ನವದೆಹಲಿ,ಸೆ.29-ಐತಿಹಾಸಿಕ ಹಿನ್ನೆಲೆಯುಳ್ಳ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ರ್ಪಧಿಸಲು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನಾಮಪತ್ರ ಪಡೆದುಕೊಂಡಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರಗಳ ಸಲ್ಲಿಕೆಯಾಗಲಿದೆ. ಅ.1ರಂದು ನಾಮಪತ್ರಗಳ ಪರಿಶೀಲನೆಯಾಗಲಿದ್ದು, ನಾಮಪತ್ರ ಹಿಂಪಡೆಲು ಅ.8 ಕೊನೆಯ ದಿನವಾಗಿದೆ.
ಒಂದಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರೆ ಅ.17ರಂದು ಬೆಳಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಅ.19ರಂದು ಫಲಿತಾಂಶ ಪ್ರಕಟವಾಗಲಿದೆ. ಪಕ್ಷದ ನೂತನ ಅಧಿನಾಯಕನ ಆಯ್ಕೆಗಾಗಿ ನಡೆಯುತ್ತಿರುವ ಈ ಪ್ರಕ್ರಿಯೆ ಹಲವು ಬೆಳವಣಿಗೆಗಳಿಗೆ ಕಾರಣವಾಗಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್ ಇತ್ತೀಚೆಗೆ ರಾಷ್ಟ್ರ ರಾಜಕಾರಣದಲ್ಲಿ ಹೆಚ್ಚು ಸಕ್ರಿಯವಾಗಿ ಕಾಣಿಸಿಕೊಂಡಿದ್ದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ವಿಚಾರಣೆಗೊಳಪಡಿಸಿದಾಗ, ಅಶೋಕ್ ಗೆಲ್ಹೋಟ್ ಪ್ರಮುಖ ವೇದಿಕೆಗಳಲ್ಲಿ ನಿಂತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಆ ಬಳಿಕ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಬಿಂಬಿಸಲಾಗಿತ್ತು. ಗಾಂಧಿ ಕುಟುಂಬ ಅಶೋಕ್ ಗೆಲ್ಹೋಟ್ ಅವರಿಗೆ ಬೆಂಬಲ ವ್ಯಕ್ತಪಡಿಸಿತ್ತು. ಆದರೆ ಬದಲಾದ ಬೆಳವಣಿಗೆಯಲ್ಲಿ ಅಶೋಕ್ ಗೆಲ್ಹೋಟ್ ಅವರಿಂದ ತೆರವಾಗುವ ರಾಜಸ್ಥಾನದ ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಹೈಕಮಾಂಡ್ ಯುವಕ ನಾಯಕ ಸಚಿನ್ ಪೈಲೆಟ್ ಅವರನ್ನು ಕೂರಿಸುವ ಉಮೇದಿನಲ್ಲಿದ್ದು, ಗೆಲ್ಹೋಟ್ ಅವರಿಗೆ ಇಷ್ಟವಾಗಲಿಲ್ಲ.
ಹೀಗಾಗಿ ರಾಜಸ್ಥಾನದಲ್ಲಿ 92 ಕಾಂಗ್ರೆಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಡಾಯ ಸಾರಿದರು. 2020ರ ಜುಲೈನಲ್ಲಿ ಅಶೋಕ್ ಗೆಲ್ಹೋಟ್ ವಿರುದ್ಧ ಸಚಿನ್ ಪೈಲೆಟ್ ಬಂಡಾಯ ಸಾರಿದ್ದನ್ನು ಸ್ಮರಿಸಿಕೊಂಡ ಕಾಂಗ್ರೆಸ್ ಶಾಸಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಸಚಿನ್ ಪೈಲೆಟ್‍ರನ್ನು ಮುಖ್ಯಮಂತ್ರಿ ಮಾಡಬಾರದು ಎಂದು ಪಟ್ಟು ಹಿಡಿದಿದ್ದಾರೆ.
ಈ ಬಿಗುವಿನ ವಾತಾವರಣವನ್ನು ತಿಳಿಸಿಗೊಳಿಸಲು ಹೈಕಮಾಂಡ್ ಹರಸಾಹಸ ನಡೆಸಿದೆ. ಪಕ್ಷದ ವೀಕ್ಷಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಅಜಯ್ ಮಕೈನ್ ಅವರು ಪ್ರತಿಯೊಬ್ಬ ಶಾಸಕರೊಂದಿಗೂ ಸಮಾಲೋಚನೆ ನಡೆಸಲು ಯತ್ನಿಸಿದರಾದರೂ ಅದು ಪ್ರಯೋಜನವಾಗಿಲ್ಲ.
ಬಂಡಾಯ ಚಟುವಟಿಕೆಗೆ ಅಶೋಕ್ ಗೆಲ್ಹೋಟ್ ಅವರೇ ಕುಮ್ಮಕು ನೀಡಿದ್ದಾರೆ ಎಂಬ ಆರೋಪ ದಟ್ಟವಾದ ಹಿನ್ನೆಲೆಯಲ್ಲಿ ಎಐಸಿಸಿ ಹುದ್ದೆಗೆ ಗಾಂಧಿ ಕುಟುಂಬ ಪರ್ಯಾಯ ವ್ಯಕ್ತಿಯನ್ನು ನೇಮಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ದಿಗ್ವಿಜಯ್ ಸಿಂಗ್ ನಾಮಪತ್ರಗಳನ್ನು ಪಡೆದುಕೊಂಡಿದ್ದು ನಾಳೆ ಉಮೇದುವಾರಿಕೆ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೆ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿವೆ.
ಅಶೋಕ್ ಗೆಲ್ಹೋಟ್ ಅವರು ಎಐಸಿಸಿ ಅಧ್ಯಕ್ಷ ಸ್ಥಾನದ ರೇಸ್‍ನಿಂದ ಹಿಂದೆ ಸರಿದಿರುವ ಬಗ್ಗೆ ಈವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಹೀಗಾಗಿ ಅವರ ನಿಲುವು ಕುತೂಹಲ ಕೆರಳಿಸಿದೆ. ಮುಕುಲ್ ವಾಸ್ಮಿಕ್ ಅವರು ಜೋದ್‍ಪುರ್ ಹೌಸ್‍ನಲ್ಲಿ ಗೆಲ್ಹೋಟ್‍ರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆ.ಸಿ.ವೇಣುಗೋಪಾಲ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಹಿರಿಯ ನಾಯಕ ಎ.ಕೆ.ಆ್ಯಂಟನಿಯವರು ತಾರೀಕ್ ಅನ್ವರ್ ಅವರನ್ನು ಭೇಟಿ ಮಾಡಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಹಲವಾರು ಹೆಸರುಗಳು ಕೇಳಿಬಂದಿವೆ. ಅದರಲ್ಲಿ ಪ್ರಮುಖವಾಗಿ ಶಶಿ ತರೂರ್, ಮಲ್ಲಿಕಾರ್ಜುನ ಖರ್ಗೆ, ಎ.ಕೆ.ಆ್ಯಂಟನಿ, ಕಮಲನಾಥ್, ಅಂಬಿಕಾ ಸೋನಿ, ಪವನ್‍ಕುಮಾರ್ ಬನ್ಸವಾಲ್ ಸೇರಿದಂತೆ ಹಲವರನ್ನು ಉಲ್ಲೇಖಿಸಲಾಗಿದೆ. ಆದರೆ ಇದರಲ್ಲಿ ಬಹುತೇಕರು ಸ್ಪರ್ಧೆಗೆ ನಿರಾಸಕ್ತಿ ತೋರುತ್ತಿದ್ದಾರೆ.