗ ಸಮಾವೇಶಗಳಲ್ಲಿ, ಫೆ.10ರಂದು ಸುರಪೂರ, ಶಹಪೂರ, ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಲ್ಲಿ, ಫೆ.11ರಂದು ಸಿಂಧಗಿ, ಇಂಡಿ, ನಾಗಠಾಣ ಕ್ಷೇತ್ರಗಳ ಸಾರ್ವಜನಿಕ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಮೂರು ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಒಟ್ಟು ಏಳು ದಿನ ಪ್ರವಾಸ ಕೈಗೊಳ್ಳಲಿದ್ದಾರೆ.ಈ ನಡುವೆ ಬೆಂಗಳೂರಿಗೆ ವಾಪಾಸ್ಸಾಗಿ ಫೆ.9ರಂದು ದಾವಣಗೆರೆ ರಾಜನಹಳ್ಳಿಯಲ್ಲಿ ಆಯೋಜಿಸಿರುವ ರಾಜನಹಳ್ಳಿ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆ.12ರಂದು ಕಿತ್ತೂರು ಕರ್ನಾಟಕ ಭಾಗದ ವಿಜಪುರ ಜಿಲ್ಲೆಯ ಬಬಲೇಶ್ವರ, ದೇವರಹಿಪ್ಪರಗಿ, ಬಸವನಬಾಗೇವಾಡಿ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಲಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸಿ ವಿಧಾನಸಭೆಯ ಕಲಾಪದಲ್ಲಿ ಫೆ.13ರಿಂದ ಭಾಗವಹಿಸಲಿದ್ದಾರೆ.

ಸಿದ್ದರಾಮಯ್ಯ ಅವರ ತಂಡದಲ್ಲಿ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಅಲ್ಲಂ ವೀರಭದ್ರಪ್ಪ, ಎಸ್.ಆರ್.ಪಾಟೀಲ್, ಎನ್.ಎಸ್.ಬೋಸರಾಜ್, ಝಮೀರ್ ಅಹ್ಮದ್‍ಖಾನ್, ಎಚ್.ಸಿ.ಮಹದೇವಪ್ಪ, ಆರ್.ಬಿ.ತಿಮ್ಮಾಪುರ್, ವಿನಯ್ ಕುಲಕರ್ಣಿ, ಪ್ರಿಯಾಂಕ್ ಖರ್ಗೆ, ವಿ.ಎಸ್.ಉಗ್ರಪ್ಪ, ಕೆ.ಬಿ.ಕೋಳಿವಾಡ, ಶರಣ ಪ್ರಕಾಶ್ ಪಾಟೀಲ್, ಸಂತೋಷ್ ಲಾಡ್, ಶಿವಾನಂದ ಪಾಟೀಲ್, ಅಬ್ದುಲ್ ಜಬ್ಬಾರ್, ಸಿ.ಎಸ್.ನಾಡಗೌಡ, ಪ್ರಕಾಶ್ ಹುಕ್ಕೇರಿ, ಬೈರತಿ ಸುರೇಶ್, ಅಂಜಲಿ ನಿಂಬಾಳ್ಕರ್, ಉಮಾಶ್ರೀ, ಲಕ್ಷ್ಮೀ ಹೆಬ್ಬಾಳ್ಕರ್, ಪಿ.ಎಂ.ಅಶೋಕ್, ಕೆ.ಎಸ್.ಎಲ್.ಸ್ವಾಮಿ, ಐ.ಜಿ.ಸನ್ನದಿ, ಎಸ್.ಎಸ್.ಮಲ್ಲಿಕಾರ್ಜುನ್, ರಹಿಂಖಾನ್, ಆಂಜನೇಯ, ನಾಸೀರ್ ಅಹಮ್ಮದ್, ಪಿ.ಟಿ.ಪರಮೇಶ್ವರ್ ನಾಯಕರ್, ಇ.ತುಕರಾಮ್, ಶರಣಪ್ಪ ಸುಣಗಾರ, ರಾಜಶೇಖರ್ ಪೈಲ್ ಹುಮ್ನಾಬಾದ್ ಸೇರಿದಂತೆ ಇನ್ನಿತರರು ಇರಲಿದ್ದಾರೆ. ವಿಧಾನಸಭೆ ಅವೇಶನದ ಬಳಿಕ ಇಬ್ಬರು ನಾಯಕರು ಭೌಗೋಳಿಕವಾಗಿ ಅದಲು ಬದಲಾಗಿ ಪ್ರವಾಸ ನಡೆಸಲಿದ್ದಾರೆ.

#Congress, #PrajaDwaniYatra, #AssemblyElection2023,

Articles You Might Like

Share This Article