ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ರಣಕಹಳೆ, ದೆಹಲಿಯ ಬೃಹತ್ ಹೋರಾಟ

Social Share

ನವದೆಹಲಿ,ಸೆ.4- ಬೆಲೆ ಏರಿಕೆ, ನಿರುದ್ಯೋಗದಂತಹ ಸಮಸ್ಯೆಗಳ ವಿರುದ್ಧ ರಣಕಹಳೆ ಮೊಳಗಿಸಿರುವ ಕಾಂಗ್ರೆಸ್ ದೆಹಲಿಯಲ್ಲಿಂದು ಬೃಹತ್ ಹೋರಾಟ ನಡೆಸಿದೆ.

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂದು ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ದೇಶದ ವಿವಿಧ ಭಾಗಗಳಿಂದ ಕಾರ್ಯಕರ್ತರು, ಪ್ರಮುಖ ನಾಯಕರು ಭಾಗವಹಿಸಿದ್ದರು.
ಜಾರಿ ನಿರ್ದೇಶನಾಲಯದ ದಾಳಿಯ ಒತ್ತಡದ ಹೊರತಾಗಿಯೂ ಕಾಂಗ್ರೆಸ್ ಮೈಕೊಡವಿ ನಿಂತಿದ್ದು, ಜನಸಾಮಾನ್ಯರನ್ನು ಹಿಂಡಿಹಿಪ್ಪೇ ಮಾಡುತ್ತಿರುವ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕೇಂದ್ರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದೆ.

ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಗತ್ಯ ವಸ್ತುಗಳ ಮೇಲೆ ಜಿಎಸ್‍ಟಿ ಹೇರಿಕೆ, ಹಣದುಬ್ಬರ, ಬ್ಯಾಂಕ್ ಬಡ್ಡಿದರ ಹೆಚ್ಚಳ, ನಿರುದ್ಯೋಗದ ಸಮಸ್ಯೆ ಸೇರಿದಂತೆ ಹಲವು ಗಂಭೀರ ವಿಚಾರಗಳನ್ನು ಮುಂದಿಟ್ಟುಕೊಂಡು ಇಂದು ಕಾಂಗ್ರೆಸ್ ಬೀದಿಗಿಳಿದಿದೆ.

ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದಾಗಿ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪುತ್ರಿ ಪ್ರಿಯಾಂಕ ವಾದ್ರಾ ಕೂಡ ತಾಯಿಯೊಂದಿಗೆ ಉಳಿದಿದ್ದಾರೆ. ಅಲ್ಲೇ ಇದ್ದ ರಾಹುಲ್ ಗಾಂಧಿ ಭಾರತಕ್ಕೆ ಮರಳಿದ್ದು, ಇಂದು ಬೆಳಗ್ಗೆ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಮೆಹಾಂಗಾಯೆ ಪರ್ ಹಲ್ಲಾ ಬೋಲ್ ಹೆಸರಿನ ಈ ರ್ಯಾಲಿಯಲ್ಲಿ ದಿನ ಬಳಕೆಯ ವಸ್ತುಗಳು ದುಬಾರಿಯಾಗಿದೆ. ಇದು ಮೋದಿ ಸರ್ಕಾರದ ಕೊಡುಗೆ ಎಂದು ಘೋಷಣೆಗಳನ್ನು ಕೂಗಲಾಗಿದೆ.

ಹಣದುಬ್ಬರು ಪ್ರತಿ ತಿಂಗಳು ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಜನಸಾಮಾನ್ಯರ ಜೀವನ ದುಸ್ತರವಾಗಿದೆ. ಸಹಿಷ್ಣುತಾ ಮಟ್ಟವನ್ನು ಮೀರಿ ಬೆಲೆ ಏರಿಕೆ ಮಾಡಲಾಗಿದ್ದು, ಬಡ ಮತ್ತು ಮಧ್ಯಮವರ್ಗದವರು ಹೈರಾಣಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.
2021ರಲ್ಲಿ ನಿರುದ್ಯೋಗದಿಂದಾಗಿ 11,724 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020ಕ್ಕಿಂತಲೂ ಇದು ಶೇ.26ರಷ್ಟು ಹೆಚ್ಚಾಗಿದೆ.

