ನಾಳೆ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆ ಖರ್ಗೆ, ತರೂರ್ ನಡುವೆ ಸ್ಪರ್ಧೆ

Social Share

ಬೆಂಗಳೂರು,ಅ.16- ಗಾಂಧಿ ಕುಟುಂಬದ ಹೊರತಾಗಿ ಪಕ್ಷದ ಅನಾಯಕತ್ವಕ್ಕೆ ನಾಳೆ ಚುನಾವಣೆ ನಡೆಯುತ್ತಿದ್ದು, ದೇಶಾದ್ಯಂತ ಸುಮಾರು 9 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಮತದಾನ ಮಾಡಲಿದ್ದಾರೆ. ಕರ್ನಾಟಕದವರೇ ಆದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೇರಳದ ಸಂಸದ ಶಶಿ ತರೂರ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಸೇರಿದಂತೆ ಗಾಂಧಿ ಕುಟುಂಬದ ಯಾರೂ ಸ್ಪರ್ಧೆ ಮಾಡುವುದಿಲ್ಲ ಎಂಬ ನಿರ್ಧಾರದ ಬಳಿಕ ಚುನಾವಣೆ ಸ್ವರೂಪವೇ ಬದಲಾಗಿದೆ.

ಅಬ್ಬರ, ಆಡಂಬರವಿಲ್ಲದೆ ಪ್ರಚಾರ ಮುಂದುವರೆದಿದೆ. ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಮಿಸ್ತ್ರಿ ನೇತೃತ್ವದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪಕ್ಷದ ಸಾಂಸ್ಥಿಕ ಚುನಾವಣಾ ಪ್ರಾಧಿಕಾರ ರಚನೆಯಾಗಿ ಪ್ರಕ್ರಿಯೆಗಳನ್ನು ನಡೆಸುತ್ತಿದೆ.

ಬ್ಲಾಕ್ ಕಾಂಗ್ರೆಸ್‍ನಿಂದ ತಲಾ ಒಬ್ಬರಂತೆ ಕೆಪಿಸಿಸಿ ಸದಸ್ಯರು ಚುನಾಯಿತರಾಗಿದ್ದಾರೆ. ಅವರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ಕರ್ನಾಟಕದಲ್ಲಿ 500ಕ್ಕೂ ಹೆಚ್ಚು ಮಂದಿ ಮತದಾರರು ಇದ್ದಾರೆ. ಎಲ್ಲರಿಗೂ ಕೆಪಿಸಿಸಿ ಕಚೇರಿಗೆ ಬಂದು ನಾಳೆ ಬೆಳಗ್ಗೆ 10ರಿಂದ 4 ಗಂಟೆಯ ನಡುವೆ ಮತ ಚಲಾವಣೆ ಮಾಡುವಂತೆ ಸೂಚಿಸಲಾಗಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಐಕ್ಯತಾ ಯಾತ್ರೆ ನಡೆಯುತ್ತಿದ್ದು, ಒಂದಿಷ್ಟು ಮಂದಿ ಪ್ರತಿನಿಧಿಗಳು ಭಾರತ ಮತ್ತು ರಾಜ್ಯದ ಯಾತ್ರಿಗಳಾಗಿ ಭಾಗವಹಿಸಿದ್ದಾರೆ. ಅವರ ಮತದಾನಕ್ಕೆ ಅನುಕೂಲವಾಗುವಂತೆ ನಾಳೆ ಬಳ್ಳಾರಿಯಲ್ಲೇ ಮತಗಟ್ಟೆ ಸ್ಥಾಪಿಸಲಾಗಿದೆ.

ಉಳಿದಂತೆ ಎಲ್ಲರಿಗೂ ಪಕ್ಷದ ಕೇಂದ್ರ ಕಚೇರಿಯಲ್ಲಿ ಮತದಾನಕ್ಕೆ ಸೂಚನೆ ನೀಡಲಾಗಿದೆ. ಅಖಿಲ ಭಾರತ ಮಟ್ಟದಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ತಮ್ಮ ತವರು ರಾಜ್ಯದಲ್ಲಿ ಅಥವಾ ದೆಹಲಿಯ ಎಐಸಿಸಿ ಕಚೇರಿಯಲ್ಲಿ ಮತದಾನ ಮಾಡಬೇಕು, ತಾವು ಉಸ್ತುವಾರಿ ನಿರ್ವಹಿಸುತ್ತಿರುವ ರಾಜ್ಯಗಳಲ್ಲಿನ ಮತದಾನ ಮಾಡಬಾರದು ಎಂದು ಚುನಾವಣಾ ಸಮಿತಿ ಸೂಚನೆ ನೀಡಿದೆ.

ನಾಳೆ ಚುನಾವಣೆ ಬಳಿಕ ಅ.19ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಬಹುತೇಕ ಮಲ್ಲಿಕಾರ್ಜುನ ಖರ್ಗೆ ಅವರ ಆಯ್ಕೆ ಖಚಿತ ಎನ್ನಲಾಗಿದೆ. ಆದರೆ ರಹಸ್ಯ ಮತದಾನವಾಗಿರುವುದರಿಂದ ಫಲಿತಾಂಶ ಪ್ರಕಟಗೊಳ್ಳುವವರೆಗೂ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಾಗಿದೆ.

ಮಲ್ಲಿಕಾರ್ಜುನ ಖರ್ಗೆ ಪರವಾಗಿ ಜಿ-23 ನಾಯಕರು ಸೇರಿದಂತೆ ಅನೇಕ ಮಂದಿ ಪ್ರಚಾರ ನಡೆಸಿದ್ದಾರೆ. ಕೆಲವರು ಪಕ್ಷದ ಪದಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರಚಾರ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ನಿಷ್ಪಕ್ಷಪಾತ ಮತ್ತು ಮುಕ್ತ ಚುನಾವಣೆಗಾಗಿ ಸಾಂಸ್ಥಿಕ ಪ್ರಾಧಿಕಾರ ಕ್ರಮ ಕೈಗೊಂಡಿದೆ.

Articles You Might Like

Share This Article