ಒಂದು ಕಾಲದಲ್ಲಿ ಬಿಜೆಪಿ ಮತ್ತು ಮೋದಿಯನ್ನು ಬೆಂಬಲಿಸಿ ಘೋಷಣೆ ಕೂಗಿದ ಯುವ ಸಮುದಾಯ ಈಗ ನಿರುದ್ಯೋಗದಿಂದ ಪರದಾಡುವಂತಾಗಿದೆ ಎಂದು ನಾಯಕರು ವಾಗ್ದಾಳಿ ನಡೆಸಿದ್ದಾರೆ.
2014ರಲ್ಲಿ ಯುಪಿಎ ಸರ್ಕಾರ ನಿರ್ಗಮನದ ವೇಳೆ ಇದ್ದ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಮತ್ತು ಈಗಿನ ಬೆಲೆಯೊಂದಿಗೆ ತಾಳೆ ಹಾಕಿ ಎಲ್ಲೆಡೆ ಪೋಸ್ಟರ್‍ಗಳನ್ನು ಅಂಟಿಸಲಾಗಿದೆ.

2014ರಲ್ಲಿ 55.49 ರೂ. ಇದ್ದ ಡೀಸೆಲ್ ಈಗ 89.62 ರೂ.ಗೆ ಏರಿಕೆಯಾಗಿದೆ. 410 ರೂ. ಇದ್ದ ಅಡುಗೆ ಅನಿಲ 1053ಕ್ಕೆ ಏರಿಕೆಯಾಗಿದೆ. ಪೆಟ್ರೋಲ್ ಬೆಲೆ 101 ರೂ. ದಾಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಚ್ಚಾ ತೈಲದ ಬೆಲೆ ಕಡಿಮೆಯಾಗುತ್ತಿದ್ದರೂ ಕೂಡ ದೇಶೀಯವಾಗಿ ಇಂಧನದ ಬೆಲೆಯನ್ನು ಇಳಿಕೆ ಮಾಡದ ಕೇಂದ್ರ ಸರ್ಕಾರ ಜನವಿರೋ ನೀತಿಯನ್ನು ಅನುಸರಿಸುತ್ತಿದೆ ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಗತ್ಯವಸ್ತುಗಳ ಬೆಲೆ ಗಗನ ಮುಟ್ಟಿದೆ. ಜನರ ಆದಾಯ ಹೆಚ್ಚಳವಾಗಿಲ್ಲ. ಇದರ ನಡುವೆ ಕೇಂದ್ರ ಸರ್ಕಾರ ಅಗತ್ಯವಸ್ತುಗಳ ಮೇಲೆ ಜಿಎಸ್‍ಟಿಯನ್ನು ವಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂಬ ಆರೋಪಗಳನ್ನು ಮಾಡಲಾಗಿದೆ.

ಕಾಂಗ್ರೆಸ್‍ನ ಎಲ್ಲ ರಾಜ್ಯ ಘಟಕಗಳ ಮುಖಂಡರು ಉತ್ತರಪ್ರದೇಶ, ಪಂಜಾಬ್, ಹರಿಯಾಣ, ದೆಹಲಿ ಭಾಗದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ತರಕಾರಿಗಳ ಹಾರ ಹಾಕಿಕೊಂಡು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಡುಗೆ ಅನಿಲ ಸಿಲಿಂಡರ್ ಮೇಲೆ ಸೌದೆ ಒಲೆಯಿಟ್ಟು ಲೇವಡಿ ಮಾಡಿದರು. ಎತ್ತಿನಗಾಡಿಯಲ್ಲಿ ಬೈಕ್ ಹಾಗೂ ಇತರೆ ವಾಹನಗಳನ್ನು ಸಾಗಾಣಿಕೆ ಮಾಡುವ ಪ್ರದರ್ಶನಗಳು ನಡೆದವು.

Articles You Might Like

Share This Article